ಲಕ್ಕವಳ್ಳಿ ಗ್ರಾಪಂ ಎದುರು ಜಮಾಯಿಸಿರುವ ಉದ್ರಿಕ್ತರ ಗುಂಪು.  
ಜಿಲ್ಲೆ

ಗಲಾಟೆ ನಡುವೆ ಲಕ್ಕವಳ್ಳಿ ಗ್ರಾಪಂ ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ

ತರೀಕೆರೆ: ಲಕ್ಕವಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಶುಕ್ರವಾರ ನಡೆದ ಚುನಾವಣೆಯಲ್ಲಿ ಮುಬೀನ್ ತಾಜ್ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ವೇತಾ ಅವಿರೋಧ ಆಯ್ಕೆಯಾದರು.

17 ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಮುಬೀನ್ ತಾಜ್, ಆಸ್ಮಾ ಬಾನು, ಅಬ್ದುಲ್ ರೆಹಮಾನ್ ನಾಮಪತ್ರ ಸಲ್ಲಿಸಿದರು. ನಂತರ ಅಬ್ದುಲ್ ರೆಹಮಾನ್ ನಾಮಪತ್ರ ಹಿಂಪಡೆದರು. ಮುಬೀನ್ ತಾಜ್ 13 ಮತ, ಆಸ್ಮಾ ಬಾನು 4 ಮತ ಪಡೆದರು. ಮುಬೀನ್ ತಾಜ್ 9 ಮತಗಳ ಅಂತರದಿಂದ ಗೆಲುವು ಸಾಧಿಸಿದರು. ಉಪಾಧ್ಯಕ್ಷ ಸ್ಥಾನಕ್ಕೆ ಶ್ವೇತಾ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾದರು. ಚುನಾವಣಾಧಿಕಾರಿಯಾಗಿ ಕೆ.ಸಿ.ಜ್ಯೋತಿಲಕ್ಷ್ಮೀ ಕಾರ್ಯನಿರ್ವಹಿಸಿದರು.
ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಚುನಾವಣೆ ವಿಷಯದಲ್ಲಿ ಭದ್ರಾವತಿ ತಾಲೂಕು ಶಂಕರಘಟ್ಟದ ಹೋಂ ಸ್ಟೇವೊಂದರಲ್ಲಿ ಚರ್ಚೆಗೆ ಕುಳಿತಿದ್ದ ಗ್ರಾಪಂ ಸದಸ್ಯ ಮತ್ತು ಪ್ರಮುಖರ ಮೇಲೆ ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ರವಿಕಿಶೋರ್ ಮತ್ತವರ ಬೆಂಬಲಿಗರು ಮೂರ‌್ನಾಲ್ಕು ದಿನಗಳ ಹಿಂದೆ ನಡೆಸಿದ್ದ ಹಲ್ಲೆ ಪ್ರಕರಣ ಶುಕ್ರವಾರ ಚುನಾವಣೆ ವೇಳೆ ಕಿಚ್ಚು ಹಚ್ಚಿಸಿ ದಾಂಧಲೆ ಸೃಷ್ಟಿಸಿತು. ಚುನಾವಣೆ ಮುಗಿಯುವವರೆಗೂ ಒಬ್ಬರಾದ ಮೇಲೆ ಒಬ್ಬರು ತಗಾದೆ ತೆಗೆದು ಗಲಾಟೆಗೆ ಮುಂದಾಗುತ್ತಿದ್ದುದು ಕಂಡುಬಂತು.
ಗ್ರಾಪಂ ಎದುರು ಚುನಾವಣಾ ಪ್ರಕ್ರಿಯೆ ಆರಂಭವಾದಾಗಿನಿಂದಲೇ ಜಮಾವಣೆಗೊಂಡಿದ್ದ ಗುಂಪು ಆಗಾಗ ರಂಪಾಟ ಸೃಷ್ಟಿಸಿತು. ಗೇಟು ತೆಗೆದು ಗ್ರಾಪಂ ಸಭಾಂಗಣಕ್ಕೆ ನುಗ್ಗುವ ಪ್ರಯತ್ನ ಕೂಡ ಮಾಡಿತು. ಉದ್ರಿಕ್ತ ಗುಂಪು ಲಕ್ಕವಳ್ಳಿ ಟಿ.ಎಂ.ರಸ್ತೆಯಲ್ಲಿ ಕೆಲ ಕಾಲ ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿತು. ಲಕ್ಕವಳ್ಳಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದ ಕಾರಣ ಡಿವೈಎಸ್ಪಿ ಕೆ.ನಾಗರಾಜ್ ಹಾಗೂ 30ಕ್ಕೂ ಹೆಚ್ಚು ಪೊಲೀಸರು ಸ್ಥಳದಲ್ಲೇ ಮೊಕ್ಕಾಂ ಹೂಡಿದ್ದರು.
ಪೊಲೀಸರ ಕಾವಲಿನಲ್ಲೇ ನಡೆದ ಚುನಾವಣೆಯಲ್ಲಿ ಕೆ.ರವಿಕಿಶೋರ್ ಬೆಂಬಲದ ಸದಸ್ಯರೊಬ್ಬರ ಮೇಲೆ ಹಲ್ಲೆ ನಡೆಸಲು ಕಾದು ನಿಂತಿದ್ದ ಉದ್ರಿಕ್ತರನ್ನು ಚದುರಿಸಲು ಪೊಲೀಸರು ಹರಸಾಹಸ ಪಡುವಂತಾಯಿತು. ಚುನಾವಣೆ ಬಳಿಕ ಗ್ರಾಪಂ ಸಭಾಂಗಣದಲ್ಲಿ ಕುಳಿತಿದ್ದ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆ ಹಾಗೂ ಕೆ.ರವಿಕಿಶೋರ್ ಬೆಂಬಲಿತ ಸದಸ್ಯರೊಬ್ಬರನ್ನು ಪೊಲೀಸರು ರಕ್ಷಣೆ ನೀಡಿ ಅವರ ವಾಹನದಲ್ಲಿ ಮನೆಗೆ ಕರೆದೊಯ್ದರು. ಗುಂಪು ನಡೆಸುತ್ತಿದ್ದ ದಾಂಧಲೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದ ಯುವಕನಿಗೆ ಗುಂಪಿನ ಕೆಲವರು ಥಳಿಸಿ ಮೊಬೈಲ್ ಕಸಿದುಕೊಂಡರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಕೆ.ರವಿಕಿಶೋರ್ ಬಣ ಚುನಾವಣೆಯಲ್ಲಿ ಮೇಲುಗೈ ಸಾಧಿಸಿದೆ. ಕೆ.ರವಿಕಿಶೋರ್ ವಿರುದ್ಧವಾಗಿ ಚುನಾವಣೆ ನಡೆಸಲು ಮುಂದಾಗಿದ್ದ ಕಾಂಗ್ರೆಸ್‌ನ ಮತ್ತೊಂದು ಗುಂಪಿಗೆ ಹಿನ್ನಡೆಯಾಗಿದೆ. 17 ಸದಸ್ಯ ಬಲದ ಗ್ರಾಪಂನಲ್ಲಿ ಬಿಜೆಪಿ ಬೆಂಬಲಿತ ಮೂವರು ಸದಸ್ಯರೂ ಚುನಾವಣೆಯಲ್ಲಿ ಕೆ.ರವಿಕಿಶೋರ್ ವಿರುದ್ಧ ಗುಂಪಿನ ಜತೆ ಕೈಜೋಡಿಸಿತ್ತು.