ಜಿಲ್ಲೆ

20 ಕ್ಷೇತ್ರಗಳಲ್ಲಿ ಕೈ ಗೆಲ್ಲಲಿದೆ ; ಶಾಸಕ ಡಾ.ಜಿ.ಪರಮೇಶ್ವರ್ ವಿಶ್ವಾಸ

Tumakuru

ಪಾವಗಡ : ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಬಹುಮತ ಕಳೆದುಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾಂಗ್ರೆಸ್‌ನ 20ಕ್ಕೂ ಹೆಚ್ಚು ಸದಸ್ಯರನ್ನು ಮತದಾರರು, ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು, ಸದಸ್ಯರನ್ನು ಗೆಲ್ಲಿಸಲಿದ್ದಾರೆ ಎಂದು ಶಾಸಕ ಡಾ.ಜಿ.ಪರಮೇಶ್ವರ್ ವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದ ಎಸ್.ಎಸ್.ಕೆ. ಬಯಲು ರಂಗಮಂದಿರದಲ್ಲಿ ಶನಿವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಹಮ್ಮಿಕೊಂಡಿದ್ದ ಪರಿಷತ್ ಚುನಾವಣಾ ಮತಯಾಚನೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಬಿಟ್ ಕಾಯಿನ್ ದಂಧೆಯನ್ನು ಮುಖ್ಯಮಂತ್ರಿ ಸಮಗ್ರ ತನಿಖೆ ಮಾಡಿ ಎಂದರೆ, ಕಾಂಗ್ರೆಸ್‌ನವರು ಇದ್ದಾರೆ ಎನ್ನುತ್ತಾರೆ. ಆದರೆ ಅವರ‌್ಯಾರು ಎಂಬುದನ್ನು ಮಾತ್ರ ಹೇಳುತ್ತಿಲ್ಲ ಎಂದರು.

ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ವೇಳೆ ಬೃಹತ್ ಶಕ್ತಿಸೌಧ ನೀಡಿದ ಕೀರ್ತಿ ಕಾಂಗ್ರೆಸ್‌ಗೆ ಸಲ್ಲುತ್ತದೆ, ಬಿಜೆಪಿ ಅವಧಿಯಲ್ಲಿ ಇಂತಹ ಅಭಿವೃದ್ಧಿ ನಡೆದಿದ್ದರೆ ತೋರಿಸಿ ಎಂದು ಸವಾಲೆಸೆದರು.

ರಾಜ್ಯದ ರೈತರ ಸಾಲಮನ್ನಾ ಮಾಡಿದ ವೇಳೆ ನಾನು ಉಪಮುಖ್ಯಮಂತ್ರಿ ಎಂಬುದನ್ನು ಕುಮಾರಸ್ವಾಮಿ ಮರೆತಿದ್ದಾರೆ, ಎಚ್‌ಡಿಕೆ ಒಬ್ಬರೇ ಮಾಡಿದ ಸಾಲಮನ್ನಾ ಅಲ್ಲ. ಕಾಂಗ್ರೆಸ್ ಕೈಜೋಡಿಸಿ ಮಾಡಿಸಿದ ಸಾಲಮನ್ನಾ ಎಂಬುದನ್ನು ಮರೆಯಬಾರದು ಎಂದರು.

ಮಾಜಿ ಶಾಸಕ ರಾಜಣ್ಣ ಮಾತನಾಡಿ, ಜಿಲ್ಲೆ ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದು, ಜನತೆಗೆ ಸುಳ್ಳು ಭರವಸೆ ನೀಡಿ ಮತ ಪಡೆಯುವವರು ನಾವಲ್ಲ. ಕಾಂಗ್ರೆಸ್‌ಗೆ ಪಕ್ಷಾತೀತವಾಗಿ ಮತ ಬರಲಿದೆ ಎಂದರು.

ಶಾಸಕ ವೆಂಕಟರಮಣಪ್ಪ ಮಾತನಾಡಿ, ಬಿಜೆಪಿಯ ಲೋಕೇಶ್ ಗೌಡ ಸ್ಥಳೀಯರಲ್ಲ, ಜೆಡಿಎಸ್ ಅಭ್ಯರ್ಥಿ ಅನಿಲ್‌ಕುಮಾರ್ ಜಿಲ್ಲೆಯವರೇ ಆದರೂ ರಾಜಕೀಯದ ಅನುಭವವಿಲ್ಲ ಎಂದು ಹೇಳಿದರು.

ಗ್ರಾಮಾಂತರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ವೆಂಕಟೇಶ್ ಮಾತನಾಡಿದರು. ಮಾಜಿ ಶಾಸಕ ಸೋಮ್ಲ್ಲಾನಾಯ್ಕಾ, ರಫೀಕ್ ಅಹಮ್ಮದ್, ಪುರಸಭೆ ಅಧ್ಯಕ್ಷೆ ಗಂಗಮ್ಮ, ಉಪಾಧ್ಯಕ್ಷೆ ಸುಧಾಲಕ್ಷ್ಮಿ ಪ್ರಮೋದ್ ಕುಮಾರ್, ಮಾಜಿ ಅಧ್ಯಕ್ಷ ರಾಮಾಂಜಿನಪ್ಪ, ಸದಸ್ಯರಾದ ರಾಜೇಶ್, ತೆಂಗಿನಕಾಯಿ ರವಿ, ಸುದೇಶ್ ಬಾಬು, ಮುಖಂಡರು, ಗ್ರಾಪಂ ಸದಸ್ಯರು ಇದ್ದರು.