ಜಿಲ್ಲೆ

ರಾಣೆಬೆನ್ನೂರ ನಗರಸಭೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ: ಮೀಸಲಾತಿ ಎತ್ತಿ ಹಿಡಿದ ಹೈಕೋರ್ಟ್

ಕರಿಯಪ್ಪ ಅರಳಿಕಟ್ಟಿ ರಾಣೆಬೆನ್ನೂರ

ಇಲ್ಲಿಯ ನಗರಸಭೆಯ 2ನೇ ಅವಧಿಗೆ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ರಾಜ್ಯ ಸರ್ಕಾರ ಪ್ರಕಟಿಸಿದ್ದ ಮೀಸಲಾತಿ ಪ್ರಶ್ನಿಸಿ ಸದಸ್ಯರೊಬ್ಬರು ಸಲ್ಲಿಸಿದ ಅರ್ಜಿಗೆ ಸಂಬಂಧಿಸಿದಂತೆ ಧಾರವಾಡ ಹೈಕೋರ್ಟ್ ಪೀಠ ರಾಜ್ಯ ಸರ್ಕಾರ ಪ್ರಕಟಿಸಿದ ಮೀಸಲಾತಿ ಎತ್ತಿ ಹಿಡಿದಿದೆ. ಹೀಗಾಗಿ ಸದ್ಯದಲ್ಲೇ ಚುನಾವಣೆ ನಡೆಯಲಿದ್ದು, ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನದ ಆಕಾಂಕ್ಷಿಗಳು ಕಸರತ್ತು ಆರಂಭಿಸಿದ್ದಾರೆ.

ರಾಜ್ಯ ಸರ್ಕಾರ ನಗರಸಭೆ 2ನೇ ಅವಧಿಗೆ ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರಿಸಿ ಆ. 5ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ನಗರಸಭೆ ಸದಸ್ಯ ಶಶಿಧರ ಬಸೇನಾಯ್ಕರ, ‘ಬಹಳಷ್ಟು ವರ್ಷಗಳಿಂದ ನಗರಸಭೆ ಅಧ್ಯಕ್ಷ ಸ್ಥಾನ ಎಸ್ಟಿಗೆ ನೀಡಿಲ್ಲ. ಈ ಬಾರಿ ಎಸ್ಟಿ ಮೀಸಲಾತಿ ನೀಡಬೇಕು’ ಎಂದು ಸರ್ಕಾರದ ಆದೇಶದ ವಿರುದ್ಧ ಆ. 10ರಂದು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು.

ನ್ಯಾಯಾಲಯ ಈ ಕುರಿತು 4 ತಿಂಗಳ ಕಾಲ ವಿಚಾರಣೆ ನಡೆಸಿ, ಶುಕ್ರವಾರ ರಾಜ್ಯ ಸರ್ಕಾರದ ಮೀಸಲಾತಿ ಪಟ್ಟಿಯನ್ನು ಎತ್ತಿ ಹಿಡಿದು ಆದೇಶ ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಶೀಘ್ರದಲ್ಲಿಯೇ ಚುನಾವಣೆ ದಿನಾಂಕ ನಿಗದಿಪಡಿಸಲು ಸಿದ್ಧತೆ ನಡೆಸಿದ್ದಾರೆ.

ಸ್ಪರ್ಧೆಗೆ ಯಾರು ಅರ್ಹ...?

35 ಜನ ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ 15 ಜನ ಬಿಜೆಪಿ, 9 ಕಾಂಗ್ರೆಸ್, 9 ಆರ್. ಶಂಕರ ಬೆಂಬಲಿಗರು ಹಾಗೂ ಇಬ್ಬರು ಪಕ್ಷೇತರ ಸದಸ್ಯರಿದ್ದಾರೆ. ಅಧ್ಯಕ್ಷ ಸ್ಥಾನ ಹಿಂದುಳಿದ ವರ್ಗ ಎ (ಮಹಿಳೆ) ಹಾಗೂ ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿದೆ. ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರೂಪಾ ಚಿನ್ನಿಕಟ್ಟಿ, ಕವಿತಾ ಹೆದ್ದೇರಿ, ತ್ರೀವೇಣಿ ಪವಾರ, ರತ್ನವ್ವ ಪೂಜಾರ, ಹೊನ್ನವ್ವ ಕಾಟಿ; ಕಾಂಗ್ರೆಸ್​ನಲ್ಲಿ ಚಂಪಕ್ಕ ಬಿಸಲಹಳ್ಳಿ, ಜಯಶ್ರೀ ಪಿಸೆ ಹಾಗೂ ಆರ್. ಶಂಕರ ಬೆಂಬಲಿತರಲ್ಲಿ ಅರೀಫಾಖಾನಂ ಸೌದಾಗರ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಅರ್ಹರಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಿರುವ ಕಾರಣ ಎಲ್ಲ 35 ಜನರು ಅರ್ಹರಾಗಿದ್ದಾರೆ. ಆದರೆ, ಬಿಜೆಪಿಯಲ್ಲಿ ಸಾಮಾನ್ಯ ವರ್ಗದವರಾದ ಮಲ್ಲಣ್ಣ ಅಂಗಡಿ, ಗುರುರಾಜ ತಿಳವಳ್ಳಿ, ಪ್ರಕಾಶ ಬುರಡಿಕಟ್ಟಿ; ಕಾಂಗ್ರೆಸ್​ನಲ್ಲಿ ಶೇಖಪ್ಪ ಹೊಸಗೌಡ್ರ ಉಪಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲು ಉತ್ಸುಕರಾಗಿದ್ದಾರೆ.

ಯಾರಿಗೆ ಎಷ್ಟು ಬೆಂಬಲ...?

35 ಜನ ಸದಸ್ಯರ ಬಲ ಹೊಂದಿರುವ ನಗರಸಭೆಯಲ್ಲಿ 1 ಶಾಸಕ, 1 ಸಂಸದ ಸ್ಥಾನ ಸೇರಿ ಒಟ್ಟು 37 ಮತಗಳಿವೆ. ಅಧ್ಯಕ್ಷ ಸ್ಥಾನಕ್ಕೇರಲು 19 ಮತ ಬೇಕು. ಆರ್. ಶಂಕರ ಬೆಂಬಲಿತ 9 ಸದಸ್ಯರಲ್ಲಿ 4 ಜನ ಬಿಜೆಪಿ ಹಾಗೂ 5 ಜನ ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇಬ್ಬರು ಪಕ್ಷೇತರ ಸದಸ್ಯರು ಬಿಜೆಪಿ ಬೆಂಬಲಕ್ಕೆ ಇದ್ದಾರೆ. ಹೀಗಾಗಿ 15 ಸದಸ್ಯರನ್ನು ಹೊಂದಿರುವ ಬಿಜೆಪಿಗೆ ಸಂಸದ ಸೇರಿ 22 ಮತಗಳ ಬೆಂಬಲವಿದ್ದು, ಅಧ್ಯಕ್ಷ ಸ್ಥಾನಕ್ಕೇರಿಸಲು ಸ್ಪಷ್ಟ ಬಹುಮತವಿದೆ.

ಕಾಂಗ್ರೆಸ್​ನಲ್ಲಿ ಚಟುವಟಿಕೆ ಬಿರುಸು

ಅಧ್ಯಕ್ಷ ಸ್ಥಾನಕ್ಕೇರಲು ಸ್ಪಷ್ಟ ಬಹುಮತವಿಲ್ಲದಿದ್ದರೂ ಆರ್. ಶಂಕರ ಬೆಂಬಲಿತ ಹಾಗೂ ಪಕ್ಷೇತರರನ್ನು ಸೆಳೆದು ಹೇಗಾದರೂ ಮಾಡಿ ನಗರಸಭೆ ಅಧಿಕಾರವನ್ನು ತಮ್ಮ ತೆಕ್ಕೆಗೆ ತೆಗೆದುಕೊಳ್ಳಬೇಕು ಎಂದು ಕಾಂಗ್ರೆಸ್ ಸದಸ್ಯರು ಈಗಾಗಲೇ ಶಾಸಕರ ನೇತೃತ್ವದಲ್ಲಿ ಒಂದು ಸುತ್ತಿನ ಸಭೆ ನಡೆಸಿದ್ದಾರೆ ಎನ್ನಲಾಗಿದೆ. ಆದರೆ, ಬಿಜೆಪಿಯಲ್ಲಿ ಎರಡು ಬಣಗಳು ಇದ್ದು ಸದ್ಯ ಯಾವುದೇ ಮಹತ್ವದ ಸಭೆಗಳು ನಡೆದಿಲ್ಲ. ಸೋಮವಾರ ಸಭೆ ಸೇರೋಣ ಎಂದು ಕೆಲವರು ಮಾತನಾಡುತ್ತಿದ್ದಾರೆ. ಅಧಿಕೃತವಾಗಿ ಸಭೆ ನಡೆಸುವ ಕುರಿತು ಮಾಹಿತಿ ಹೇಳಿಲ್ಲ ಎಂದು ಸದಸ್ಯರೊಬ್ಬರು ‘ವಿಜಯವಾಣಿ’ಗೆ ತಿಳಿಸಿದ್ದಾರೆ.