ಮಂಡ್ಯ: ಒಕ್ಕಲಿಗರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ನಗರಸಭೆ ಮಾಜಿ ಸದಸ್ಯ ಕೆ.ಸಿ.ರವೀಂದ್ರ ಅವರನ್ನು ಆಯ್ಕೆ ಮಾಡಲಾಗಿದೆ.
ನಗರದ ಸಂಘದ ಕಚೇರಿಯಲ್ಲಿ ರಾಜ್ಯ ಸಂಘದ ಉಪಾಧ್ಯಕ್ಷ ಎಲ್.ಕೃಷ್ಣ ಉಪಸ್ಥಿತಿಯಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷರಾಗಿ ಕೆ.ಸಿ.ರವೀಂದ್ರ, ಮದ್ದೂರು ತಾಲೂಕು ಅಧ್ಯಕ್ಷ ಶಿವಲಿಂಗೇಗೌಡ, ಮಳವಳ್ಳಿ ತಾಲೂಕು ಅಧ್ಯಕ್ಷ ನಾಗೇಗೌಡ, ಕೆ.ಆರ್.ಪೇಟೆ ತಾಲೂಕು ಅಧ್ಯಕ್ಷ ಗಂಗಾಧರಗೌಡ ಮತ್ತು ಶ್ರೀರಂಗಪಟ್ಟಣದ ತಾಲೂಕು ಅಧ್ಯಕ್ಷರಾಗಿ ದೇವರಾಜು ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಎಲ್.ಕೃಷ್ಣ ಮಾತನಾಡಿ, ಮುಂದಿನ ವಾರದಲ್ಲಿ ಸಭೆ ಕರೆದು ಉಳಿದ ಮೂರು ತಾಲೂಕುಗಳ ಅಧ್ಯಕ್ಷನ್ನು ಆಯ್ಕೆ ಮಾಡಲಾಗುವುದು. ನೂತನ ಪದಾಧಿಕಾರಿಗಳು ಹಾಗೂ ಸಂಘದ ಸದಸ್ಯರು ಸಂಘಟನೆಯನ್ನು ಬಲಗೊಳಿಸಬೇಕು. ಇದರೊಂದಿಗೆ ಸಮಾಜದ ಅಭ್ಯುದಯಕ್ಕೆ ಶ್ರಮಿಸಬೇಕು. ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಬೇಕೆಂದು ಕಿವಿಮಾತು ಹೇಳಿದರು.
ನೂತನ ಜಿಲ್ಲಾಧ್ಯಕ್ಷ ಕೆ.ಸಿ.ರವೀಂದ್ರ ಮಾತನಾಡಿ, ನನ್ನ ಮೇಲೆ ವಿಶ್ವಾಸವಿಟ್ಟು ಸಂಘಟನೆಯ ಹೊಣೆಗಾರಿಕೆ ನೀಡಲಾಗಿದೆ. ಇದಕ್ಕೆ ಎಲ್ಲರಿಗೂ ಧನ್ಯವಾದ ಅರ್ಪಿಸುತ್ತೇನೆ, ಸಂಘಟನೆಯ ಬಲವರ್ಧನೆಗೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆದು ಕಾರ್ಯಪ್ರವೃತ್ತವಾಗುವುದಾಗಿ ತಿಳಿಸಿದರು.
ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಸುಜಾತಾ ಕೃಷ್ಣ, ಪದಾಧಿಕಾರಿಗಳಾದ ಬೋರೇಗೌಡ, ಶಿವಲಿಂಗೇಗೌಡ, ಸಂಪಳ್ಳಿ ಶಿವಶಂಕರ್, ಸೌಭಾಗ್ಯ ಶಿವಲಿಂಗಯ್ಯ, ನಾಗಲಿಂಗಪ್ಪ, ಶಿವರಾಮು, ವಡ್ಡರಹಳ್ಳಿ ಚಂದ್ರು ಇತರರಿದ್ದರು.