ಚನ್ನರಾಯಪಟ್ಟಣ ತಾಲೂಕಿನ ಸುಂಡಹಳ್ಳಿ ಪಿಎಸಿಸಿಎಸ್‌ಗೆ ನೂತನವಾಗಿ ಆಯ್ಕೆಯಾದ ಜೆಡಿಎಸ್ ಬೆಂಬಲಿತ ನಿರ್ದೇಶಕರನ್ನು ಶಾಸಕ ಸಿ.ಎನ್.ಬಾಲಕೃಷ್ಣ ಅಭಿನಂದಿಸಿದರು. ಪರಮ ಕೃಷ್ಣೇಗೌಡ, ಸಿ.ಎನ್.ಪುಟ್ಟಸ್ವಾಮಿಗೌಡ, ಕುಂಬಾರಹಳ್ಳಿ ರಮೇಶ್ ಇತರರು ಇದ್ದರು. 
ಜಿಲ್ಲೆ

ಸುಂಡಳ್ಳಿ ಕೃಷಿ ಪತ್ತಿನ ಸಂಘದ ನಿರ್ದೇಶಕರ ಆಯ್ಕೆ

ಚನ್ನರಾಯಪಟ್ಟಣ: ಸಹಕಾರಿ ವ್ಯವಸ್ಥೆಯಲ್ಲಿ ಸಹಕಾರ ತತ್ವದಡಿ ಕಾರ್ಯ ನಿರ್ವಹಿಸಿದರೆ ಸ್ಥಳೀಯ ಸಂಸ್ಥೆಗಳು ಉನ್ನತ ಮಟ್ಟಕ್ಕೆ ಬೆಳೆದು ವಿಸ್ತಾರವಾಗಿ ಅಭಿವೃದ್ಧಿ ಹೊಂದುತ್ತದೆ ಎಂದು ಶಾಸಕ ಸಿ.ಎನ್.ಬಾಲಕೃಷ್ಣ ತಿಳಿಸಿದರು.

ತಾಲೂಕಿನ ಶ್ರವಣಬೆಳಗೊಳ ಹೋಬಳಿ ಸುಂಡಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳಲ್ಲಿಯೂ ಜೆಡಿಎಸ್ ಬೆಂಬಲಿತ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕ ಸಿ.ಎನ್.ಬಾಲಕೃಷ್ಣ ಅವರು ನೂತನ ನಿರ್ದೇಶಕರನ್ನು ಅಭಿನಂದಿಸಿ ಮಾತನಾಡಿದರು. ಸಮಾನತೆ ಸಹಕಾರಿ ಕ್ಷೇತ್ರದ ಶಕ್ತಿಯಾಗಿದ್ದು, ಎಲ್ಲರ ಸಹಭಾಗಿತ್ವದಲ್ಲಿ ವಿಶ್ವಾಸದಿಂದ ತೊಡಗಿಸಿಕೊಂಡಿರುವುದು ಕ್ಷೇತ್ರದ ಬೆಳವಣಿಗೆಗೆ ಕಾರಣವಾಗಿದೆ. ಪ್ರಾಮಾಣಿಕತೆ, ನಿಸ್ವಾರ್ಥತತೆ, ಸಮಾಜದ ಬಗ್ಗೆ ಕಳಕಳಿ ಇದ್ದಾಗ ಮಾತ್ರ ಸಂಸ್ಥೆ ಬೆಳೆಯಲು ಸಾಧ್ಯ ಎಂದರು.

ನಮ್ಮ ತಾಲೂಕಿನಲ್ಲಿಯೇ ಸುಂಡಹಳ್ಳಿ ಸೊಸೈಟಿ ದೊಡ್ಡ ಸೊಸೈಟಿ ಆಗಿದ್ದು, ಎರಡು ಸಾವಿರ ಮಂದಿ ಷೇರುದಾರರನ್ನು ಹೊಂದಿದೆ. ಈ ಸೊಸೈಟಿಯಲ್ಲಿ 12 ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗಿರುವುದು ತುಂಬ ಸಂತೋಷದ ವಿಚಾರ. ಮೂರು ಪಕ್ಷಗಳ ಮುಖಂಡರು ಒಮ್ಮತದ ಮೇರೆಗೆ ಜೆಡಿಎಸ್‌ಗೆ 9 ಸ್ಥಾನ, ಕಾಂಗ್ರೆಸ್‌ಗೆ 2 ಸ್ಥಾನ, ಬಿಜೆಪಿಗೆ ಒಂದು ಸ್ಥಾನ ಬಿಟ್ಟು ಕೊಡಲಾಗಿದೆ. ಎಲ್ಲ್ಲ ಪಕ್ಷಗಳು ಹೊಂದಾಣಿಕೆ ಮೂಲಕ ಸೊಸೈಟಿಯ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ನೂತನ ನಿರ್ದೇಶಕರಿಗೆ ಸಲಹೆ ನೀಡಿದರು.

ಇದೇ ಸಂದರ್ಭದಲ್ಲಿ ಕರ್ನಾಟಕ ಸಹಕಾರ ಮಾರಾಟ ಮಹಾಮಂಡಳಿಯ ನಿರ್ದೇಶಕರಾದ ಸಿ.ಎನ್.ಪುಟ್ಟಸ್ವಾಮಿಗೌಡ, ಟಿಎಪಿಸಿಎಂಎಸ್‌ನ ನಿರ್ದೇಶಕರಾದ ಪರಮ ಕೃಷ್ಣೇಗೌಡ, ಕುಂಬಾರಹಳ್ಳಿ ರಮೇಶ್, ಮೆಡಿಕಲ್ ವೆಂಕಟೇಶ್, ಸುಂಡಹಳ್ಳಿ ಸೊಸೈಟಿಯ ನೂತನ ನಿರ್ದೇಶಕರಾದ ಎನ್.ಕೃಷ್ಣೇಗೌಡ, ಬಿ.ಕೃಷ್ಣಮೂರ್ತಿ, ಎಚ್.ಎಸ್.ದಿವಾಕರ್, ನಂದಕುಮಾರ್, ವಾಸಣ್ಣ, ಶ್ವೇತಾ, ಹುಚ್ಚಮ್ಮ, ಅಣ್ಣಯ್ಯ, ಬಸವರಾಜ್, ಮಂಜುನಾಥ್, ಜೆ.ಭುವನೇಶ್ವರಿ, ಹರೀಶ್, ಸುಂಡಹಳ್ಳಿ ಸೊಸೈಟಿಯ ಕಾರ್ಯದರ್ಶಿ ನಾಗರಾಜು ಇತರರು ಇದ್ದರು.