ಅಜ್ಜಂಪುರ: ಎಚ್ಚರವಾಗಿದ್ದಾಗ ಕನಸುಗಳನ್ನು ಕಟ್ಟಬೇಕು. ಆಗ ನಾವು ಕಂಡ
ಕನಸನ್ನು ನನಸು ಮಾಡಿಕೊಳ್ಳಬಹುದು ಎಂದು ಸಾಣೇಹಳ್ಳಿಯ ಶ್ರೀಪಂಡಿತಾರಾಧ್ಯ
ಶಿವಾಚಾರ್ಯ ಸ್ವಾಮೀಜಿ ಹೇಳಿದರು.
ಕೈಲಾಸಂ ಕಲಾಕ್ಷೇತ್ರ ಆವರಣದಲ್ಲಿ ನಡೆದ ನಮ್ಮ ನಡೆ ಸರ್ವೋದಯದೆಡೆಗೆ
ಪಾದಯಾತ್ರೆ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಮನುಷ್ಯ ಆತ್ಮ ಸಾಕ್ಷಿಗೆ
ಅನುಗುಣವಾಗಿ ಮನಸ್ಸಿಗೆ ಅಂಜಿ ನಡೆಯಬೇಕು. ಆಗ ಎಲ್ಲ ಕ್ಷೇತ್ರಗಳಲ್ಲಿ
ಸುಧಾರಣೆಯಾಗುತ್ತದೆ. ನಾವು ಸರಿಯಾದರೆ ಸಮಾಜ ಸರಿಯಾಗುತ್ತದೆ. ನಮ್ಮ
ಆರೋಗ್ಯ ಕಾಪಾಡಿಕೊಂಡು ಕೃಷಿಯಲ್ಲಿ ಸುಧಾರಣೆ ತರೋಣ. ನಮ್ಮ ಶಿಕ್ಷಣ
ಕಾಪಾಡಿಕೊಂಡು ಆಮಿಷಕ್ಕೆ ಒಳಗಾಗದೇ ಚುನಾಯಿತರನ್ನು ಆಯ್ಕೆ ಮಾಡಿಕೊಂಡಾಗ
ಮಾತ್ರ ಸುಧಾರಣೆ ಸಾಧ್ಯ ಎಂದರು.
ಪಾಂಡೋಮಟ್ಟಿಯ ಶ್ರೀ ಗುರುಬಸವ ಸ್ವಾಮೀಜಿ ಮಾತನಾಡಿ, ಪ್ರತಿಕ್ಷಣ
ಸಂತೋಷವಾಗಿರುವುದೇ ಬದುಕು. ನಾವೆಲ್ಲರೂ ಕೃಷಿ, ಪರಿಸರ, ಆರೋಗ್ಯ, ಶಿಕ್ಷಣ
ಮತ್ತು ರಾಜಕಾರಣವನ್ನು ಅವಲಂಬಿಸಿದ್ದು, ಇವು ಒಳ್ಳೆಯ ಮಾರ್ಗದ ಕಡೆಗೆ
ಹೋಗಬೇಕು ಎನ್ನುವುದು ನಮ್ಮ ಆಶಯ. ಇಂದು ಕೃಷಿ ಮಾಡುವವರು ಇಲ್ಲದ
ವಾತಾವರಣ ನಿರ್ಮಾಣವಾಗಿದೆ. ಭಾರತದಲ್ಲಿ ಕೃಷಿಗೆ ಮಹತ್ವ ವಿದ್ದರೂ ಕೃಷಿಗೆ
ಸಂಬಂಧಪಟ್ಟ ಕಾಲೇಜುಗಳ ಸಂಖ್ಯೆ ಬೆರಳೆಣಿಕೆಯಷ್ಟಿವೆ. ಆಂಗ್ಲ ಮಾಧ್ಯಮದ
ವಿಶೇಷತೆಗೆ ಮಾರುಹೋಗಿ ಕನ್ನಡ ಮರೆಯುತ್ತಿದ್ದೇವೆ. ಚಿಕ್ಕ ಮಕ್ಕಳಿಗೆ ಕನ್ನಡ ಶಬ್ಧ
ಮರೆಸಿ ಕನ್ನಡದ ಅಸ್ತಿತ್ವ ಕಳೆದುಕೊಳ್ಳುತ್ತಿದ್ದೇವೆ. ಜನರ ಮನಸ್ಸನ್ನು
ಗೆದ್ದು,ಜನೋಪಯೋಗಿ ಕೆಲಸ ಮಾಡುವವರನ್ನು ಗೆಲ್ಲಿಸಬೇಕು ಎಂದರು.
ಮಾಜಿ ಶಾಸಕ ಮಹಿಮಾ ಪಾಟೀಲ್ ಮಾತನಾಡಿ, ರಾಜಕಾರಣ ಎಂದರೆ
ಚುನಾವಣೆಯಲ್ಲಿ ಗೆಲವು ಮಾತ್ರವಲ್ಲ. ಅದು ಎಲ್ಲವನ್ನೂ ಒಳಗೊಂಡಿರುವುದು.
ಸರ್ವೋದಯದೆಡೆಗೆ ನಡೆಯುವ ಪಾದಯಾತ್ರೆ ಎಲ್ಲರ ಕಣ್ತೆರೆಸುವ ಯಾತ್ರೆ. ಸಣ್ಣ
ಪ್ರಮಾಣದಲ್ಲಿ ಈ ಯಾತ್ರೆ ಆರಂಭವಾಗಿದೆ. ಮುಂದೆ ದಿನ ದೊಡ್ಡ ಯಾತ್ರೆಯಾಗಿ
ಒಂದು ದೊಡ್ಡ ಕ್ರಾಂತಿಯನ್ನು ಮಾಡುತ್ತದೆ ಎಂದು ತಿಳಿಸಿದರು.
ಯಳನಾಡು ಮಠದ ಶ್ರೀಜ್ಞಾನಪ್ರಭು ಸ್ವಾಮೀಜಿ, ಶ್ರೀ ಮಾದಾರ ಗುಂಡಯ್ಯ
ಸ್ವಾಮೀಜಿ, ಮಂಡ್ಯದ ಕಲ್ಯಾಣ ಬಸವೇಶ್ವರ ಮಠದ ಶ್ರೀ ಓಂಕಾರೇಶ್ವರ ಸ್ವಾಮೀಜಿ,
ಶ್ರೀಅಭಿನವ ಮರುಳಸಿದ್ಧ ಸ್ವಾಮೀಜಿ, ಜಿಪಂ ಮಾಜಿ ಅಧ್ಯಕ್ಷ ಆನಂದಪ್ಪ,
ತಹಸೀಲ್ದಾರ್ ವಿನಾಯಕ ಸಾಗರ್, ನವೀನ್, ಮೋಹನ್, ಚಂದ್ರಪ್ಪ ಇದ್ದರು.