ಉಡುಪಿ ತಾಲೂಕಿನ ಹಿರಿಯಡ್ಕದ ಕರ್ನಾಟಕ ಪಬ್ಲಿಕ್​ ಸ್ಕೂಲ್​ನ ಮತಗಟ್ಟೆಯಲ್ಲಿ ಮತದಾನಕ್ಕಾಗಿ ಸರತಿ ಸಾಲಿನಲ್ಲಿ ನಿಂತಿದ್ದ ಮಹಿಳಾ ಮತದಾರರು. 
ಜಿಲ್ಲೆ

ಉಡುಪಿ ಜಿಲ್ಲೆಯ ಶಾಲೆಗಳಲ್ಲಿ ಹಿರಿ-ಕಿರಿಯರ ಮತಜಾತ್ರೆ

ಲೋಕಸಭಾ ಅಭ್ಯರ್ಥಿಗಳ ಭವಿಷ್ಯ ಬರೆದ ಮತದಾರ -- ಯಾರಿಗೆ ಗೆಲುವು ನೀಡಲಿದೆ ಶುಕ್ರವಾರ..?

ವಿಜಯವಾಣಿ ಸುದ್ದಿಜಾಲ ಉಡುಪಿ
ಮೊದಲ ಹಂತದ ಲೋಕಸಭಾ ಚುನಾವಣೆಯ ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಏ.26ರಂದು ನಡೆದ ಚುನಾವಣೆಯಲ್ಲಿ ಸಂಜೆ 6ಕ್ಕೆ ಉಡುಪಿ -ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಶೇ.76.06 ಆಗಿದ್ದು, ಸಂಜೆ 7 ಗಂಟೆಯ ವರೆಗೂ ಕೆಲ ಮತಗಟ್ಟೆಗಳಲ್ಲಿ ಮತದಾನ ಮುಂದುವರಿದಿತ್ತು. ರಾತ್ರಿ 10:30ರಂದ ಬಳಿಕ ಶೇಕಡ ಮತದಾನದ ಸ್ಪಷ್ಟ ಮಾಹಿತಿ ಲಭಿಸಲಿದೆ. 2019ರಲ್ಲಿ ಶೇ.76.28 ಮತದಾನವಾಗಿತ್ತು.

8 ವಿಧಾನಸಭಾ ಕ್ಷೇತ್ರದ ಒಟ್ಟು 1,842 ಮತಗಟ್ಟೆಗಳಲ್ಲಿ ಬೆಳಗ್ಗೆ 7 ಗಂಟೆಗೆ ಮತದಾನ ಪ್ರಕ್ರಿಯೆ ಆರಂಭಗೊಂಡಿತು. ಪ್ರಥಮ ಬಾರಿಗೆ ಮತಚಲಾಯಿಸುವ ಯುವ ಮತದಾರರು ಹಾಗೂ ಹಿರಿಯ ಮತದಾರರು ಸ್ವಯಂ ಪ್ರೇರಣೆಯಿಂದ ತಮ್ಮ ಹಕ್ಕು ಚಲಾಯಿಸಿ ಸಂಭ್ರಮಿಸಿದರು.

ಜಿಲ್ಲಾ ಚುನಾವಣಾ ಆಯೋಗದ ಸಿದ್ಧತೆಯ ಅನುಸಾರವಾಗಿ ಜಿಲ್ಲೆಯ ಎಲ್ಲ ಮತಗಟ್ಟೆಗಳಲ್ಲೂ, ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಇರುವ ಮತಗಟ್ಟೆಯಲ್ಲೂ ಶಾಂತಿಯುತವಾಗಿ ಹಾಗೂ ಪಾರದರ್ಶಕವಾಗಿ ಮತದಾನ ನಡೆಯಿತು. ಬೆರಳೆಣಿಕೆಯಷ್ಟು ಮತಗಟ್ಟೆಗಳಲ್ಲಿ ಇವಿಎಂ ಆರಂಭಿಸಿದ ಬಳಿಕ ತಾಂತ್ರಿಕ ಲೋಪ-ದೋಷದಿಂದಾಗಿ ಅರ್ಧ ಗಂಟೆಯಿಂದ ಮುಕ್ಕಾಲು ಗಂಟೆ ವಿಳಂಬವಾಗಿ ಮತದಾನ ಕಾರ್ಯ ಆರಂಭಗೊಂಡಿತು.

ಬೆಳಗ್ಗೆ ಮತ ಅಬ್ಬರ

ಜಿಲ್ಲೆಯ ಬಹುತೇಕ ಎಲ್ಲ ಮತಗಟ್ಟೆಗಳಲ್ಲೂ ಬೆಳಗ್ಗೆ 7 ಗಂಟೆಯಿಂದಲೇ ಮತದಾರರು ಹಕ್ಕು ಚಲಾಯಿಸಲು ಜಮಾಯಿಸಿದ್ದರು. ದಿನವೂ ಬೆಳಗ್ಗೆ ವಾಕಿಂಗ್​ ಮಾಡುವ ಅಭ್ಯಾಸ ಹೊಂದಿರುವ ಬಹುತೇಕರು ಮತಗಟ್ಟೆಯತ್ತಲೇ ವಾಕಿಂಗ್​ಗೆ ತೆರಳಿ ಮತ ಚಲಾಯಿಸಿದರು. ಬೆಳಗ್ಗೆ 9 ಗಂಟೆಗೆ ಶೇ.13 ಮತದಾನವಾಗಿತ್ತು.

ಬಿಸಲ ಝಳ, 2 ಗಂಟೆ ಸ್ತಬ್ಧ

ಬಿರು ಬೇಸಿಗೆಯಲ್ಲಿ ಚುನಾವಣೆ ನಡೆಯುತ್ತಿರುವುದರಿಂದ ವಿಪರೀತ ಸೆಕೆ ಹಾಗೂ ಬಿಸಲ ಝಳದಿಂದಾಗಿ ಎಲ್ಲ ಮತಗಟ್ಟೆಗಳಲ್ಲೂ ಮಧ್ಯಾಹ್ನ 1:30ರಿಂದ 3 ಗಂಟೆಯವರೆಗೆ ಮತದಾನ ಮಂದ ಗತಿಯಲ್ಲಿತ್ತು. 32 ಡಿಗ್ರಿ ಸೆ. ತಾಪಮಾನ ಇತ್ತಲ್ಲದೆ ಅದು, 40 ಡಿಗ್ರಿ ಸೆ. ತಾಪಮಾನದ ಅನುಭವ ನೀಡುತ್ತಿತ್ತು. ಮಧ್ಯಾಹ್ನ ಊಟದ ಸಮಯವೂ ಆಗಿದ್ದರಿಂದ ಮತಗಟ್ಟೆಗಳಲ್ಲಿ ಮತದಾರರ ಸಂಖ್ಯೆ ತೀರ ವಿರಳವಾಗಿತ್ತು. ಆದರೂ ಮಧ್ಯಾಹ್ನ 3 ಗಂಟೆಯೊಳಗೆ ಜಿಲ್ಲೆಯಲ್ಲಿ ಶೇ. 57.49 ಮತದಾನವಾಗಿತ್ತು.

85 ವರ್ಷ ಮೇಲ್ಪಟ್ಟ ಹಿರಿಯರ ಹುಮ್ಮಸ್ಸು

ಮನೆಯಲ್ಲೇ ಮತದಾನ ಮಾಡುವ ಸೌಲಭ್ಯದ ವಂಚಿತರಾದವರು ಹಾಗೂ ಈ ಸೌಲಭ್ಯದ ಬಗ್ಗೆ ಮಾಹಿತಿಯೇ ಇಲ್ಲದ 85 ವರ್ಷ ಮೇಲ್ಪಟ್ಟ ಹಿರಿಯ ಮತದಾರರು ತಮ್ಮ ಅನಾರೋಗ್ಯವನ್ನೂ ಲೆಕ್ಕಿಸದೆ ಕುಟುಂಬದವರ ಸಹಕಾರದಲ್ಲಿ ಮತಗಟ್ಟೆಗೆ ವಾಹನಗಳ ಮೂಲಕ ಆಗಮಿಸಿ ಹುಮ್ಮಸ್ಸಿನಿಂದ ಮತ ಚಲಾಯಿಸಿದ್ದು ಕಂಡುಬಂತು. ಆಗಮಿಸಿದ ಹಿರಿಯರನ್ನು ವ್ಹೀಲ್​ಚೇರ್​ನಲ್ಲಿ ಕುಳ್ಳಿರಿಸಿ ಮತಗಟ್ಟೆಯೊಳಗೆ ಕರೆದೊಯ್ಯುವ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ ಅನೇಕ ಹಿರಿಯರು ವಾಕಿಂಗ್​ ಸ್ಟಿಕ್​ ಹಿಡಿದು ನಡೆದು ಬಂದೇ ಹಕ್ಕು ಚಲಾಯಿಸಿದರು. ಆಂಬುಲೆನ್ಸ್​ ಮೂಲಕವೂ ಆಗಮಿಸಿ ಮತ ಚಾಲಯಿಸಿದ್ದು ವಿಶೇಷವಾಗಿತ್ತು. ಅನೇಕ ಹಿರಿ-ಕಿರಿಯ ಅಂಗವಿಕಲರೂ ಮತ ಚಲಾಯಿಸಿದರು.

ಯುವ ಮತದಾರರ ಪ್ರಥಮ ಅನುಭವ

ಉಡುಪಿ-ಚಿಕ್ಕಮಗಳೂರು ಕ್ಷೇತ್ರದಲ್ಲಿ ಈ ಬಾರಿ 29,909 ಯುವ ಮತದಾರರಿದ್ದು, ತಮ್ಮ ಪ್ರಥಮ ಹಕ್ಕನ್ನು ಅತ್ಯಂತ ಸಂಭ್ರಮದಿಂದ ಚಲಾಯಿಸಿದರು. ಮನೆಯ ಹಿರಿಯ ಸದಸ್ಯರು, ತಂದೆ-ತಾಯಿಯೊಂದಿಗೆ ಆಗಮಿಸಿದ್ದ ಯುವಕ-ಯುವತಿಯರು ಮತ ಚಲಾಯಿಸಿ, ಸಂತಸಗೊಂಡರು.

ಮತದಾನಕ್ಕೆಂದೇ ಊರಿಗೆ ಬಂದರು

ಉದ್ಯೋಗದ ನಿಮಿತ್ತ ಪರ ಊರಿನಲ್ಲಿರುವ ಹಾಗೂ ಹೊರ ರಾಜ್ಯ-ದೇಶಗಳಲ್ಲಿರುವ ಮತದಾರರು ತಮ್ಮೂರಿಗೆ ಬಂದು ಮತ ಚಲಾಯಿಸಿದರು. ಮನೆಯ ಸದಸ್ಯರೆಲ್ಲ ಹಿರಿಯರೊಟ್ಟಿಗೆ ವಾಹನದಲ್ಲಿ ಬಂದು ಹಕ್ಕು ಚಲಾಯಿಸಿದರು.

ಹಸೆಮಣೆಗೇರುವ ಮೊದಲು ಮತಗಟ್ಟೆಗೆ

ಏಪ್ರಿಲ್​ ತಿಂಗಳು ಮದುವೆಯ ಸೀಸನ್​ ಸಹ ಇದ್ದು, ಏ.26ರಂದೇ ವಿವಾಹ ಇರುವ ಹಲವು ವಧು- ವರರ ಜೋಡಿಗಳು ಮದುವೆಯ ಗೆಟೆಪ್​ನಲ್ಲಿಯೇ ಮತಗಟ್ಟೆಗೆ ಬಂದು ಹಕ್ಕು ಚಲಾಯಿಸಿ, ಸಂಭ್ರಮಿಸಿದರು. ಮಧ್ಯಾಹ್ನ 2ನೇ ಹಂತದಲ್ಲಿ 5 ಗಂಟೆಗೆ ಶೇ.72.13 ಮತದಾನವಾಗಿತ್ತು.

ಗಮನ ಸೆಳೆದ ಸಖಿ ಮಾದರಿ ಮತಗಟ್ಟೆ

ಉಡುಪಿ ಜಿಲ್ಲೆಯಲ್ಲಿ ಒಟ್ಟು 20 ಸಖಿ ಮಾದರಿ ಮತಗಟ್ಟೆ ತೆರೆಯಲಾಗಿತ್ತು. ಎಲ್ಲ ಮಹಿಳಾ ಸಿಬ್ಬಂದಿಯೇ ಇರುವ ಈ ಮಾದರಿ ಮತಗಟ್ಟೆಯನ್ನು ಅತ್ಯಂತ ಆಕರ್ಷಣೀಯವಾಗಿ ಸಿಂಗರಿಸಲಾಗಿತ್ತು. ಇದಲ್ಲದೆ, ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಿಶೇಷ ಚೇತನರ ಮತಗಟ್ಟೆ, ಯುವಮತಗಟ್ಟೆ, ಸಾಂಪ್ರದಾಯಿಕ ಮತಗಟ್ಟೆ, ಸಂಸ್ಕೃತಿ ಬಿಂಬಿಸುವ ಮತಗಟ್ಟೆ ತೆರೆಯಲಾಗಿತ್ತು. ಸಖಿ ಮತಗಟ್ಟೆಗಳಲ್ಲಿ ತೆರೆಯಲಾಗಿದ್ದ ಚಿಣ್ಣರ ಅಂಗಳ ಹಾಗೂ ಸಖಿ ಸೆಲ್ಫಿ ಕಾರ್ನರ್​ ಗಮನ ಸೆಳೆಯಿತು.

ಒಬ್ಬರ ಮತದಾನಕ್ಕೆ 2ರಿಂದ 3 ನಿಮಿಷ

ಜಿಲ್ಲಾಡಳಿತ ಮತದಾನಕ್ಕೆ ಅಗತ್ಯ ಪೂರ್ವ ಸಿದ್ಧತೆ ಮಾಡಿಕೊಂಡ ಪರಿಣಾಮದಿಂದಾಗಿ ಈ ಬಾರಿ ಮತದಾನ ಪ್ರಕ್ರಿಯೆ ಸರಳಗೊಂಡಿತ್ತು. ಬಿಎಲ್​ಒಗಳು ಎರಡು ದಿನ ಮುಂಚಿತವಾಗಿಯೇ ಎಲ್ಲ ಮತದಾರರಿಗೂ ವೋಟರ್​ ಸ್ಲಿಪ್​ ನೀಡಿದ್ದರಿಂದ ಮತಗಟ್ಟೆಗೆ ಬರುವ ಮತದಾರರ ಹೆಸರನ್ನು ಮತಪಟ್ಟಿಯಲ್ಲಿ ಹುಡುಕುವುದು ಸುಲಭವಾಗಿತ್ತು. ಮತಗಟ್ಟೆಯೊಳಗೆ ಮತದಾರರ ಬರುತ್ತಿದ್ದಂತೆ ವೋಟರ್​ ಸ್ಲಿಪ್​ ಪಡೆದು ಪರಿಶೀಲನೆ, ಮತಗಟ್ಟೆ ಅಧಿಕಾರಿ ನೀಡಿದ ಖಚಿತತೆಯ ಸ್ಲಿಪ್​ಅನ್ನು ಇನ್ನೊಂದು ಟೇಬಲ್​ನಲ್ಲಿ ಕುಳಿತ ಅಧಿಕಾರಿಗೆ ನೀಡಿದ ಬಳಿಕ ಎಡಗೈನ ತೋರು ಬೆರಳಿಗೆ ಶಾಯಿ ಹಾಕಲಾಗುತ್ತದೆ. ಬಳಿಕ ಅನತಿ ದೂರದಲ್ಲಿರುವ ಎವಿಎಂನಲ್ಲಿ ಅಭ್ಯರ್ಥಿಗೆ ಮತಚಲಾಯಿಸಲು 7 ಸೆಕೆಂಡ್​ ಹಾಗೂ ಮತದಾನ ಮಾಡಿದ್ದು ಸರಿಯಾಗಿದೆಯೋ ಇಲ್ಲವೋ ಎಂದು ವಿವಿ ಪ್ಯಾಟ್​ ಮತದಾರನಿಗೆ ಖಚಿತ ಮಾಡಿಕೊಡಲು ಮತ್ತೆ 7 ಸೆಕೆಂಡ್​ ಕಾಯುವುದು ಹೀಗೆ ಒಟ್ಟು ಮೂರು ಸ್ಟೆಪ್​ಗಳಲ್ಲಿ ಒಬ್ಬರ ಮತದಾನಕ್ಕೆ ಕನಿಷ್ಠ 2ರಿಂದ ಗರಿಷ್ಠ 3 ನಿಮಿಷ ತಗುಲಿತ್ತು.

ಕ್ಷೇತ್ರದಲ್ಲಿ ಈಗ ಗೆಲುವಿನ ಚರ್ಚೆ

ಮತದಾನ ಮುಗಿದಿದೆ. ಈಗ ಗೆಲುವು ಯಾರಿಗೆ ಎಂಬ ಚರ್ಚೆ ಕ್ಷೇತ್ರದಲ್ಲಿ ಆರಂಭಗೊಂಡಿದೆ. ಅಭ್ಯರ್ಥಿಗಳಿಗೂ ಸಹ ತನ್ನ ಭವಿಷ್ಯ ಏನಾಗಿರಬಹುದು ಎಂಬ ಚಿಂತೆ ಮನದೊಳಗೆ ಸುಳಿಯುತ್ತಿದೆ. ಇನ್ನೂ ಒಂದು ತಿಂಗಳ ಕಾಲ ಸೋಲು-ಗೆಲುವಿನ ಫಲಿತಾಂಶಕ್ಕೆ ಕಾಯಬೇಕಿದೆ. ಜೂ.4ರಂದು ವಿಜಯ ಘೋಷಿಸಲಿರುವ ಮತಯಂತ್ರಗಳು ಸ್ಟ್ರಾಂಗ್​ ರೂಮ್​ ಸೇರಿವೆ. ಅಲ್ಲಿಯವರೆಗೂ ಸೋಲು-ಗೆಲುವಿನ ಅಂತೆ-ಕಂತೆಗಳೇ ಬಾಯಿಂದ ಬಾಯಿಗೆ ಹರಿದಾಡುತ್ತಿರುತ್ತವೆ ಅಷ್ಟೇ.

ಚುನಾವಣಾ ಆಯೋಗದ ನಿರ್ದೇಶನದಂತೆ ಚುನಾವಣೆಯ ಎಲ್ಲ ಪ್ರಕ್ರಿಯೆಯನ್ನು ಯಶಸ್ವಿಯಾಗಿ ನಿಭಾಯಿಸಲಾಗಿದ್ದು, ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಾರ್ವತ್ರಿಕ ಚುನಾವಣೆಯು ಅತ್ಯಂತ ಶಾಂತಿಯುತವಾಗಿ ಸಂಪನ್ನಗೊಂಡಿದೆ. ಸಹಕರಿಸಿದ ಎಲ್ಲ ಅಭ್ಯರ್ಥಿಗಳಿಗೆ, ರಾಜಕೀಯ ಪಕ್ಷಗಳಿಗೆ, ಸಾರ್ವಜನಿಕರಿಗೆ ಹಾಗೂ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಸೇರಿದಂತೆ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಡಾ. ಕೆ.ವಿದ್ಯಾಕುಮಾರಿ.ಜಿಲ್ಲಾಧಿಕಾರಿ, ಉಡುಪಿ