ನಂಜನಗೂಡು: ತಾಲೂಕಿನ ತಗಡೂರು ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮುಂದಿನ ಐದು ವರ್ಷಗಳ ಆಡಳಿತ ಮಂಡಳಿಗೆ ಚುನಾವಣೆ ನಡೆಸಲಾಗಿದ್ದು, ಸಂಘದ ಅಧ್ಯಕ್ಷರಾಗಿದ್ದ ಟಿ.ಎನ್. ಗುರುಮಲ್ಲೇಶ್ ಬೆಂಬಲಿತ 12 ಅಭ್ಯರ್ಥಿಗಳು ಸ್ಪರ್ಧಿಸಿ ಜಯಭೇರಿ ಬಾರಿಸಿರುವ ಮೂಲಕ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರೆ.
ಗ್ರಾಮದ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಭಾನುವಾರ ನಡೆದ ನಿರ್ದೇಶಕರ ಚುನಾವಣೆಯಲ್ಲಿ ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಸಲಾಯಿತು. ಸಾಲಗಾರರ ಕ್ಷೇತ್ರದಿಂದ 17 ಅಭ್ಯರ್ಥಿಗಳು, ಸಾಲಗಾರರಲ್ಲದ ಕ್ಷೇತ್ರದಿಂದ ಇಬ್ಬರು ಅಭ್ಯರ್ಥಿಗಳು ಕಣಕ್ಕೆ ಇಳಿದು ಸ್ಪರ್ಧೆ ಮಾಡಿದ್ದರು. ಇದರಲ್ಲಿ ಸಾಮಾನ್ಯ ಕ್ಷೇತ್ರದಿಂದ ಟಿ.ಎನ್ ಗುರುಮಲ್ಲೇಶ್, ಗುರುಸಿದ್ದೇಗೌಡ, ಜಯಪ್ರಕಾಶ್, ಟಿ.ಎಂ.ನಟೇಶ್, ಕೆ.ಪಿ.ಸುಬ್ಬಪ್ಪ, ಪರಿಶಿಷ್ಟ ಜಾತಿ ಮೀಸಲು ಕ್ಷೇತ್ರದಿಂದ ದೇವರಾಜು, ಹಿಂದುಳಿದ ವರ್ಗ ಎ ನಿಂದ ರಂಗಶೆಟ್ಟಿ, ಹಿಂದುಳಿದ ವರ್ಗ ಪ್ರವರ್ಗ ಬಿಯಿಂದ ಬಸವಣ್ಣ, ಮಹಿಳಾ ಮೀಸಲು ಕ್ಷೇತ್ರದಿಂದ ನಾಗಮ್ಮ, ಪರಿಶಿಷ್ಟ ಪಂಗಡದಿಂದ ಟಿ.ಆರ್.ಶ್ರೀನಿವಾಸ್ ನಾಯಕ ಸ್ಪರ್ಧೆ ಮಾಡಿ ಜಯಭೇರಿ ಬಾರಿಸಿದರೆ, ಸಾಲಗಾರರಲ್ಲದ ಕ್ಷೇತ್ರದಿಂದ ಮಹದೇವಸ್ವಾಮಿ ಸ್ಪರ್ಧಿಸಿ ಗೆಲುವು ಸಾಧಿಸಿ, ನಿರ್ದೇಶಕರಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಕೆ.ಸಿ ರಘು ಘೋಷಣೆ ಮಾಡಿದರು.
ನೂತನ ನಿರ್ದೇಶಕರು ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ್ ನಾಮಫಲಕಕ್ಕೆ ಮಾಲಾರ್ಪಣೆ ಮಾಡಿ ಪುಷ್ಪಾರ್ಚನೆ ಸಲ್ಲಿಸಿದರು.
ಸಂಘದ ಕಾರ್ಯದರ್ಶಿ ಮಹದೇವಪ್ಪ, ಟಿ.ಆರ್.ಸುಭಿಕ್ಷ, ಕಾಂಗ್ರೆಸ್ ಮುಖಂಡ ಗಾರ್ಡನ್ ಮಹೇಶ್, ಶಿವರಾಂ, ಕೊಂತಯ್ಯನಹುಂಡಿ ಗುರು, ದೇವಣ್ಣ, ರಂಗಸ್ವಾಮಿ, ನಾಗೇಶ್ ನಾಯಕ್, ಜಯಪ್ರಕಾಶ್, ಮಹದೇವಸ್ವಾಮಿ ಇತರರಿದ್ದರು.