ತಿ.ನರಸೀಪುರ: ನಾಯಕರ ಸಂಘದ ತಾಲೂಕು ಅಧ್ಯಕ್ಷರಾಗಿ ಎಂ.ಡಿ.ಬಸವರಾಜು ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಆಲಗೂಡು ನಾಗರಾಜು ಅವರನ್ನು ಅವಿರೋಧ ಆಯ್ಕೆ ಮಾಡಲಾಯಿತು.
ಸಂಘಕ್ಕೆ ಪದಾಧಿಕಾರಿಗಳನ್ನು ಆಯ್ಕೆ ಮಾಡುವ ಸಂಬಂಧ ಪಟ್ಟಣದ ತಾಲೂಕು ನಾಯಕರ ಸಂಘದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಭೆಯಲ್ಲಿ ಒಮ್ಮತದಿಂದ ಅಧ್ಯಕ್ಷರಾಗಿ ಎಂ.ಡಿ.ಬಸವರಾಜು, ಪ್ರಧಾನ ಕಾರ್ಯದರ್ಶಿಯಾಗಿ ಆಲಗೂಡು ನಾಗರಾಜು, ಗೌರವಾಧ್ಯಕ್ಷರಾಗಿ ತಲಕಾಡು ಮಂಜುನಾಥ್, ಉಪಾಧ್ಯಕ್ಷರಾಗಿ ಹೆಮ್ಮಿಗೆ ಹೊನ್ನನಾಯಕ ಹಾಗೂ ಖಜಾಂಚಿಯಾಗಿ ಗೋವಿಂದರಾಜ್ ಅವರನ್ನು ಆಯ್ಕೆ ಮಾಡಲಾಯಿತು.
ಹೊಸ ಹೊಣೆಗಾರಿಕೆ ಸ್ವೀಕರಿಸಿದವರು ಸಂಘವನ್ನು ಬಲಪಡಿಸುವುದರ ಜತೆಗೆ ಸದಸ್ಯರ ಹಿತಾಸಕ್ತಿ ಕಾಪಾಡಬೇಕು. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ನಾಯಕ ಸಮುದಾಯದ ಸಬಲೀಕರಣ, ಶಿಕ್ಷಣ, ಹಾಗೂ ಸಾಮಾಜಿಕ ನ್ಯಾಯಕ್ಕಾಗಿ ಸಂಘವು ಮುಂದಿನ ದಿನಗಳಲ್ಲಿ ಇನ್ನಷ್ಟು ಚಟುವಟಿಕೆಗಳನ್ನು ಕೈಗೊಳ್ಳಬೇಕು ಎಂದು ಸಭೆಯಲ್ಲಿದ್ದ ಸಮುದಾಯದ ಮುಖಂಡರು ಸಲಹೆ ನೀಡಿದರು.
ನೂತನ ಅಧ್ಯಕ್ಷ ಎಂ.ಡಿ.ಬಸವರಾಜು ಮಾತನಾಡಿ, ವಾಲ್ಮೀಕಿ ಭವನದ ಉಳಿಕೆ ಕಾಮಗಾರಿಯನ್ನು ನೂತನ ಕಾರ್ಯಕಾರಿ ಸಮಿತಿ ಹಾಗೂ ನಾಯಕ ಸಮಾಜದ ಎಲ್ಲ ಮುಖಂಡರ ಸಹಕಾರದೊಂದಿಗೆ ಒಂದು ವರ್ಷದಲ್ಲಿ ಮುಗಿಸಿ ಸಿಎಂ ಮತ್ತು ಸಚಿವರಿಂದಲೇ ಉದ್ಘಾಟನೆ ಮಾಡಿಸಲಾಗುವುದು ಎಂದು ತಿಳಿಸಿದರು.
ನಾಯಕರ ಸಂಘದ ಮಾಜಿ ಅಧ್ಯಕ್ಷರಾದ ಗದ್ದೆಮೊಳೆ ಹೊನ್ನನಾಯಕ, ಚಿಕ್ಕಯ್ಯ, ಬ್ಯಾಂಕ್ ವೆಂಕಟರಾಮಯ್ಯ, ನಿವೃತ್ತ ಮುಖ್ಯ ಲೆಕ್ಕಾಧಿಕಾರಿ ಮಾಲಂಗಿ ಜೆ.ಶಿವಸ್ವಾಮಿ, ಮಾಜಿ ಪ್ರಧಾನ ಕಾರ್ಯದರ್ಶಿ ಪಿ.ಶಶಿಧರ್, ಜಿಪಂ ಮಾಜಿ ಸದಸ್ಯ ಕೆ.ಸಿ.ಲೋಕೇಶ್, ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀರಂಗರಾಜಪುರ ಸಿದ್ದರಾಜು, ಡಾ.ಎಂ.ಮಹದೇವಯ್ಯ, ತಾಲೂಕು ನಾಯಕ ನೌಕರರ ಸಂಘದ ಅಧ್ಯಕ್ಷ ಆರ್.ರಾಜು, ಗ್ರಾಪಂ ಸದಸ್ಯ ಬೂದಹಳ್ಳಿ ಸಿದ್ದರಾಜು, ತಲಕಾಡು ಯಜಮಾನ್ ರಾಜು, ಮುಖಂಡರಾದ ಗಾಡಿ ಮಹದೇವನಾಯಕ, ಸುಂದರನಾಯಕ, ವೆಂಕಟೇಶ್‌ಮೂರ್ತಿ, ಆರ್.ಪಿ.ಹುಂಡಿ ನಾಗರಾಜು, ಮರಡಿಪುರ ನಾಗರಾಜು, ಇಂಡವಾಳು ಬಸವರಾಜು ಇತರರು ಇದ್ದರು.