ಜಿಲ್ಲೆ

ಮೇಯರ್, ಉಪ ಮೇಯರ್ ಚುನಾವಣೆ 29ಕ್ಕೆ

ಹುಬ್ಬಳ್ಳಿ : ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆಯ ಪ್ರಸಕ್ತ ಸಾಲಿನ ಮೇಯರ್, ಉಪ ಮೇಯರ್ ಚುನಾವಣೆ ಜೂ. 29ಕ್ಕೆ ನಿಗದಿಯಾಗಿದೆ.

ಹಾಲಿ ಮೇಯರ್ ವೀಣಾ ಬರದ್ವಾಡ ಹಾಗೂ ಉಪ ಮೇಯರ್ ಸತೀಶ ಹಾನಗಲ್ ಅವರ ಒಂದು ವರ್ಷದ ಅವಧಿ ಜೂ. 19ರಂದು ಪೂರ್ಣಗೊಂಡಿದೆ. ಧಾರವಾಡದಲ್ಲಿ ಬುಧವಾರದಂದು ನಡೆದ ಮಹಾನಗರ ಪಾಲಿಕೆ ಸಾಮಾನ್ಯ ಸಭೆಯೇ ಈಗಿನ ಮೇಯರ್, ಉಪ ಮೇಯರ್ ಅವರದ್ದು ಕೊನೆಯ ಸಾಮಾನ್ಯ ಸಭೆ.

ಮೇಯರ್ ಸ್ಥಾನ ಹಿಂದುಳಿದ ವರ್ಗ ಎ ಹಾಗೂ ಉಪ ಮೇಯರ್ ಸ್ಥಾನ ಪರಿಶಿಷ್ಟ ಜಾತಿ (ಎಸ್​ಸಿ) ಮಹಿಳೆಗೆ ಮೀಸಲಾಗಿದೆ. 82 ಸದಸ್ಯ ಬಲದ ಮಹಾನಗರ ಪಾಲಿಕೆಯಲ್ಲಿ ಬಿಜೆಪಿಯ 39, ಕಾಂಗ್ರೆಸ್​ನ 33, ಎಐಎಂಐಎಂನ ಮೂವರು, ಜೆಡಿಎಸ್​ನ ಒಬ್ಬರು ಹಾಗೂ 6 ಜನ ಪಕ್ಷೇತರ ಸದಸ್ಯರು ಇದ್ದಾರೆ.

ಮೇಯರ್, ಉಪ ಮೇಯರ್ ಚುನಾವಣೆಯಲ್ಲಿ ಸಂಸದರು, ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಮತದಾನದ ಅಧಿಕಾರ ಹೊಂದಿದ್ದಾರೆ. ಕಳೆದ ಬಾರಿ ಧಾರವಾಡದಲ್ಲಿ ಮೇಯರ್, ಉಪ ಮೇಯರ್ ಚುನಾವಣೆ ನಡೆದಿತ್ತು. ಈ ಬಾರಿ ಹುಬ್ಬಳ್ಳಿಯಲ್ಲಿಯೇ ಈ ಚುನಾವಣೆ ನಡೆಯಲಿದೆ.