ವಿಜಯವಾಣಿ ಸುದ್ದಿಜಾಲ ನೆಲಮಂಗಲ
ಕೋವಿಡ್ ಸಮಯದಲ್ಲಿ ನಾನು ತಪ್ಪು ಮಾಡಿದ್ದೇನೆಂಬುದು ಕೇವಲ ರಾಜಕೀಯ ಅಪಪ್ರಚಾರ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಯೋಜನೆಗಳನ್ನೇ ಈಗಿನ ಸರ್ಕಾರ ಮುಂದುವರಿಸಿದೆ ಎಂದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ಡಾ.ಕೆ.ಸುಧಾಕರ್ ಹೇಳಿದರು.
ವರ್ಷದಿಂದ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ನಾನು ಕೋವಿಡ್ ಸಮಯದಲ್ಲಿ ತಪ್ಪಾಗಿದ್ದಿದ್ದರೆ ಕ್ರಮ ಕೈಗೊಳ್ಳಬೇಕಿತ್ತು. ಇದು ರಾಜಕೀಯ ಅಪಪ್ರಚಾರವಾಗಿದ್ದು, ಇದಕ್ಕೆ ನಾನು ಅಂಜುವುದಿಲ್ಲ. ನಾನು ಆರೋಗ್ಯ ಸಚಿವನಾಗಿ ತಂದ ಯೋಜನೆಗಳನ್ನು ಈಗಿನ ಸರ್ಕಾರ ಮುಂದುವರಿಸಿದೆ. ನಾನು ಆರೋಗ್ಯ ಸಚಿವನಾಗಿ ಕೆಲಸ ಮಾಡಿದ್ದಕ್ಕೆ ತೃಪ್ತಿ ಇದೆ. ಯಾರಿಗಾದರೂ ಅನುಮಾನವಿದ್ದರೆ ರಸ್ತೆಯಲ್ಲಿ ಫಲಕ ಹಿಡಿಯದೆ ತನಿಖೆ ನಡೆಸುವ ಸಂಸ್ಥೆಗೆ ನೀಡಿ. ನನ್ನ ತಪ್ಪಿದ್ದರೆ ಶಿಕ್ಷೆ ಎದುರಿಸುತ್ತೇನೆ ಎಂದರು.
ನಾನು ಭೇಟಿ ನೀಡಿದ ಕಡೆಗಳಲ್ಲಿ ಬಿಜೆಪಿ ನಾಯಕರು ಹಾಗೂ ಜೆಡಿಎಸ್ ಮುಖಂಡರು ಉತ್ತಮ ಸಹಕಾರ ನೀಡುತ್ತಿದ್ದಾರೆ. ಎಲ್ಲರೂ ಕುಟುಂಬದ ಸದಸ್ಯರಾಗಿದ್ದು, ಅವರು ಕೇಳುವ ಪ್ರಶ್ನೆಗೆ ಉತ್ತರ ನೀಡುವುದು ನನ್ನ ಕರ್ತವ್ಯ. ಕೆಲವರು ಆಗಿರದ ಕೆಲಸಗಳ ಬಗ್ಗೆ ಪ್ರಶ್ನೆ ಕೇಳುತ್ತಾರೆ. ಇವೆಲ್ಲವನ್ನೂ ಮೀರಿ ನಾವು ಚುನಾವಣೆ ಎದುರಿಸುತ್ತಿದ್ದೇವೆ ಎಂದರು.
ಬಿಜೆಪಿ-ಜೆಡಿಎಸ್ ಹಾಲು-ಜೇನು:
ರಾಜ್ಯಾದ್ಯಂತ ಬಿಜೆಪಿ-ಜೆಡಿಎಸ್ ಮುಖಂಡರು ಹಾಗೂ ಕಾರ್ಯಕರ್ತರು ಲೋಕಸಭಾ ಚುನಾವಣೆಗೆ ಹಾಲು-ಜೇನಿನಂತೆ ಕಾರ್ಯ ನಿರ್ವಹಿಸುತ್ತಿದ್ದಾರೆ. ಲೋಕಸಭಾ ಕ್ಷೇತ್ರದಾದ್ಯಂತ ಮುಖಂಡರು ಹಾಗೂ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರಕುತ್ತಿದೆ. ಸಾಕಷ್ಟು ವಿಧಾನಸಭಾ ಕ್ಷೇತ್ರದಲ್ಲಿ ಕಾರ್ಯಕರ್ತರು 30ಸಾವಿರಕ್ಕೂ ಹೆಚ್ಚು ಬಹುಮತ ಕೊಡಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ಸುಧಾಕರ್ ತಿಳಿಸಿದರು.