ಮಧ್ಯಕರ್ನಾಟಕದ ದಾವಣಗೆರೆ ಜಿಲ್ಲೆಯ ಯಾವ ಕ್ಷೇತ್ರಕ್ಕೆ ಕಾಲಿಟ್ಟರೂ ವಿಧಾನಸಭಾ ಚುನಾವಣೆ ಕಾವು ಶುರುವಾಗಿದೆ. ಟಿಕೆಟ್ ಆಕಾಂಕ್ಷಿಗಳು ಜನರೊಂದಿಗೆ ಬೆರೆತು ಬೆಂಬಲಿಗರ ದಂಡು ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅಭ್ಯರ್ಥಿ ಯಾರಾಗುತ್ತಾರೆಂಬ ಲೆಕ್ಕಾಚಾರ ಗರಿಗೆದರಿವೆ. ಏಳು ಕ್ಷೇತ್ರಗಳ ಪೈಕಿ 5ರಲ್ಲಿ ಶಾಸಕರನ್ನು ಹೊಂದಿರುವ ಬಿಜೆಪಿಗೆ ದಾವಣಗೆರೆ ಭದ್ರಕೋಟೆಯಾಗಿದೆ. ಆದರೆ, ಈ ಬಾರಿ ಕೆಲ ಕ್ಷೇತ್ರಗಳಲ್ಲಿ ಸಮರ್ಥ ಅಭ್ಯರ್ಥಿಗಳನ್ನು ಕಣಕ್ಕಿಳಿಸದಿದ್ದರೆ ಚಿತ್ರಣ ಬದಲಾಗಬಹುದು. 2 ಸ್ಥಾನಗಳಲ್ಲಷ್ಟೇ ಗೆದ್ದಿರುವ ಕಾಂಗ್ರೆಸ್ ಮತ್ತೆ ಪುಟಿದೇಳುವ ಉತ್ಸಾಹದಲ್ಲಿದೆ. ಹರಿಹರ ಬಿಟ್ಟರೆ ಉಳಿದೆಡೆ ಜೆಡಿಎಸ್ ಪ್ರಾಬಲ್ಯವಿಲ್ಲ. ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆಯಲಿದೆ.
| ರಮೇಶ ಜಹಗೀರದಾರ್ ದಾವಣಗೆರೆ
ಜಗಳೂರಲ್ಲಿ ರಾಮಚಂದ್ರ ಪ್ರಬಲ
ಪರಿಶಿಷ್ಟ ಪಂಗಡ ಮೀಸಲಾತಿಯ ಜಗಳೂರು ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್ಗೆ ಪೈಪೋಟಿ ಇಲ್ಲ. ಹಾಲಿ ಶಾಸಕ ಎಸ್.ವಿ. ರಾಮಚಂದ್ರ ಬಿಟ್ಟು ಬೇರೆ ಹೆಸರು ಚಾಲ್ತಿಯಲ್ಲಿಲ್ಲ. 2008ರಲ್ಲಿ ಕಾಂಗ್ರೆಸ್ನಿಂದ ಆಯ್ಕೆಯಾದ ಅವರು, ನಂತರ ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು. 2018ರಲ್ಲಿ 3ನೇ ಬಾರಿ ಶಾಸಕರಾದರು. ಬರದ ತಾಲೂಕನ್ನು ಹಸಿರಾಗಿಸುವ ಕನಸಿನೊಂದಿಗೆ 57 ಕೆರೆಗಳನ್ನು ತುಂಬಿಸುವ ಮತ್ತು ಭದ್ರಾ ಮೇಲ್ದಂಡೆ ಯೋಜನೆಯ ಸಾಕಾರಕ್ಕೆ ನಡೆಸಿರುವ ಪ್ರಯತ್ನ ಅವರು ಮತ್ತೊಮ್ಮೆ ಜನರ ಬಳಿಗೆ ಹೋಗಲು ಧೈರ್ಯ ತುಂಬಿದೆ. ಆದರೆ, ಕಾಂಗ್ರೆಸ್ನ ಪರಿಸ್ಥಿತಿ ಹಾಗಿಲ್ಲ. ಕಳೆದ ಬಾರಿ ಸೋಲು ಕಂಡಿದ್ದ ಮಾಜಿ ಶಾಸಕ ಎಚ್.ಪಿ. ರಾಜೇಶ್ಗೆ ಈ ಸಲ ಟಿಕೆಟ್ ಅಷ್ಟು ಸುಲಭವಿಲ್ಲ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿರುವ ಚಿಕ್ಕಮ್ಮನಟ್ಟಿ ದೇವೇಂದ್ರಪ್ಪ, ಕೆ.ಪಿ. ಪಾಲಯ್ಯ, ಕಳೆದ ಬಾರಿ ಬಿ ಫಾರಂ ದೊರೆತು, ಕಡೇ ಗಳಿಗೆಯಲ್ಲಾದ ಬದಲಾವಣೆಯಿಂದ ಅವಕಾಶ ಕೈತಪ್ಪಿ ಬಂಡಾಯ ಎದ್ದಿದ್ದ ಪುಷ್ಪಾ ಲಕ್ಷ್ಮಣಸ್ವಾಮಿ ಕೂಡಾ ರೇಸ್ನಲ್ಲಿದ್ದಾರೆ. ಜೆಡಿಎಸ್ ಹೊಸ ಅಭ್ಯರ್ಥಿ ಹುಡುಕಾಟದಲ್ಲಿದೆ.
ಹೊನ್ನಾಳಿಯಲ್ಲಿ ಉಳಿಯುವರೇ ರೇಣು?
ಹೊನ್ನಾಳಿ ಕ್ಷೇತ್ರದಲ್ಲಿ ಬಿಜೆಪಿ-ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಡಲಿದೆ. ಬಿಜೆಪಿ ಶಾಸಕ, ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ ಅವರೇ ಮತ್ತೊಮ್ಮೆ ಅಭ್ಯರ್ಥಿ ಯಾಗುವುದು ಖಚಿತ. ಜನರೊಂದಿಗೆ ಬೆರೆಯುವ ಸ್ವಭಾವ, ಅಭಿವೃದ್ಧಿ ಕಾರ್ಯಗಳ ಬಲ, ಕರೊನಾ ಅವಧಿಯಲ್ಲಿ ಕೈಗೊಂಡ ಆರೋಗ್ಯ ಸೇವೆ ಪ್ರಮುಖ ಅಸ್ತ್ರಗಳು. ಕಾಂಗ್ರೆಸ್ನಲ್ಲಿ 2 ಬಾರಿ ಶಾಸಕರಾಗಿರುವ ಶಾಂತನಗೌಡರೂ ಕಣಕ್ಕಿಳಿ ಯುವ ಸಿದ್ಧತೆ ನಡೆಸಿದ್ದರೆ, ಎಚ್.ಬಿ. ಮಂಜಪ್ಪ ಅವರೂ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಮುಖಂಡ ಬಿ. ಸಿದ್ದಪ್ಪ ಮತ್ತೊಬ್ಬ ಆಕಾಂಕ್ಷಿ. ಕಾಂಗ್ರೆಸ್ನಲ್ಲಿ ಟಿಕೆಟ್ ವಂಚಿತರು ಬಂಡಾಯ ಎದ್ದರೆ ಅದರ ಲಾಭ ಬಿಜೆಪಿಗೆ ಆಗಲಿದೆ.
ಉತ್ತರಾಧಿಪತಿ ಹುಡುಕಾಟ
ದಾವಣಗೆರೆ ಉತ್ತರ ಕ್ಷೇತ್ರದಿಂದ ಈ ಬಾರಿ ಬಿಜೆಪಿ ಅಭ್ಯರ್ಥಿ ಯಾರು ಎಂಬ ಪ್ರಶ್ನೆಗೆ ಉತ್ತರ ಸಿಗಬೇಕಿದೆ. ಏಕೆಂದರೆ ಪಕ್ಷದ ಹಿರಿಯ ಶಾಸಕ, ಮಾಜಿ ಸಚಿವ ಎಸ್.ಎ.ರವೀಂದ್ರನಾಥ್ ವಯಸ್ಸು ಮತ್ತು ಅನಾರೋಗ್ಯ ಕಾರಣಕ್ಕೆ ಸ್ಪರ್ಧಿಸುವ ಸಾಧ್ಯತೆ ಕಡಿಮೆ. ಪ್ರಬಲ ಎದುರಾಳಿಗೆ ಟಕ್ಕರ್ ಕೊಡಬಲ್ಲ ಸಮರ್ಥ ವ್ಯಕ್ತಿಯನ್ನು ಹುಡುಕುವುದು ಕಮಲ ಪಡೆಗೆ ಅಷ್ಟು ಸುಲಭವಿಲ್ಲ. ಸಂಘಟನೆ ಹಿನ್ನೆಲೆಯ ಮಾಜಿ ಮೇಯರ್ ಎಸ್.ಟಿ. ವೀರೇಶ್ ತಯಾರಿ ನಡೆಸಿದ್ದಾರೆ. ವಿಧಾನ ಪರಿಷತ್ ಮಾಜಿ ಮುಖ್ಯ ಸಚೇತಕ ಡಾ.ಎ.ಎಚ್. ಶಿವಯೋಗಿಸ್ವಾಮಿ ಹೆಸರು ಕೇಳಿಬರುತ್ತಿದೆ. ಇನ್ನೊಂದೆಡೆ ಸಿಎಂ ಬಸವರಾಜ ಬೊಮ್ಮಾಯಿ ಕ್ಷೇತ್ರದಿಂದ ಕಣಕ್ಕಿಳಿಯಲಿದ್ದಾರೆಂಬ ಸುದ್ದಿಯೂ ಹರಿದಾಡುತ್ತಿದೆ. ಲೋಕಿಕೆರೆ ನಾಗರಾಜ, ಸುಧಾ ಜಯರುದ್ರೇಶ್, ಕೆ.ಎಂ. ಸುರೇಶ್, ಬಿ.ಎಸ್.ಜಗದೀಶ್ ಆಕಾಂಕ್ಷಿಗಳಿದ್ದಾರೆ. ಕೈ ಪಾಳಯದಲ್ಲಿ ಈ ಗೊಂದಲವಿಲ್ಲ, ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ 2018ರ ಚುನಾವಣೆ ಸೋಲಿನ ಸೇಡು ತೀರಿಸಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.
ಶಾಮನೂರು ಮತ್ತೆ ಸ್ಪರ್ಧೆ ಹುಮ್ಮಸ್ಸು
ದಾವಣಗೆರೆ ದಕ್ಷಿಣ ಕಾಂಗ್ರೆಸ್ನ ಅಭೇದ್ಯ ಕೋಟೆಯಾಗಿದ್ದು, ಹಿರಿಯ ಶಾಸಕ ಡಾ.ಶಾಮನೂರು ಶಿವಶಂಕರಪ್ಪ 6ನೇ ಬಾರಿಗೆ ಕಣಕ್ಕಿಳಿಯುವ ಹುಮ್ಮಸ್ಸು ತೋರಿದ್ದಾರೆ. ‘ವಯಸ್ಸು’ ಅಡ್ಡಿಯೇ ಅಲ್ಲ ಎಂಬಂತೆ 92ರ ಹರೆಯದಲ್ಲೂ ಉತ್ಸಾಹದಿಂದ ಚುನಾವಣೆ ಎದುರು ನೋಡುತ್ತಿದ್ದಾರೆ. ಒಂದು ವೇಳೆ ಅವರು ಹಿಂದೆ ಸರಿದರೆ ಮಲ್ಲಿಕಾರ್ಜುನ್ ದಕ್ಷಿಣಕ್ಕೆ ಹೋಗಿ, ಉತ್ತರದಲ್ಲಿ ಶಾಮನೂರು ಕುಟುಂಬದ ಇನ್ನೊಬ್ಬರು ಸ್ಪರ್ಧಿಸುವ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬಿಜೆಪಿಗೆ ತಲೆನೋವಾಗುವ ಕ್ಷೇತ್ರಗಳಲ್ಲಿ ದಾವಣಗೆರೆ ದಕ್ಷಿಣವೂ ಪ್ರಮುಖವಾಗಿದೆ. ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ 4 ಚುನಾವಣೆಗಳನ್ನು ಎದುರಿಸಿ ಸೋತರೂ ಪೈಪೋಟಿ ನೀಡಿದವರು. ಈ ಬಾರಿಯೂ ಪಕ್ಷ ಅವರಿಗೇ ಮಣೆ ಹಾಕುವುದೇ ಎಂಬುದನ್ನು ಕಾದು ನೋಡಬೇಕು. ಮಾಜಿ ಮೇಯರ್ ಬಿ.ಜಿ. ಅಜಯ್ ಕುಮಾರ್ ಹಲವು ಚಟುವಟಿಕೆಗಳ ಮೂಲಕ ಗುರುತಿಸಿಕೊಳ್ಳುತ್ತಿದ್ದು ಬಿಜೆಪಿ ಟಿಕೆಟ್ನ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಶ್ರೀನಿವಾಸ ದಾಸಕರಿಯಪ್ಪ ಹೆಸರೂ ಕೇಳಿಬಂದಿದೆ.
ಹರಿಹರದಲ್ಲಿ ತ್ರಿಕೋನ ಹಣಾಹಣಿ
ಜಿಲ್ಲೆಯಲ್ಲಿ ಜೆಡಿಎಸ್ ನಂಬಿಕೊಂಡಿರುವ ಏಕೈಕ ಕ್ಷೇತ್ರ ಹರಿಹರ. ಪ್ರತಿ ಚುನಾವಣೆಯಲ್ಲೂ ಇಲ್ಲಿ ತ್ರಿಕೋನ ಸ್ಪರ್ಧೆ ಸಾಮಾನ್ಯ. ಮಾಜಿ ಶಾಸಕ ಎಚ್.ಎಸ್.ಶಿವಶಂಕರ್ ಜೆಡಿಎಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯುವುದು ನಿಶ್ಚಿತ. ಹಾಲಿ ಶಾಸಕ ಕಾಂಗ್ರೆಸ್ನ ಎಸ್. ರಾಮಪ್ಪ ಮಾಜಿ ಸಿಎಂ ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದು ಸ್ಪರ್ಧಿಸುವುದಾದರೆ ಕ್ಷೇತ್ರವನ್ನು ಬಿಟ್ಟು ಕೊಡುವೆ ಎಂದು ಇತ್ತೀಚೆಗೆ ಹೇಳಿಕೆ ನೀಡಿದ್ದರು. ಈ ಹಿಂದೆ ಬಿಜೆಪಿ ಸೇರುವಂತೆ ಆಹ್ವಾನ ಬಂದಾಗ ಪಕ್ಷ ನಿಷ್ಠೆ ತೋರಿಸಿದ್ದು ಪ್ಲಸ್ ಪಾಯಿಂಟ್. ಆದರೂ, ಟಿಕೆಟ್ ಸಿಗುವುದು ಅಷ್ಟು ಸುಲಭವಿಲ್ಲ. ಎಂ. ನಾಗೇಂದ್ರಪ್ಪ, ಎನ್.ಎಚ್. ಶ್ರೀನಿವಾಸ್, ವಿಟಿಯು ವಿಶ್ರಾಂತ ಕುಲಪತಿ ದೀಟೂರು ಮಹೇಶ್ವರಪ್ಪ ರೇಸ್ನಲ್ಲಿದ್ದಾರೆ. ಇವರಲ್ಲದೆ ಇತ್ತೀಚೆಗೆ ಕಾಂಗ್ರೆಸ್ ಸೇರಿರುವ ನಿವೃತ್ತ ಪೊಲೀಸ್ ಅಧಿಕಾರಿ ಕುಣಬೆಳೆಕೆರೆ ದೇವೇಂದ್ರಪ್ಪ ಕೂಡ ಟಿಕೆಟ್ ಆಕಾಂಕ್ಷಿ. ಬಿಜೆಪಿಯಲ್ಲಿ ಮಾಜಿ ಶಾಸಕ ಬಿ.ಪಿ. ಹರೀಶ್ ಪ್ರಬಲ ಆಕಾಂಕ್ಷಿ. ಬಿಜೆಪಿ ಜಿಲ್ಲಾ ಅಧ್ಯಕ್ಷ ಎಸ್.ಎಂ. ವೀರೇಶ ಹನಗವಾಡಿ ಅವರೂ ಅಷ್ಟೇ ಕಸರತ್ತು ನಡೆಸಿದ್ದಾರೆ. ಚಂದ್ರಶೇಖರ ಪೂಜಾರ್ ಅವರೂ ಟಿಕೆಟ್ಗಾಗಿ ಪ್ರಯತ್ನ ನಡೆಸಿದ್ದಾರೆ.
ಮಾಯಕೊಂಡದಲ್ಲಿ ಆಕಾಂಕ್ಷಿಗಳ ದಂಡು
ಪರಿಶಿಷ್ಟ ಜಾತಿ ಮೀಸಲಾತಿಯ ಮಾಯಕೊಂಡ ಕ್ಷೇತ್ರದಲ್ಲಿ ಆಕಾಂಕ್ಷಿಗಳ ದಂಡೇ ಇದೆ. ಬಿಜೆಪಿ ಶಾಸಕ ಪ್ರೊ.ಎನ್. ಲಿಂಗಣ್ಣ ವಯಸ್ಸು ಮತ್ತು ಆರೋಗ್ಯದ ಕಾರಣಕ್ಕೆ ಸ್ಪರ್ಧಿಸುವುದು ಅನುಮಾನ. ಮಾಜಿ ಶಾಸಕ ಬಸವರಾಜ ನಾಯ್ಕ, ತಾಪಂ ಮಾಜಿ ಸದಸ್ಯ ಆಲೂರು ನಿಂಗರಾಜ್ ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಉಪ ಜಾತಿಗಳ ಜನಸಂಖ್ಯೆ ಲೆಕ್ಕಾಚಾರದ ಮೇಲೆ ಶ್ಯಾಮ್ ಹನುಮಂತ ನಾಯ್ಕ, ಎಚ್.ಕೆ. ಬಸವರಾಜ್, ರಮೇಶ ನಾಯ್ಕ ಹೆಸರು ಕೇಳಿಬಂದಿವೆ. ಜಿಪಂ ಮಾಜಿ ಸದಸ್ಯ ಬಿ.ಎಂ. ವಾಗೀಶ ಸ್ವಾಮಿ ಬೇಡ ಜಂಗಮ ಮೀಸಲಾತಿಯಡಿ ಟಿಕೆಟ್ಗೆ ಬೇಡಿಕೆ ಇಟ್ಟಿದ್ದಾರೆ. ಕಾಂಗ್ರೆಸ್ನಲ್ಲೂ ಅರ್ಧ ಡಜನ್ಗೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಕಳೆದ ಚುನಾವಣೆಯಲ್ಲಿ ಪೈಪೋಟಿ ನೀಡಿದ್ದ ಕೆ.ಎಸ್. ಬಸವಂತಪ್ಪ ನಿರಂತರವಾಗಿ ಕ್ಷೇತ್ರದ ಸಂಪರ್ಕದಲ್ಲಿದ್ದಾರೆ. ಮಾಜಿ ಸಚಿವ ಶಿವಮೂರ್ತಿ ನಾಯ್ಕ ಮತ್ತೊಂದು ಅವಕಾಶಕ್ಕೆ ಕಾಯುತ್ತಿದ್ದಾರೆ. ಡಿ. ಬಸವರಾಜ್, ಡಾ.ವೈ. ರಾಮಪ್ಪ, ಬಿ.ಎಚ್. ವೀರಭದ್ರಪ್ಪ ಜತೆಗೆ ಹೊಸ ಮುಖ ಸವಿತಾಬಾಯಿ ಅವರೂ ಟಿಕೆಟ್ಗೆ ಪ್ರಯತ್ನಿಸುತ್ತಿದ್ದಾರೆ.
ಚನ್ನಗಿರಿಯಲ್ಲಿ ಮಾಡಾಳು ವರ್ಸಸ್ ವಡ್ನಾಳ್
ಅಡಕೆ ನಾಡು ಚನ್ನಗಿರಿ ಕ್ಷೇತ್ರದಲ್ಲಿ ಬಿಜೆಪಿ ಶಾಸಕ ಮಾಡಾಳು ವಿರೂಪಾಕ್ಷಪ್ಪ ಮತ್ತೊಮ್ಮೆ ಸ್ಪರ್ಧಿಸುವರೆ ಅಥವಾ ಪುತ್ರ ಮಾಡಾಳು ಮಲ್ಲಿಕಾರ್ಜುನ್ಗೆ ಕ್ಷೇತ್ರ ಬಿಟ್ಟು ಕೊಡುವರೆ ಎಂಬುದು ಸ್ಪಷ್ಟವಾಗಿಲ್ಲ. ವಯಸ್ಸಿನ ಕಾರಣಕ್ಕೆ ವಿರೂಪಾಕ್ಷಪ್ಪ ಹಿಂದೆ ಸರಿದು ಮಗನಿಗೆ ಅವಕಾಶ ಕಲ್ಪಿಸುವ ಚರ್ಚೆ ಚಾಲ್ತಿಯಲ್ಲಿದೆ. ಆದರೆ, ಎದುರಾಳಿ ಯಾರು ಎಂಬುದರ ಮೇಲೆ ಅದು ನಿರ್ಧಾರವಾಗಲಿದೆ. ಕಾಂಗ್ರೆಸ್ನಲ್ಲಿ ಮಾಜಿ ಶಾಸಕ ವಡ್ನಾಳ್ ರಾಜಣ್ಣ ಸ್ಪರ್ಧೆಗೆ ಅಂತಿಮ ತೀರ್ಮಾನ ಆದಂತಿಲ್ಲ. ಒಂದು ವೇಳೆ ಅವರು ಸ್ಪರ್ಧಿಸದಿದ್ದರೆ ಅವರ ಸಹೋದರನ ಪುತ್ರ ವಡ್ನಾಳ್ ಅಶೋಕ್ ಅಥವಾ ವಡ್ನಾಳ್ ಜಗದೀಶ್ ಅವರಿಗೆ ಟಿಕೆಟ್ ಕೇಳಬಹುದು. ಉದ್ಯಮಿ ಶಿವಗಂಗಾ ಬಸವರಾಜ್ ಕಳೆದ ನಾಲ್ಕು ವರ್ಷದಿಂದ ಕ್ಷೇತ್ರದಲ್ಲಿ ಓಡಾಡುತ್ತಿದ್ದು ಟಿಕೆಟ್ ಮೇಲೆ ಕಣ್ಣಿಟ್ಟಿದ್ದಾರೆ. ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿರುವ ಹೊದಿಗೆರೆ ರಮೇಶ್ ಕೂಡ ಆಕಾಂಕ್ಷಿ. ಮಾಜಿ ಸಿಎಂ ಜೆ.ಎಚ್.ಪಟೇಲರ ಪುತ್ರ, ಮಾಜಿ ಶಾಸಕ ಮಹಿಮಾ ಜೆ.ಪಟೇಲ್ ಜೆಡಿಯುನಿಂದ ಕಣಕ್ಕಿಳಿಯುವ ಕುರಿತು ಇನ್ನೂ ಸ್ಪಷ್ಟ ತೀರ್ವನಕ್ಕೆ ಬಂದಿಲ್ಲ. ಹಾಗೆಂದು ಸ್ಪರ್ಧಿಸುವುದೇ ಇಲ್ಲ ಎಂದು ಹೇಳಲಾಗದು. ಮಹಿಮಾ ಸಹೋದರ ತೇಜಸ್ವಿ ಪಟೇಲ್ ಕಾಂಗ್ರೆಸ್ನಿಂದ ಅವಕಾಶ ನಿರೀಕ್ಷೆಯಲ್ಲಿ್ಲ್ದಾರೆ. ಪಕ್ಷೇತರರಾಗಿ ಸ್ಪರ್ಧಿಸುವ ಚಿಂತನೆಯೂ ಇದೆ.