ಜಿಲ್ಲೆ

ಅಧಿಕೃತವಾಗಿ ಅಖಾಡಕ್ಕಿಳಿದ ಮರಿತಿಬ್ಬೇಗೌಡ: ಕಾಂಗ್ರೆಸ್ ಪರ ನಿಂತ ಜೆಡಿಎಸ್ ಎಂಎಲ್‌ಸಿ

reportermys

ಮಂಡ್ಯ: ದಳಪತಿಗಳ ನಿರ್ಧಾರಗಳಿಂದ ಬೇಸತ್ತು ಪಕ್ಷದ ಚಟುವಟಿಕೆಗಳಿಂದ ದೂರಾಗಿರುವ ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ ಕಾಂಗ್ರೆಸ್ ಪಾಳಯದಲ್ಲಿ ಕಾಣಿಸಿಕೊಂಡರು. ಇದರೊಂದಿಗೆ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪಿ.ಎಂ.ನರೇಂದ್ರಸ್ವಾಮಿ ಅವರ ಮತಯಾಚನೆ ಮಾಡುವುದನ್ನು ಅಧಿಕೃತಗೊಳಿಸಿದರು.

ಹಲವು ತಿಂಗಳಿಂದ ಪಕ್ಷ ಹಾಗೂ ಜೆಡಿಎಸ್ ವರಿಷ್ಠರಿಂದ ಮರಿತಿಬ್ಬೇಗೌಡ ಅಂತರ ಕಾಯ್ದುಕೊಂಡಿದ್ದರು. ಈ ನಡುವೆ ದಕ್ಷಿಣ ಪದವೀಧರ ಕ್ಷೇತ್ರದ ಚುನಾವಣೆಯಲ್ಲಿ ವಿರೋಧದ ನಡುವೆಯೂ ರಾಮುಗೆ ಅವಕಾಶ ನೀಡಲಾಯಿತು. ಇದರಿಂದ ಆಕ್ರೋಶಗೊಂಡಿದ್ದ ಎಂಎಲ್‌ಸಿ, ಬಹಿರಂಗವಾಗಿಯೇ ಕಾಂಗ್ರೆಸ್ ಅಭ್ಯರ್ಥಿ ಮಧು ಮಾದೇಗೌಡ ಅವರ ಪರ ಮತಯಾಚನೆ ಮಾಡಿದ್ದರು. ಈ ಮೂಲಕ ಪಕ್ಷ ಸೇರ್ಪಡೆ ಮುನ್ಸೂಚನೆ ನೀಡಿದ್ದರು. ತಾಂತ್ರಿಕ ಕಾರಣದಿಂದಾಗಿ ಅಧಿಕೃತವಾಗಿ ಕಾಂಗ್ರೆಸ್ ಸೇರಲು ಸಾಧ್ಯವಾಗಿಲ್ಲ.

ಈ ನಡುವೆ ವಿಧಾನಸಭಾ ಚುನಾವಣೆಯಲ್ಲಿಯೂ ಕಾಂಗ್ರೆಸ್ ಬೆಂಬಲಿಸುವ ಸೂಚನೆ ಇತ್ತು. ಅದರಂತೆ ಬುಧವಾರ ರಾತ್ರಿ ಮಳವಳ್ಳಿ ಪಟ್ಟಣದಲ್ಲಿ ಪಿ.ಎಂ.ನರೇಂದ್ರಸ್ವಾಮಿ ಅವರ ಮತಯಾಚಿಸಲು ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಉಪಾಧ್ಯಕ್ಷ ಎನ್.ಚಲುವರಾಯಸ್ವಾಮಿ ಆಗಮಿಸಿದ್ದರು. ಈ ವೇಳೆ ವೇದಿಕೆಯಲ್ಲಿ ಮರಿತಿಬ್ಬೇಗೌಡ ಕಾಣಿಸಿಕೊಂಡರು. ಇನ್ನು ಶೀಘ್ರದಲ್ಲಿಯೇ ಸುದ್ದಿಗೋಷ್ಠಿ ಮಾಡಲಿದ್ದು, ಜೆಡಿಎಸ್‌ನಲ್ಲಿ ತಮಗಾದ ಬೇಸರದ ಬಗ್ಗೆ ಮಾಹಿತಿ ಹಂಚಿಕೊಳ್ಳಲಿದ್ದಾರೆಂದು ತಿಳಿದುಬಂದಿದೆ. ಮರಿತಿಬ್ಬೇಗೌಡ ಅವರು ಕಾಂಗ್ರೆಸ್ ಬೆಂಬಲ ನೀಡಿದರಿಂದ ಜೆಡಿಎಸ್‌ಗೆ ನಷ್ಟವಾಗಲಿದೆ.