ವಿಜಯಪುರ: ವಕ್ಫ್ ಮಂಡಳಿ ಅಧ್ಯಕ್ಷ ಸ್ಥಾನದ ಆಯ್ಕೆ ವಿಚಾರದಲ್ಲಿ ಸಚಿವ ಬಿ.ಝಡ್. ಜಮೀರ್‌ಅಹ್ಮದ್ ನಡೆದುಕೊಳ್ಳುವ ರೀತಿಗೆ ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಅಸಮಾಧಾನ ಹೊರಹಾಕಿದ್ದಾರೆ.
ವಕ್ಫ್ ವಿಚಾರದಲ್ಲಿ ಸಚಿವ ಜಮೀರ್ ನಡೆದುಕೊಳ್ಳುತ್ತಿರುವ ರೀತಿ ಸರಿಯಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಗೆ ಅವರ ನಿರ್ಧಾರ ಮಾರಕವಾಗಿದೆ. ವಕ್ಫ್ ಎಂಬುದು ಮನೆಯ ವಿಚಾರವಲ್ಲ. ಸಮುದಾಯದ ವಿಚಾರವಾಗಿದ್ದು, ಯಾವುದೇ ನಿರ್ಧಾರ ತೆಗೆದುಕೊಳ್ಳಬೇಕಾದರೆ ಅಳೆದು ತೂಗಿ ತೆಗೆದುಕೊಳ್ಳಬೇಕೆಂದು ಅಲ್ಪಸಂಖ್ಯಾತ ಮುಖಂಡರಾದ ಎಲ್.ಎಲ್. ಉಸ್ತಾದ್, ಬಿ.ಎಚ್. ಮಹಾಬರಿ, ಜೈನುಲ್ಲಾಬುದ್ದೀನ್ ಹಾಶ್ಮೀ, ಇರ್ಫಾನ್ ಶೇಖ್ ಮತ್ತಿತರರು ಗುರುವಾರ ಜಂಟಿ ಸುದ್ದಿಗೋಷ್ಠಿ ನಡೆಸಿದರು.
ಸಚಿವ ಜಮೀರ್‌ಅಹ್ಮದ್ ಬಡವರ ಬಗ್ಗೆ ಚಿಂತನೆ ಮಾಡುತ್ತಿಲ್ಲ, ಬಡವರ ಹಿತರಕ್ಷಣೆಗಾಗಿ ರಾಜಕೀಯ ಮಾಡಬೇಕು ಹೊರತು ವೈಯಕ್ತಿಕ ವಿಷಯಗಳಿಗೆ ರಾಜಕಾರಣ ಬಳಕೆ ಮಾಡಬಾರದು. ವಕ್ಫ್ ಮಂಡಳಿ ಅಧ್ಯಕ್ಷರ ನೇಮಕಾತಿಯಲ್ಲಿ ಪಾರದರ್ಶಕತೆ ಇರಬೇಕು. ಸಂವಿಧಾನದ ಚೌಕಟ್ಟಿನಲ್ಲಿ ಸಮಗ್ರವಾಗಿ ಚರ್ಚಿಸಿ ವಕ್ಸ್ ಮಂಡಳಿ ಅಧ್ಯಕ್ಷರನ್ನಾಗಿ ನೇಮಕ ಮಾಡಬೇಕು ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಸೇರಿದಂತೆ ಅನೇಕ ನಾಯಕರಿಗೆ ಮನವಿ ಮಾಡಬೇಕು ಎಂದರು.
ವಿಜಯಪುರದಲ್ಲಿ ಮೊನ್ನೆಯಷ್ಟೇ ವಕ್ಫ್ ಮಂಡಳಿ ಅಧಿಕಾರಿಯನ್ನು ಲೋಕಾಯುಕ್ತರು ಬಂಧಿಸಿದ್ದಾರೆ. ಅನೇಕ ಮಸೀದಿಗಳ ಸಮಿತಿ ನೋಂದಣಿಗೆ ಈ ಅಧಿಕಾರಿ ಅನೇಕ ರೀತಿಯ ತೊಂದರೆ ನೀಡುತ್ತಿದ್ದ, ಅಪಾರ ಪ್ರಮಾಣದ ಅಕ್ರಮ ಆಸ್ತಿ ಅಧಿಕಾರಿಯ ಮನೆಯಲ್ಲಿ ಪತ್ತೆಯಾಗಿದೆ. ಅಧಿಕಾರಿ ವರ್ತನೆ ಮೀತಿ ಮೀರಿತ್ತು, ವೈಯಕ್ತಿಕವಾಗಿ ಈ ವರ್ತನೆ ಬದಲಿಸಿಕೊಳ್ಳಿ ಎಂದು ಕಿವಿಮಾತು ಹೇಳಿದ್ದರೂ ದರ್ಪದಿಂದ ವರ್ತನೆ ಮಾಡಿದ್ದ ಎಂದು ಉಸ್ತಾದ ಹೇಳಿದರು.
ರೈತರ ಬಗ್ಗೆ ಕಾಂಗ್ರೆಸ್ ಕಾಳಜಿ ತೋರುತ್ತಿಲ್ಲ. ಕಾಂಗ್ರೆಸ್ ಕಾರ್ಯಕರ್ತನಾಗಿಯೇ ಸರ್ಕಾರದ ನಡೆಯನ್ನು ಟೀಕಿಸುತ್ತಿದ್ದೇನೆ, ರೈತರ ಬಗ್ಗೆ ಸರ್ಕಾರ ಕಾಳಜಿ ತೋರುತ್ತಿಲ್ಲ, ಭೂ-ಸ್ವಾಧೀನಕ್ಕೆ ಸಂಬಂಧಿಸಿದಂತೆ ರೈತರಿಗೆ ಪರಿಹಾರ ಧನ ನೀಡಲು ವಿಳಂಬವಾಗುತ್ತಿದೆ. ರೈತರು ತೀವ್ರ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ರೈತರಿಗೆ ನ್ಯಾಯಯುತವಾದ ದೊರಕಬೇಕಾದ ಹಣ ಅವರಿಗೆ ನೀಡುತ್ತಿಲ್ಲ ಎಂದು ಉಸ್ತಾದ ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದರು.
ಮುಖಂಡ ಹಾಫೀಜ್ ಸಿದ್ದಿಕಿ ಮತ್ತಿತರರಿದ್ದರು.