ಕೊಳ್ಳೇಗಾಲ: ಪಟ್ಟಣದ ಬಸ್ತೀಪುರ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಚ್.ಎಂ.ಮಹಾದೇವಪ್ಪ ಶುಕ್ರವಾರ ಅವಿರೋಧವಾಗಿ ಆಯ್ಕೆಯಾದರು.
ಚುನಾವಣಾಧಿಕಾರಿ ಮಹಮ್ಮದ್ ನದೀಮ್ ನೇತೃತ್ವದಲ್ಲಿ ಕಸಬಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ನಡೆದ ಅಧ್ಯಕ್ಷ ಗಾದಿಯ ಚುನಾವಣೆಯಲ್ಲಿ ಸಂಘದ ನಿರ್ದೇಶಕರಾದ ಕೆ.ಎಸ್.ಮಹೇಶ್ ಹಾಗೂ ಎಚ್.ಎಂ.ಮಹಾದೇವಪ್ಪ ಉಮೇದುವಾರಿಕೆ ಸಲ್ಲಿಸಿ ಅಧ್ಯಕ್ಷ ಗಾದಿಗೆ ಪೈಪೋಟಿ ನಡೆಸಿದ್ದರು.
ಆದರೆ, ಸ್ಪರ್ಧಿಗಳಲ್ಲಿ ನಿರ್ದೇಶಕ ಕೆ.ಎಸ್.ಮಹೇಶ್ ಅವರು ನಾಮಪತ್ರ ಹಿಂಪಡೆದುಕೊಂಡ ಹಿನ್ನೆಲೆಯಲ್ಲಿ ಎಚ್.ಎಂ. ಮಹಾದೇವಪ್ಪ ಅವರು ಅವಿರೋಧವಾಗಿ ಅಧ್ಯಕ್ಷರಾಗಿ ಆಯ್ಕೆಯಾದರು.
ನೂತನವಾಗಿ ಆಯ್ಕೆಯಾದ ಅಧ್ಯಕ್ಷರಿಗೆ ಸಂಘದ ಉಪಾಧ್ಯಕ್ಷರು, ನಿರ್ದೇಶಕರು ಹಾಗೂ ಸಿಬ್ಬಂದಿ ಸನ್ಮಾನಿಸಿ, ಅಭಿನಂದಿಸಿದರು.
ನೂತನ ಅಧ್ಯಕ್ಷ ಎಚ್.ಎಂ.ಮಹಾದೇವಪ್ಪ ಮಾತನಾಡಿ, ಸಂಘದ ಎಲ್ಲ ನಿರ್ದೇಶಕರ ಸಹಕಾರದಿಂದ ನಾನೀಗ ಸಂಘದ ಅಧ್ಯಕ್ಷನಾಗಿದ್ದೇನೆ. ಸರ್ಕಾರದಿಂದ ಬರುವ ಸೌಲಭ್ಯಗಳನ್ನು ರೈತರಿಗೆ ತಲುಪಿಸಲು ಪ್ರಾಮಾಣಿಕವಾಗಿ ಕೆಲಸ ಮಾಡುತ್ತೇನೆಂದು ಹೇಳಿದರು.
ಚುನಾವಣೆಯಲ್ಲಿ ಪಿಎಸಿಸಿ ಬ್ಯಾಂಕ್ ಉಪಾಧ್ಯಕ್ಷೆ ಎಂ.ಶೀಲಾ, ನಿರ್ದೇಶಕರಾದ ಪಿ.ಸೋಮಶೇಖರ್, ಪಿ.ಮಹಾದೇವಸ್ವಾಮಿ, ಎಸ್.ಶಿವಮೂರ್ತಿ, ಎಸ್.ಮಹೇಶ್, ಎಂ.ಎಸ್.ಚೈತನ್ಯ, ಮಹೇಶ್, ಶೈಲಜಾ, ಪಿ.ಬಿ.ಚಿಕ್ಕಬಸವೇಗೌಡ, ಮೇಲ್ವಿಚಾರಕ ಎಸ್.ರಮೇಶ್, ಬಾಲಸುಬ್ರಮಣ್ಯಸ್ಮಾಮಿ, ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ನಾಗರಾಜು ಮತ್ತಿತರರಿದ್ದರು.