ನಾಗಣ್ಣ  
ಜಿಲ್ಲೆ

ಅಂಬೇಡ್ಕರ್ ಸಂಘಕ್ಕೆ ಪದಾಧಿಕಾರಿಗಳ ಆಯ್ಕೆ ನಿಯಮ ಬಾಹಿರ

ಕೊಳ್ಳೇಗಾಲ: ಭೀಮನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೆ ನಿಯಮ ಬಾಹಿರವಾಗಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಸಂಘದ ಮಾಜಿ ನಿರ್ದೇಶಕ ಎಲ್.ನಾಗಣ್ಣ ಆರೋಪಿಸಿದರು.

ಇತ್ತೀಚೆಗೆ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೆ ಚುನಾವಣೆ ನಡೆದಿದ್ದು, ಇದಕ್ಕೂ ನಮ್ಮ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘಕ್ಕೂ ಸಂಬಂಧವಿಲ್ಲ. ನಮ್ಮ ಸಂಘ ಇನ್ನು ಸಧೃಡವಾಗಿದೆ. ಅದು ನವೀಕರಣ ಆಗಬೇಕಿದೆ. ಮಾಜಿ ಶಾಸಕ ಎನ್.ಮಹೇಶ್ ಭವನ ನಿರ್ಮಾಣಕ್ಕೆ 3 ಕೋಟಿ ರೂ. ಅನುದಾನ ನೀಡಿದ್ದರು. ಕೆಐಆರ್‌ಡಿಎಲ್‌ನಿಂದ 1 ಕೋಟಿ ರೂ. ವೆಚ್ಚದಲ್ಲಿ ಕಾಮಗಾರಿ ನಡೆಸಿದ್ದು, ಇದು ಸರಿಯಿಲ್ಲದ ಕಾರಣ ಲೋಕಾಯುಕ್ತರಿಗೆ ದೂರು ನೀಡಲಾಗಿ ತನಿಖೆ ನಡೆಯುತ್ತಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಈ ಹಿಂದೆ ನಮ್ಮ ಸಂಘದ ಭವನ ನಿರ್ಮಾಣ ಹೇಗಿರಬೇಕು ಎಂದು ನೀಡಿದ್ದ ಕ್ರೀಯಾಯೋಜನೆ ಹಾಗೂ ನಕಾಶೆಯನ್ನು ಬೇರೆ ಏಜೆನ್ಸಿಗೆ ಕಾಮಗಾರಿ ನಡೆಸಲು ಅವಕಾಶ ಮಾಡಿಕೊಟ್ಟರೆ ಕೆಲಸ ಮಾಡಿಸುತ್ತೇವೆ. ಇನ್ನು ಹೊಸ ಸಂಘವನ್ನು ಆಡಳಿತಧಿಕಾರಿಗಳು ನೀತಿ ನಿಯಮ ಬಿಟ್ಟು ಮಾಡಿಸಿದ್ದಾರೆ. ಆದ್ದರಿಂದ ಈ ಸಂಘ ಅಸಿಂಧು ಆಗಿದೆ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದರು.

ಮುಖಂಡ ಕೆ.ಕೆ.ಮೂರ್ತಿ ಮಾತನಾಡಿ, ಭೀಮನಗರ ಡಾ.ಬಿ.ಆರ್.ಅಂಬೇಡ್ಕರ್ ಸ್ಮಾರಕ ಸಂಘದ ಆಯ್ಕೆಗೆ ಸಂಘದ ಆಡಳಿತಾಧಿಕಾರಿ ಕೇಶವಮೂರ್ತಿ ಕಾರಣವಾಗಿದ್ದಾರೆ. ಹೊಸದಾಗಿ ಸಂಘಕ್ಕೆ ಆಯ್ಕೆಯಾಗಿರುವ ಅಧ್ಯಕ್ಷ ಎಸ್.ಆನಂದ ಮೂರ್ತಿ ಅವರು ಅಧ್ಯಕ್ಷರಾಗಲು ಬಹಳ ಹಣ ಖರ್ಚು ಮಾಡಿದ್ದಾರೆ. ಅವರಲ್ಲಿರುವ ಹಣ ಉಳಿಸಿಕೊಳ್ಳಲು ಅಧ್ಯಕ್ಷರಾಗಿದ್ದಾರೆ ಎಂದು ದೂರಿದರು.

ಪುಟ್ಟಬುದ್ಧಿ, ಚಂದ್ರ ಶೇಖರ್, ತಿರುಮಲ್ಲೇಶ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.