ತ್ಯಾವರೆಕೊಪ್ಪ ಪ್ರಾಣಿ ಸಂಗ್ರಹಾಲಯದಲ್ಲಿರು ಕರಡಿ ರಾಣಿ 
ಜಿಲ್ಲೆ

ಮೂರನೇ ಮನೆ ಪ್ರವೇಶಿಸಿದ ಹಿರಿಯಕ್ಕ!

ಅರವಿಂದ ಅಕ್ಲಾಪುರ

ಶಿವಮೊಗ್ಗ: ತ್ಯಾವರೆಕೊಪ್ಪ ಸಿಂಹಧಾಮ ಹಾಗೂ ಮೃಗಾಲಯದ ಹಿರಿಯಕ್ಕ ರಾಣಿ ಎಂಬ ಹೆಸರಿನ ಕರಡಿ ಸೋಮವಾರ ಮೂರನೇ ಮನೆ ಪ್ರವೇಶಿಸಿದ್ದಾಳೆ. ಸಿಂಹಧಾಮದಲ್ಲಿ ಹೊಸದಾಗಿ ನಿರ್ಮಿಸಿರುವ ಕರಡಿಗಳ ಆವರಣಕ್ಕೆ ರಾಣಿಯನ್ನು ಬಿಡಲಾಗಿದೆ. ಮುನ್ಸಿಪಲ್ ಮೃಗಾಲಯದಲ್ಲಿದ್ದ ಈಕೆಯನ್ನು 1989ರಲ್ಲಿ ತ್ಯಾವರೆಕೊಪ್ಪಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಈ ರಾಣಿ ಗಮನ ಸೆಳೆಯಲು ಮತ್ತೊಂದು ಕಾರಣವೂ ಇದೆ. ತ್ಯಾವರೆಕೊಪ್ಪ ಮೃಗಾಲಯ ಮತ್ತು ಸಿಂಹಧಾಮ ಈಗ ವಿಶೇಷ ಸಂದರ್ಭಕ್ಕೆ ಸಾಕ್ಷಿಯಾಗಿದೆ. ರಾಣಿ(35) ದೇಶದ ಮೃಗಾಲಯಗಳಲ್ಲಿರುವ ಕರಡಿಗಳ ಪೈಕಿ ಅತ್ಯಂತ ಹಿರಿಯಳು ಎಂಬ ಗೌರವಕ್ಕೆ ಪಾತ್ರಳಾಗಿದ್ದಾಳೆ.
ಮೃಗಾಲಯದ ಆರಂಭದ ದಿನಗಳಿಂದಲೂ ನೆಲೆಸಿರುವ ಏಕೈಕ ಪ್ರಾಣಿಯೂ ಹೌದು. ಭಾರತದ ಕಾಡಿನಲ್ಲಿರುವ ಕರಡಿಗಳ ಸರಾಸರಿ ಜೀವಿತಾವಧಿ 25 ವರ್ಷ. ಆದರೆ ಮೃಗಾಲಯಗಳಲ್ಲಿ ಇವು ಸರಾಸರಿ 40 ವರ್ಷಗಳವರೆಗೂ ಬದುಕಬಲ್ಲವು.
ಮೃಗಾಲಯಗಳಲ್ಲಿರುವ ಕರಡಿಗಳಲ್ಲಿ ರಾಣಿಯೇ ಸೀನಿಯರ್. 1989ರಲ್ಲಿ ಜನಿಸಿದ್ದ ಈ ಕರಡಿ ಕೆಲ ದಿನಗಳಲ್ಲೇ ತನ್ನವರಿಂದ ದೂರವಾಗಿ ಕಂಗೆಟ್ಟಿತ್ತು. ಆ ವೇಳೆ ಅದನ್ನು ಕುರಿ ಕಾಯುವವರ ಗುಂಪೊಂದು ರಕ್ಷಿಸಿತ್ತು. ಆ ಮರಿಯನ್ನು ಅಂದಿನ ಶಿವಮೊಗ್ಗ ಮುನ್ಸಿಪಲ್ ಮೃಗಾಲಯದಲ್ಲಿ ಇರಿಸಲಾಗಿತ್ತು. ನಂತರ ತ್ಯಾವರೆಕೊಪ್ಪದಲ್ಲಿ ಮೃಗಾಲಯ ನಿರ್ಮಾಣವಾದ ಬಳಿಕ ಅಲ್ಲಿಗೆ ಸ್ಥಳಾಂತರಿಸಲಾಗಿತ್ತು. ಹೀಗೆ ರಾಣಿಗೆ ದೀರ್ಘ ಇತಿಹಾಸವಿದೆ.
ಹೆಚ್ಚಿದ ಸಂತಾನ: ರಾಣಿ ತನ್ನ ಜೀವನದ ಆರಂಭದ 20 ವರ್ಷಗಳನ್ನು ಏಕಾಂಗಿಯಾಗಿ ಕಳೆದಿದ್ದಾಳೆ. 2011ರಲ್ಲಿ ಚಿತ್ರದುರ್ಗ ಜಿಲ್ಲೆ ಜೋಗಿಮಟ್ಟಿ ಕಾಡಿನಲ್ಲಿ ಕರಡಿ ಮರಿಯೊಂದನ್ನು ರಕ್ಷಿಸಿ ತ್ಯಾವರೆಕೊಪ್ಪ ತರಲಾಯಿತು. ಆ ಮರಿಗೆ ರ‌್ಯಾಂಬೋ ಎಂದು ನಾಮಕರಣ ಮಾಡಲಾಯಿತು. ಅಂದಿನಿಂದ ರಾಣಿಗೆ ರ‌್ಯಾಂಬೋ ಜತೆಯಾದ 2016ರ ವೇಳೆಗೆ ಗಾಯತ್ರಿ ಹಾಗೂ ಗಜೇಂದ್ರ ಕೂಡ ಸೇರಿಕೊಂಡ ಪರಿಣಾಮ ಈಗ ಕರಡಿಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.
ಸಿಂಹಧಾಮಕ್ಕೆ ಹೊಸ ಸ್ಪರ್ಶ:ಕಳೆದ ನಾಲ್ಕೈದು ವರ್ಷಗಳಲ್ಲಿ ತ್ಯಾವರೆಕೊಪ್ಪ ಮೃಗಾಲಯ ಹಾಗೂ ಸಿಂಹಧಾಮಕ್ಕೆ ಹೊಸ ಸ್ಪರ್ಶ ಸಿಕ್ಕಿದೆ. ಇಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿದ್ದ ಮುಕುಂದ್‌ಚಂದ್ರ ಅಭಿವೃದ್ಧಿ ದೃಷ್ಟಿಯಿಂದ ಅನೇಕ ಯೋಜನೆಗಳ ಪ್ರಸ್ತಾವನೆ ಸಿದ್ಧಪಡಿಸಿದರು. ಇದಕ್ಕೆ ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಕೈಜೋಡಿಸಿ, ಹೆಚ್ಚು ಅನುದಾನ ಸಿಗುವಂತೆ ನೋಡಿಕೊಂಡರು. ಹೀಗಾಗಿ ಅಲ್ಪ ಸಮಯದಲ್ಲಿ ಇದು ಜನರ ನೆಚ್ಚಿನ ಪ್ರವಾಸಿತಾಣವಾಗಿ ರೂಪುಗೊಂಡಿತು. ಈಗ ಕರಡಿಗಳಿಗೆ ಹೊಸ ಆವರಣ ಸಿದ್ಧವಾಗಿದ್ದು ಸೋಮವಾರದಿಂದ ನಾಲ್ಕು ಕರಡಿಗಳು ಹೊಸ ಆವರಣದಲ್ಲಿ ಆಶ್ರಯ ಪಡೆದಿವೆ.