ಸಾಗರ: ಸರ್ಕಾರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾಯ್ದೆ ತಿದ್ದುಪಡಿ ಮಾಡಿದ್ದು ಶೀಘ್ರವೇ ಚುನಾಯಿತ ಪ್ರತಿನಿಧಿಗಳ ಆಡಳಿತ ಬರಲಿದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಗುರುವಾರ ನಗರದ ಎಪಿಎಂಸಿ ಆವರಣದಲ್ಲಿ 2.50 ಕೋಟಿ ರೂ. ವೆಚ್ಚದಲ್ಲಿ ರಸ್ತೆ ಇನ್ನಿತರೆ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಹಿಂದಿನ ಸರ್ಕಾರ ಎಪಿಎಂಸಿ ಚುನಾಯಿತ ಸದಸ್ಯರ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೆಸಿತ್ತು. ಹೊಸ ಕಾಯ್ದೆಗಳನ್ನು ಜಾರಿಗೆ ತಂದು ರೈತರಿಗೆ ಅನಾನುಕೂಲ ಕಲ್ಪಿಸುವ ಜತೆಗೆ ಮಾರುಕಟ್ಟೆ ಮೌಲ್ಯವೂ ಹಾಳಾಗುವಂತೆ ಮಾಡಿತ್ತು. ಈ ಹಿನ್ನೆಲೆಯಲ್ಲಿ ಕೃಷಿ ಮಾರುಕಟ್ಟೆ ಸಚಿವರ ಜತೆ ಚರ್ಚೆ ನಡೆಸಲಾಗಿದ್ದು, ಕಾಯ್ದೆ ತಿದ್ದುಪಡಿ ಹಿಂಪಡೆಯುವ ಜತೆಗೆ ತಕ್ಷಣ ಚುನಾವಣೆ ನಡೆಸಲು ಮನವಿ ಮಾಡಲಾಗಿದೆ. ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ರೈತ ಪರವಾಗಿದ್ದರೆ ಹೆಚ್ಚು ಅಭಿವೃದ್ಧಿಪಡಿಸಲು ಸಾಧ್ಯ ಎಂದರು.
ಮುಖ್ಯ ಮಾರುಕಟ್ಟೆ ಪ್ರಾಂಗಣದಲ್ಲಿ ರಸ್ತೆ, ಚರಂಡಿ ಸೇರಿ ವಿವಿಧ ಅಭಿವೃದ್ಧಿ ಕೆಲಸಗಳನ್ನು ನಿರ್ವಹಿಸಲು ನಮ್ಮ ಸರ್ಕಾರ ಸಾಗರ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗೆ 2.50 ಕೋಟಿ, ಹೊಸನಗರ ಮಾರುಕಟ್ಟೆಗೆ 2.50 ಕೋಟಿ ರೂ. ಅನುದಾನ ಮಂಜೂರು ಮಾಡಿದೆ. ಬಿಡುಗಡೆಯಾಗಿರುವ ಅನುದಾನದಲ್ಲಿ ಗುಣಮಟ್ಟದ ಕಾಮಗಾರಿ ನಿರ್ವಹಿಸಲು ಸೂಚಿಸಲಾಗಿದೆ ಎಂದರು.
ಪ್ರಮುಖರಾದ ಬಿ.ಎ.ಇಂದೂಧರ ಬೇಸೂರು, ಚೇತನರಾಜ್ ಕಣ್ಣೂರು, ಕೆ.ಸಿ.ದೇವಪ್ಪ, ಶಂಕರ್ ಅಳ್ವಿಕೋಡಿ, ಅಶ್ವಿನಿಕುಮಾರ್, ರವಿಕುಮಾರ್ ಹುಣಾಲಮಡಿಕೆ, ಸುರೇಶಬಾಬು, ನಾಗರತ್ನ, ಕೆ.ಸಿದ್ದಪ್ಪ ಇತರರಿದ್ದರು.