ಜಿಲ್ಲೆ

ಚುನಾವಣಾ ಜಾಹೀರಾತಿಗೆ ಅನುಮತಿ ಕಡ್ಡಾಯ: ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ ಮಾಹಿತಿ

reportermys

ಮಂಡ್ಯ: ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರಾರಂಭವಾಗಿರುವ ಎಂ.ಸಿ.ಎಂ.ಸಿ ಸಮಿತಿ, ಸಿ-ವಿಜಿಲ್ ಹಾಗೂ ಸಹಾಯವಾಣಿ ಕೇಂದ್ರಕ್ಕೆ ಜಿಲ್ಲಾಧಿಕಾರಿ ಡಾ.ಎಚ್.ಎನ್.ಗೋಪಾಲಕೃಷ್ಣ ಹಾಗೂ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್.ನಾಗರಾಜು ಭೇಟಿ ನೀಡಿ ಪರಿಶೀಲಿಸಿದರು.

ಈ ವೇಳೆ ಜಾಹೀರಾತಿಗೆ ಸಂಬಂಧಿಸಿದಂತೆ ಮಾಹಿತಿ ನೀಡಿದ ಜಿಲ್ಲಾ ವಾರ್ತಾಧಿಕಾರಿ ಎಚ್.ಎಸ್.ನಿರ್ಮಲಾ, ಸಾಮಾಜಿಕ ಮಾಧ್ಯಮ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಚುನಾವಣಾ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಕಡ್ಡಾಯವಾಗಿ ಎಂ.ಸಿ.ಎಂ.ಸಿ ಸಮಿತಿಯಿಂದ ಅನುಮೋದನೆ ಪಡೆದುಕೊಳ್ಳಬೇಕು. ಮಾಧ್ಯಮಗಳಲ್ಲಿ ಪ್ರಕಟವಾಗುವ ಜಾಹೀರಾತುಗಳು, ಸುದ್ದಿ ರೂಪದ ಜಾಹೀರಾತುಗಳು ಚುನಾವಣಾ ಪ್ರಚಾರ ಸಾಮಗ್ರಿಗಳ ಬಗ್ಗೆ ನಿಗಾವಹಿಸಿ ಆಯಾ ಕ್ಷೇತ್ರದ ಚುನಾವಣಾಧಿಕಾರಿ ಹಾಗೂ ವೆಚ್ಚ ವೀಕ್ಷಕರಿಗೆ ದಿನವಹಿ ವರದಿಯನ್ನು ಸಮಿತಿ ನೀಡಲಿದೆ ಎಂದರು.

ದೂರದರ್ಶನ, ರೇಡಿಯೋ, ಕೇಬಲ್ ಟೆಲಿವಿಷನ್ ಹಾಗೂ ಸುದ್ದಿ ಪತ್ರಿಕೆಗಳು(ಪತ್ರಿಕಾ ಮಾಧ್ಯಮಗಳು ಆನ್‌ಲೈನ್ ಸಂಚಿಕೆ ಹೊಂದಿರುವುದರಿಂದ ಅದನ್ನು ವಿದ್ಯುನ್ಮಾನ ಸ್ವರೂಪದ ಜಾಹೀರಾತು ಎಂದು ಪರಿಗಣಿಸಲಾಗಿದೆ) ಸೇರಿದಂತೆ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ಪ್ರಸಾರ ಮಾಡುವ ಮುನ್ನ ಸಮಿತಿಯಿಂದ ಕಡ್ಡಾಯವಾಗಿ ಅನುಮೋದನೆ ಪಡೆದುಕೊಳ್ಳಬೇಕು. ಅದಕ್ಕೆ ಸಂಬಂಧಿಸಿದಂತೆ ನಿಗದಿತ ನಮೂನೆಗಳನ್ನು ಪಡೆದುಕೊಂಡು ಅರ್ಜಿ ಸಲ್ಲಿಸಬೇಕು. ಒಂದು ವೇಳೆ ಅನುಮೋದನೆ ಪಡೆಯದೇ ಜಾಹೀರಾತು ಪ್ರಸಾರವಾದಲ್ಲಿ ಸಮಿತಿಯು ಗಮನಹರಿಸಲಿದೆ. ಅಭ್ಯರ್ಥಿಯ ಗಮನಕ್ಕೆ ತಾರದೆ ಬೇರೆಯವರು ಅಭ್ಯರ್ಥಿಯ ಹೆಸರಿನಲ್ಲಿ ಜಾಹೀರಾತು ಹಾಗೂ ಚುನಾವಣಾ ಸಾಮಗ್ರಿ ಮುದ್ರಿಸುವಂತಿಲ್ಲ. ಇಂತಹ ಪ್ರಕರಣ ಕಂಡುಬಂದರೆ ಪ್ರಕಟಿಸಿದವರ ವಿರುದ್ಧ ಕ್ರಮ ವಹಿಸಲಾಗುತ್ತದೆ. ಪತ್ರಿಕೆಗಳಲ್ಲಿ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗುವ ಸುದ್ದಿ ರೂಪದ ಜಾಹೀರಾತುಗಳ ಬಗ್ಗೆಯೂ ಸಮಿತಿ ಗಮನಹರಿಸಲಿದೆ. ಕಾಸಿಗಾಗಿ ಸುದ್ದಿ ಎಂದು ಪರಿಗಣಿಸಲಾಗುವ ಪ್ರಕರಣಗಳನ್ನು ವಾರ್ತಾ ಇಲಾಖೆ ಜಾಹೀರಾತು ದರ ಅನ್ವಯಿಸಿ ಅಭ್ಯರ್ಥಿಗಳ ಲೆಕ್ಕಕ್ಕೆ ಸೇರಿಸಲಾಗುತ್ತದೆ ಎಂದು ವಿವರಿಸಿದರು.

ಸಮಿತಿ ಸದಸ್ಯರಾದ ಮನೋಹರ್, ಡಾ.ಶಿವರಾಜು ಉಪಸ್ಥಿತರಿದ್ದರು.