ತುಮಕೂರು : ವಿಧಾನ ಪರಿಷತ್ ಚುನಾವಣೆಗೆ ಕಾಂಗ್ರೆಸ್ ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಿದ್ದು, ನಿರೀಕ್ಷೆಯಂತೆ ಮಾಜಿ ಶಾಸಕ ಕೆ.ಎನ್.ರಾಜಣ್ಣ ಅವರ ಪುತ್ರ ಆರ್.ರಾಜೇಂದ್ರಗೆ ಟಿಕೆಟ್ ನೀಡಲಾಗಿದೆ.
ನಾಮಪತ್ರ ಸಲ್ಲಿಕೆಗೆ ಮಂಗಳವಾರ ಕೊನೆಯ ದಿನವಾಗಿದ್ದು, ಮೂರು ಪ್ರಮುಖ ಪಕ್ಷಗಳಾದ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ಶಕ್ತಿ ಪ್ರದರ್ಶನಕ್ಕೂ ಸಿದ್ಧತೆ ನಡೆಸಿದ್ದು ಸಾವಿರಾರು ಜನರು ಆಗಮಿಸುವ ಸಾಧ್ಯತೆಯಿದೆ. ಬಿಜೆಪಿ ಹಾಗೂ ಜೆಡಿಎಸ್ ಅಭ್ಯರ್ಥಿ ಘೋಷಿಸಿರುವ ಹಿನ್ನೆಲೆಯಲ್ಲಿ ನಾಮಪತ್ರ ಸಲ್ಲಿಕೆಗೆ ಸಿದ್ಧತೆ ನಡೆಸಿವೆ.
ಜೆಡಿಎಸ್ ತನ್ನ ಅಭ್ಯರ್ಥಿಯಾಗಿ ನಾಯಕ ಸಮುದಾಯದ ಅನಿಲ್‌ಕುಮಾರ್‌ಗೆ ಟಿಕೆಟ್ ನೀಡಿದ್ದು, ಕಾಂಗ್ರೆಸ್ ಕೂಡ ನಾಯಕ ಸಮುದಾಯದ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಎರಡೂ ಪ್ರಮುಖ ಪಕ್ಷಗಳು ಕಡಿಮೆ ಮತಗಳಿರುವ ನಾಯಕ ಸಮುದಾಯಕ್ಕೆ ಟಿಕೆಟ್ ಘೋಷಿಸಿರುವ ನಡುವೆ ಆಡಳಿತಾರೂಢ ಬಿಜೆಪಿ ಕುಂಚಿಟಿಗ ಸಮುದಾಯದ ಅಭ್ಯರ್ಥಿಗೆ ಟಿಕೆಟ್ ನೀಡಿರುವ ರಾಜಕೀಯ ತಂತ್ರಗಾರಿಕೆಯ ಫಲ ಫಲಿತಾಂಶದಲ್ಲಿ ಗೊತ್ತಾಗಲಿದೆ.
ಹೊರಗಿನ ಅಭ್ಯರ್ಥಿಗೆ ಮಣೆಹಾಕಲಾಗಿದೆ ಎಂಬ ಅಸಮಾಧಾನದ ನಡುವೆಯೂ ಬಿಜೆಪಿ ಕ್ಷೇತ್ರದಲ್ಲಿ ಮೊದಲ ಗೆಲುವು ಪಡೆಯಲು ರಾಜಕೀಯ ತಂತ್ರಗಾರಿಕೆ ನಡೆಸಿದ್ದು ಪ್ರಮುಖ ಮುಖಂಡರ ಜತೆ ಅಭ್ಯರ್ಥಿ ಎನ್.ಲೋಕೇಶ್ ನಾಮಪತ್ರ ಸಲ್ಲಿಸಲಿದ್ದಾರೆ. ಕಾಂಗ್ರೆಸ್ ಕೂಡ ಬೃಹತ್ ಮೆರವಣಿಗೆ ನಡೆಸಿದ್ದು ಜಿಲ್ಲೆಯ ಪ್ರಮುಖರ ಜತೆ ಆಗಮಿಸಿ ಆರ್.ರಾಜೇಂದ್ರ ಮತ್ತೊಮ್ಮೆ ನಾಮಪತ್ರ ಸಲ್ಲಿಸಲಿದ್ದಾರೆ.
‘ಜನತಾ ಸಂಗಮ’ದಲ್ಲಿ ಎಚ್‌ಡಿಡಿ, ಎಚ್‌ಡಿಕೆ ಭಾಗಿ : ಹಾಲಿ ಸದಸ್ಯ ಬಿಎಂಎಲ್ ಕಾಂತರಾಜು ಪಕ್ಷಾಂತರದ ನಂತರ ಜಿಲ್ಲೆಯಲ್ಲಿ ತನ್ನ ಸ್ಥಾನ ಉಳಿಸಿಕೊಳ್ಳಲು ಜೆಡಿಎಸ್ ಶತಾಯಗತಾಯ ಪ್ರಯತ್ನಿಸಲಿದ್ದು ಮಂಗಳವಾರ ಬೆಳಗ್ಗೆ 11ಕ್ಕೆ ಅನಿಲ್‌ಕುಮಾರ್ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಶಕ್ತಿ ಪ್ರದರ್ಶನಕ್ಕೆ ಮುಂದಾಗಲಿದೆ. ಈ ಸಂದರ್ಭದಲ್ಲಿ ಖುದ್ದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ, ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಕೂಡ ಗಾಜಿನಮನೆಯಲ್ಲಿ ಜರುಗುವ ‘ಜನತಾ ಸಂಗಮ’ ಸಮಾವೇಶದಲ್ಲಿ ಭಾಗವಹಿಸಿ ಚುನಾವಣೆಗೆ ಗೆಲುವಿಗೆ ರಣ ಕಹಳೆ ಮೊಳಗಿಸಲಿದ್ದಾರೆ.