ಜಿಲ್ಲೆ

ಪರಿಷತ್ ಚುನಾವಣೆಗೆ ಸಜ್ಜಾಗುತ್ತಿದೆ ಜಿಲ್ಲೆ ; ಸುಗಮ ಮತದಾನಕ್ಕೆ ಜಿಲ್ಲಾಡಳಿತ ಅಗತ್ಯ ಕ್ರಮ ; ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿಕೆ

Tumakuru

ತುಮಕೂರು : ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ವಿಧಾನಪರಿಷತ್‌ಗೆ ಡಿ.10ರಂದು ನಡೆಯಲಿರುವ ಚುನಾವಣೆ ಸಂಬಂಧ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ. ಚುನಾವಣಾ ಆಯೋಗದ ನಿರ್ದೇಶನದಂತೆ ಸುಗಮ ಚುನಾವಣೆಗೆ ಬೇಕಿರುವ ಕ್ರಮಗಳನ್ನು ಅನುಸರಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜಿನ ಮತ ಎಣಿಕಾ ಕೇಂದ್ರದಲ್ಲಿ ಕೈಗೊಳ್ಳಬಹುದಾದ ಪೂರ್ವ ಸಿದ್ಧತೆಗಳನ್ನು ಮಂಗಳವಾರ ಮತ ಎಣಿಕಾ ಕೊಠಡಿ, ಸ್ಟ್ರಾಂಗ್ ರೂಮ್ ಪರಿಶೀಲಿಸಿದ ವೈ.ಎಸ್.ಪಾಟೀಲ, ಮತ ಎಣಿಕಾ ಕೇಂದ್ರಕ್ಕೆ ಪೊಲೀಸ್ ಭದ್ರತೆಯನ್ನು ಒದಗಿಸುವ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್‌ಕುಮಾರ್ ಶಹಾಪೂರವಾಡ್ ಜತೆ ಚರ್ಚಿಸಿದರು.

ಮತದಾನ ಅವಶ್ಯವಿದ್ದಲ್ಲಿ ಮತದಾನವನ್ನು ಡಿ.10ರ ಶುಕ್ರವಾರ ಬೆಳಗ್ಗೆ 8 ರಿಂದ ಸಂಜೆ 4 ಗಂಟೆಯವರೆಗೆ ನಡೆಸಲಾಗುವುದು. ಜಿಲ್ಲಾ ಕೇಂದ್ರದಲ್ಲಿ ಡಿ.14ರ ಬೆಳಗ್ಗೆ 8 ಗಂಟೆಯಿಂದ ಮತ ಎಣಿಕೆ ನಡೆಯಲಿದೆ. ಚುನಾವಣಾ ಪ್ರಕ್ರಿಯೆಯನ್ನು ಡಿ.16ರಂದು ಮುಕ್ತಾಯಗೊಳಿಸಲಾಗುವುದು ಎಂದರು.

ನೀತಿ ಸಂಹಿತೆ: ಚುನಾವಣೆ ನೀತಿ ಸಂಹಿತೆಯು ಜಿಲ್ಲಾ ವ್ಯಾಪ್ತಿಯಲ್ಲಿ ನ.9ರಿಂದ ಜಾರಿಯಲ್ಲಿದ್ದು, ಮಾದರಿ ನೀತಿ ಸಂಹಿತೆಯ ಸಮರ್ಪಕ ಅನುಷ್ಟಾನಕ್ಕಾಗಿ ತಾಲೂಕಿಗೆ ಒಂದರಂತೆ ಎಫ್‌ಎಸ್‌ಟಿ, ಎಂಸಿಸಿ ತಂಡಗಳನ್ನು ರಚಿಸಲಾಗಿದೆ. ಮಂಗಳವಾರದಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿದ್ದು, 23 ಕೊನೆಯ ದಿನವಾಗಿದೆ ಎಂದು ವೈ.ಎಸ್.ಪಾಟೀಲ ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೆ.ಚೆನ್ನಬಸಪ್ಪ, ಉಪವಿಭಾಗಾಧಿಕಾರಿ ವಿ.ಅಜಯ್, ತಹಸೀಲ್ದಾರ್ ಜಿ.ವಿ.ಮೋಹನ್ ಕುಮಾರ್ ಸೇರಿ ಚುನಾವಣಾ ಶಾಖೆ ಸಿಬ್ಬಂದಿ ಇದ್ದರು.

338 ಮತಗಟ್ಟೆ ಸ್ಥಾಪನೆ : ಮತದಾನಕ್ಕಾಗಿ ಜಿಲ್ಲೆಯ ಗ್ರಾಪಂ ಕಚೇರಿ, ಮಹಾನಗರಪಾಲಿಕೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಕಚೇರಿಗಳಲ್ಲಿ 338 ಮತಗಟ್ಟೆಗಳನ್ನು ಸ್ಥಾಪಿಸಲಾಗುವುದು. ಮತದಾರರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು, ಮತಗಟ್ಟೆ ಪ್ರವೇಶಿಸುವ ಮೊದಲು ತಮ್ಮ ಕೈಗಳನ್ನು ಸ್ಯಾನಿಟೈಸ್ ಮಾಡಿಕೊಂಡು ಮತ ಚಲಾಯಿಸುವಂತೆ ಜಿಲ್ಲಾ ಚುನಾವಣಾಧಿಕಾರಿಯೂ ಆದ ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ತಿಳಿಸಿದ್ದಾರೆ.

ಎಂಸಿಸಿ ನೋಡಲ್ ಅಧಿಕಾರಿ ಬದಲು : ಮಾದರಿ ನೀತಿ ಸಂಹಿತೆಯನ್ನು ಸಮರ್ಪಕವಾಗಿ ಅನುಷ್ಠಾನ ಮಾಡಲು ಜಿಪಂ ಸಿಇಒ ಡಾ.ಕೆ. ವಿದ್ಯಾಕುಮಾರಿ(ಮೊ.ಸಂ.9480877000) ಅವರನ್ನು ಜಿಲ್ಲಾ ಎಂ.ಸಿ.ಸಿ. ನೋಡಲ್ ಅಧಿಕಾರಿಯಾಗಿ ನೇಮಕ ಮಾಡಲಾಗಿತ್ತು. ಆದರೆ, ಆಡಳಿತಾತ್ಮಕ ಹಿತದೃಷ್ಟಿಯಿಂದ ಜಿಲ್ಲಾ ಎಂಸಿಸಿ ನೋಡಲ್ ಅಧಿಕಾರಿಯಾಗಿ ಜಿಪಂ ಉಪಕಾರ್ಯದರ್ಶಿ(ಆಡಳಿತ) ಕೆ.ಎಚ್.ಕೃಷ್ಣಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ನೇಮಕ ಮಾಡಲಾಗಿದೆ.

ಮತದಾರರಿಗೆ ಹಣ, ಮದ್ಯ, ಉಚಿತ ಆಹಾರ, ಉಡುಗೊರೆ ಮತ್ತಿತರ ಆಸೆ-ಆಮಿಷಗಳನ್ನು ಒಡ್ಡುವುದು ಸೇರಿ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ ಬಗ್ಗೆ ಬರುವ ದೂರುಗಳ ಬಗ್ಗೆ ಕ್ರಮವಹಿಸಬೇಕು. ಮುಕ್ತ ಹಾಗೂ ನಿಷ್ಪಕ್ಷಪಾತ ಚುನಾವಣೆ ನಡೆಯಲು ಅಡಚಣೆ ಉಂಟು ಮಾಡುವವರ ವಿರುದ್ಧ ಹಾಗೂ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವವರ ವಿರುದ್ಧ ನಿಯಮಾನುಸಾರ ಕ್ರಮ ಕೈಗೊಂಡು ವರದಿಯನ್ನು ನೋಡಲ್ ಅಧಿಕಾರಿಗಳು ಸಲ್ಲಿಸಬೇಕು. ವೈ.ಎಸ್.ಪಾಟೀಲ ಜಿಲ್ಲಾಧಿಕಾರಿ