ಜಿಲ್ಲೆ

ಚುನಾವಣೆ ಮತ ಏಣಿಕೆ: ಗದಗ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಆದೇಶ

Gadag - Shivanand Hiremath

ಗದಗ: ಜೂನ್ 4 ರಂದು ಮತ ಏಣಿಕೆ ಕಾರ್ಯವು ಮುಕ್ತವಾಗಿ ಮತ್ತು ಶಾಂತಿಯುತವಾಗಿ ಜರುಗುವ ಹಿನ್ನಲೆಯಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವ ಹಿತದೃಷ್ಟಿಯಿಂದ ಜೂನ್ 3, 2024 ರ ಸಾಯಂಕಾಲ 6 ಗಂಟೆಯಿಂದ ಜೂನ್ 5, 2024 ರ ಬೆಳಿಗ್ಗೆ 6 ಗಂಟೆಯವರೆಗೆ ಗದಗ ಜಿಲ್ಲೆಯಾದ್ಯಂತ ಪ್ರತಿಬಂಧಕಾಜ್ಞೆ ಜಾರಿಗೊಳಿಸಿ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಆದೇಶ ಹೊರಡಿಸಿದ್ದಾರೆ.

ಜಿಲ್ಲೆಯಾದ್ಯಂತ ಗೆದ್ದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಪರ ಕಾರ್ಯಕರ್ತರು, ಬೆಂಬಲಿಗರು ವಿಜಯೋತ್ಸವ, ಮೆರವಣಿಗೆ ಮಾಡುವುದರಿಂದ ಸೋತ ಅಭ್ಯರ್ಥಿಗಳಿಗೆ ಹಾಗೂ ಅವರ ಪಕ್ಷಗಳ ಮುಖಂಡರಿಗೆ, ಕಾರ್ಯಕರ್ತರಿಗೆ ವಿವಿಧ ರೀತಿಯ ಮನಸ್ಥಾಪಗಳು ಉಂಟಾಗಿ ಈ ಸಮಯದಲ್ಲಿ ಪರಾಭವಗೊಂಡ ಅಭ್ಯರ್ಥಿಗಳು ಮತ್ತು ವಿಜೇತರಾದ ಅಭ್ಯರ್ಥಿ ಹಾಗೂ ಬೆಂಬಲಿಗರ ನಡುವೆ ಸಂಘರ್ಷ ಉಂಟಾಗುವ ಸಾಧ್ಯತೆಗಳು ಹೆಚ್ಚಾಗಿರುವುದರಿಂದ ಶಾಂತಿ ಪಾಲನೆ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಗದಗ ಜಿಲ್ಲೆಯಾದ್ಯಂತ ನಿಷೇಧಾಜ್ಞೆ ಘೋಷಿಸುವುದು ಅವಶ್ಯಕವಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಿದ್ದಾರೆ.

ಈ ಅವಧಿಯಲ್ಲಿ 5 ಕ್ಕಿಂತ ಹೆಚ್ಚು ಜನರು ಗುಂಪು ಕೂಡಿ ಓಡಾಡುವುದನ್ನು ನಿಷೇಧಿಸಿದೆ. ದೇಹಕ್ಕೆ ಅಪಾಯವನ್ನು ಉಂಟು ಮಾಡಬಹುದಾದ ಯಾವುದೇ ಮಾರಕಾಸ್ತ್ರವನ್ನು ತೆಗೆದುಕೊಂಡು ಹೋಗುವುದನ್ನು ಮತ್ತು ತಿರುಗಾಡುವುದನ್ನು ಪ್ರತಿಬಂಧಿಸಲಾಗಿದೆ. ಈ ಅವಧಿಯಲ್ಲಿ ಯಾವುದೇ ಸಭೆ ಸಮಾರಂಭ ಅಥವಾ ಮೆರವಣಿಗೆಗಳನ್ನು ನಡೆಸುವುದನ್ನು ನಿಷೇಧಿಸಿದೆ. ಸಾರ್ವಜನಿಕವಾಗಿ ಯಾವುದೇ ವ್ಯಕ್ತಿಗಳ ಬಗ್ಗೆ ಪ್ರಚೋದನಾತ್ಮಕವಾಗಿ ತೇಜೋವಧೆ ಮಾಡುವಂತಹ ಸಾರ್ವಜನಿಕರ ಗಾಂಭೀರ್ಯ ಹಾಗೂ ನೈತಿಕತೆಗೆ ಭಂಗ ತರುವಂತಹ ಅಥವಾ ಕಾನೂನು ಮತ್ತು ಸುವ್ಯವಸ್ಥೆಗೆ ಭಂಗ ತರುವಂತಹ ಯಾವುದೇ ಕೃತ್ಯಗಳಲ್ಲಿ ತೊಡಗುವುದನ್ನು ನಿಷೇಧಿಸಲಾಗಿದೆ. ಈ ಆದೇಶವು ಶವ ಸಂಸ್ಕಾರ ಮದುವೆ ಹಾಗೂ ಧಾರ್ಮಿಕ ಸಭೆ ಸಮಾರಂಭಗಳಿಗೆ ಅನ್ವಯಿಸುವುದಿಲ್ಲ. ಪೆÇೀಲೀಸ್ ಅಧೀಕ್ಷಕರು ಈ ಆದೇಶವನ್ನು ಕಟ್ಟುನಿಟ್ಟಾಗಿ ಜಾರಿಯಲ್ಲಿ ತರಬೇಕು. ಆರಕ್ಷಕ ಅಧೀಕ್ಷಕರು, ಗದಗ ಇವರು ಈ ಆದೇಶವನ್ನು ಪರಿಣಾಮಕಾರಿಯಾಗಿ ಜ್ಯಾರಿಗೆ ಬರುವಂತೆ ಕ್ರಮ ಕೈಗೊಳ್ಳಬೇಕೆಂದು ಪ್ರತಿಬಂಧಕಾಜ್ಞೆ ಆದೇಶದಲ್ಲಿ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.