ಜಿಲ್ಲೆ

ಬಿಸಿಲೇರುತ್ತಿದ್ದಂತೆ ಮತದಾನ ಬಿರುಸು ; ಶಿರಾ ನಗರಸಭೆಗೆ ಶೇ. 79.81 ಮತದಾನ ; 30ರಂದು ಮತ ಎಣಿಕೆ

Tumakuru

ಶಿರಾ : ತೀವ್ರ ಜಿದ್ದಾಜಿದ್ದಿನಿಂದ ಕೂಡಿದ್ದ ನಗರಸಭೆ ಚುನಾವಣೆಗೆ ಮಂಗಳವಾರ ಶಾಂತಿಯುತ ಮತದಾನ ನಡೆಯಿತು. ಅತ್ಯಂತ ಉತ್ಸಾಹದಿಂದ ಚುನಾವಣೆ ಹಬ್ಬದಲ್ಲಿ ಮತದಾರರು ಭಾಗಿಯಾಗಿದ್ದು, ಶೇ.79.81 ದಾಖಲೆ ಮತದಾನವಾಗಿದೆ. ಅಭ್ಯರ್ಥಿಗಳ ಭವಿಷ್ಯ ಮತಪೆಟ್ಟಿಗೆ ಸೇರಿದೆ.

ಕಳೆದ 3 ವರ್ಷಗಳಿಂದ ಮೀಸಲು ವಿಚಾರ ಹೈಕೋರ್ಟ್ ಮೆಟ್ಟಿಲೇರಿದ್ದ ಹಿನ್ನೆಲೆಯಲ್ಲಿ ನಗರಸಭೆಯ 31 ವಾರ್ಡ್‌ಗಳ ಚುನಾವಣೆಯು ಸೋಮವಾರ ನಿಗದಿಯಾಗಿತ್ತು. 21ನೇ ವಾರ್ಡ್‌ನಿಂದ ಸ್ಪರ್ಧಿಸಿದ್ದ ಕಾಂಗ್ರೆಸ್ ಅಭ್ಯರ್ಥಿ ಚಾಂದ್‌ಪಾಷ ಅಕಾಲಿಕ ನಿಧನ ಹೊಂದಿದ್ದ ಹಿನ್ನೆಲೆಯಲ್ಲಿ ವಾರ್ಡ್ ಚುನಾವಣೆ ಮುಂದೂಡಲಾಗಿತ್ತು. ಉಳಿದ 30 ವಾರ್ಡ್‌ಗಳಿಗೆ ಮತದಾನ ನಡೆಯಿತು. ಬೆಳಗ್ಗೆ 7ಕ್ಕೆ ಕೊರೆಯುವ ಚಳಿಯಿಂದಾಗಿ ಮಂದಗತಿಯಲ್ಲಿ ಆರಂಭವಾದ ಮತದಾನವು ಬಿಸಿಲೇರುತ್ತಿದ್ದಂತೆ ಬಿರುಸು ಪಡೆಯಿತು. ಕೆಲವು ವಾರ್ಡ್‌ಗಳಲ್ಲಿ ಸಂಜೆ 5 ಗಂಟೆಯಾದರೂ ಸರತಿ ಸಾಲಿನಲ್ಲಿ ನಿಂತು ಮತದಾರರು ಹಕ್ಕು ಚಲಾಯಿಸಿದರು. ಅಹಿತಕರ ಘಟನೆ ನಡೆಯಲಿಲ್ಲ.

ಟಿಜೆಜೆ ಮತದಾನ: ನಗರಸಭೆ ಚುನಾವಣೆಯ ವಾರ್ಡ್ ನಂ.3ರ ಮತಗಟ್ಟೆಯಲ್ಲಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ದಂಪತಿ ಸಮೇತ ಆಗಮಿಸಿ ಹಕ್ಕು ಚಲಾವಣೆ ಮಾಡಿದರು. ನಗರಸಭೆ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಟಿಬಿಜೆ ಇಡೀ ವಾರ್ಡ್ ಸುತ್ತಿ ಅಭ್ಯರ್ಥಿಗಳ ಪರ ಮತಯಾಚಿಸಿದ್ದರು.

ಶೇ.79.81 ಮತದಾನ: ನಗರಸಭೆಯಲ್ಲಿ 12 ಅತಿಸೂಕ್ಷ್ಮ, 2 ಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸಲಾಗಿದ್ದು, ಈ ಮತಗಟ್ಟೆಗಳಲ್ಲಿ ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಲಾಗಿತ್ತು. ಒಟ್ಟು 43 ಮತಗಟ್ಟೆಗಳಲ್ಲಿ ಮತದಾನ ನಡೆಯಿತು. ಈ ಬಾರಿ 23027 ಪುರುಷರು, 23707 ಮಹಿಳೆಯರು ಹಕ್ಕು ಹೊಂದಿದ್ದು, 18019 ಪುರುಷರು, 18179 ಮಹಿಳೆಯರು ಮತ ಚಲಾಯಿಸಿದರು.

23ನೇ ವಾರ್ಡ್‌ನಲ್ಲಿ ನಕಲಿ ಮತ ಚಲಾಯಿಸಲು ಮುಂದಾಗಿದ್ದ ವ್ಯಕ್ತಿಯೋರ್ವನನ್ನು ಪತ್ತೆಹಚ್ಚಿದ ಚುನಾವಣಾ ಸಿಬ್ಬಂದಿ ಪೊಲೀಸರ ವಶಕ್ಕೆ ಒಪ್ಪಿಸಿದರು.

30ರಂದು ಮತ ಎಣಿಕೆ: ಮತಪೆಟ್ಟಿಗೆಗಳನ್ನು ಶಿರಾ ತಾಲೂಕು ಕಚೇರಿಯ ಡಿಮಸ್ಟರಿಂಗ್ ಕೇಂದ್ರಕ್ಕೆ ತರಲಾಯಿತು. ಸ್ಟ್ರಾಂಗ್ ರೂಂನಲ್ಲಿ ಸುರಕ್ಷಿತವಾಗಿ ಇಡಲಾಗಿದ್ದು. ಡಿ.30ರಂದು ಮತ ಎಣಿಕೆ ನಡೆಯಲಿದೆ.

ವಾರ್ಡ್ 7ರಲ್ಲಿ ಶೇ.88.44 ಮತದಾನ: ಶಿರಾ ನಗರಸಭೆಯ ವಾರ್ಡ್ ಸಂಖ್ಯೆ 7ರಲ್ಲಿ ಶೇ.88.44 ಮತದಾನವಾಗಿದ್ದು ಅತಿಹೆಚ್ಚು ಮತದಾನವಾಗಿದೆ. 787 ಮತದಾರರಲ್ಲಿ 696 ಮತದಾನ ಹಕ್ಕು ಚಲಾಯಿಸಿದ್ದಾರೆ. ಅದೇರೀತಿ ವಾರ್ಡ್ 11ರಲ್ಲಿ ಶೇ.70 ಮತದಾನವಾಗಿದ್ದು ಅತಿಕಡಿಮೆ ಮತದಾನ ದಾಖಲಾಗಿದೆ. 1813 ಮತದಾರರಲ್ಲಿ 1275 ಮಂದಿ ಹಕ್ಕು ಚಲಾಯಿಸಿದ್ದಾರೆ.

ಗ್ರಾಪಂ ಬೈಎಲೆಕ್ಷನ್ ಶೇ.71.22 ಮತದಾನ : ಶಾಶ್ವತ ನೀರಾವರಿ ಯೋಜನೆಗೆ ಆಗ್ರಹಿಸಿ ಚುನಾವಣೆ ಬಹಿಷ್ಕರಿಸಿದ್ದ ಗುಬ್ಬಿ ತಾಲೂಕು ಅಂಕಸಂದ್ರ ಗ್ರಾಪಂನ 10 ಕ್ಷೇತ್ರಗಳ 21 ಸದಸ್ಯ ಸ್ಥಾನ ಹಾಗೂ ತಿಪಟೂರು ತಾಲೂಕು ಹೊನ್ನವಳ್ಳಿ ಗ್ರಾಪಂ 6 ಕ್ಷೇತ್ರಗಳ 14 ಸದಸ್ಯ ಸ್ಥಾನಗಳಿಗೆ ಸೋಮವಾರ ಮತದಾನ ನಡೆಯಿತು. ಅಂಕಸಂದ್ರ ಗ್ರಾಪಂನಲ್ಲಿ ಶೇ.83.64 ಮತದಾನವಾಗಿದ್ದರೆ, ಹೊನ್ನವಳ್ಳಿ ಗ್ರಾಪಂನಲ್ಲಿ ಶೇ.87.43 ದಾಖಲೆ ಮತದಾನವಾಗಿದೆ. ಇನ್ನೂ ಗ್ರಾಪಂ 26 ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ನಡೆದಿದ್ದು ಒಟ್ಟಾರೆ ಶೇ.71.22 ಮತದಾನವಾಗಿದೆ.