ಜಿಲ್ಲೆ

ಚುನಾವಣೆ ಆಯೋಗ ಕೇಂದ್ರ ಸರ್ಕಾರದ ಕೈಗೊಂಬೆ; ಕೆಪಿಸಿಸಿ ಕಾರ್ಯದರ್ಶಿ ಎಸ್.ಮನೋಹರ್ ಆರೋಪ

ಬೆಂಗಳೂರು: ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳಲ್ಲಿ ಮತಗಳ್ಳತನ ಮಾಡಿರುವ ಬಿಜೆಪಿ ಪಕ್ಷ ಅಕ್ರಮ ಮತ ಚಲಾವಣೆ ಮಾಡಿಸಿ ಕೇಂದ್ರದಲ್ಲಿ ಅಧಿಕಾರ ಬಂದಿದ್ದು, ರಾಹುಲ್ ಗಾಂಧಿ ಮತಗಳ್ಳತನಕ್ಕೆ ಸಂಪೂರ್ಣ ಸಾಕ್ಷಿ ನೀಡಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಹಾಗೂ ಎಂಇಐ ಅಧ್ಯಕ್ಷ ಎಸ್.ಮನೋಹರ ಹೇಳಿದ್ದಾರೆ.

ಫ್ರೀಡಂ ಪಾರ್ಕ್ ಆವರಣದಲ್ಲಿ ನಡೆದ ಬೃಹತ್ ಪ್ರತಿಭಟನೆಗೂ ಮುನ್ನ ಕಾಂಗ್ರೆಸ್ ಭವನದಿಂದ ಫ್ರೀಡಂ ಪಾರ್ಕ್‌ವರೆಗೆ ನಡೆದ ವಿನೂತನ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಂಡು ಮಾತನಾಡಿದರು.

ಒಬ್ಬ ಮತದಾರ ಹಲವಾರು ಕಡೆ ಮತಗಳನ್ನು ಚಲಾವಣೆ ಮಾಡಿದ್ದಾನೆ. ಒಂದೇ ಒಂದು ಚಿಕ್ಕ ಮನೆಯಲ್ಲಿ 80ಕ್ಕು ಹೆಚ್ಚು ಮತದಾರರು ಇರುವ ಮತಚೀಟಿಗಳಿವೆ. ಹಲವಾರು ಮೋಸದ ತಂತ್ರಗಳನ್ನು ರೂಪಿಸಿ ಲಕ್ಷಾಂತರ ಜನರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಬಿಜೆಪಿ ಚುನಾವಣೆಯಲ್ಲಿ ಷಡ್ಯಂತ್ರದ ಮೂಲಕ ಜಯಗಳಿಸಿದೆ. ಈ ಬಗ್ಗೆ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಸಂಪೂರ್ಣ ಮಾಹಿತಿ ಮತ್ತು ಸಾಕ್ಷಿ ನೀಡಿದ್ದಾರೆ. ಚುನಾವಣೆ ಆಯೋಗ ಮತ್ತು ಕೇಂದ್ರ ಸರ್ಕಾರ ಇದಕ್ಕೆ ಉತ್ತರ ಕೊಡಬೇಕು ಎಂದು ಮನೋಹರ್ ಹೇಳಿದರು.

ಈ ವೇಳೆ ಕಾಂಗ್ರೆಸ್ ಮುಖಂಡರಾದ ಎ. ಆನಂದ್, ಸಲೀಂ, ಪ್ರಕಾಶ್, ಆನಂದ್ ಕುಮಾರ್, ಚಂದ್ರಶೇಖರ, ಪುಟ್ಟರಾಜು, ಉಮೇಶ್ , ಕುಶಾಲ್ ಅರವೇಗೌಡ, ಮಾಧವ ಹನೂರು, ಸುಂಕದಕಟ್ಟೆ ನವೀನ್, ಸಾಯಿ ನವೀನ, ಓಬಳೇಶ್, ಸಂಜಯ್ ಸಸಿಮಠ ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಪಾದಯಾತ್ರೆ ಮೂಲಕ ಆಗಮಿಸಿ ಪ್ರತಿಭಟನೆಯಲ್ಲಿ ಪಾಲ್ಗೊಂಡರು.

ಫ್ರೀಡಂಪಾರ್ಕ್‌ನಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ ಸಚಿವರು, ಶಾಸಕರು, ಸಾವಿರಾರು ಕಾಂಗ್ರೆಸ್ ಕಾರ್ಯಕರ್ತರು ಪಾಲ್ಗೊಂಡಿದ್ದರು.