ಜಿಲ್ಲೆ

ಸೆ.30ರೊಳಗೆ ಇಕೆವೈಸಿ ಮಾಡಿಸದಿದ್ದರೆ ಮಾಸಾಶನ ಸ್ಥಗಿತ: ಜಿಲ್ಲೆಯಲ್ಲಿ 12,822 ಫಲಾನುಭವಿಗಳು ಬಾಕಿ

ಕೆ.ಎನ್.ರಾಘವೇಂದ್ರ

ಮಂಡ್ಯ: ಜಿಲ್ಲೆಯಲ್ಲಿ ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಯೋಜನೆಯಡಿ ಮಾಸಾಶನ ಪಡೆಯುತ್ತಿರುವ ಫಲಾನುಭವಿಗಳು ಇಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಸೆ.30ರೊಳಗೆ ತಮ್ಮ ಬ್ಯಾಂಕ್ ಖಾತೆಗೆ ಆಧಾರ್‌ಸಂಖ್ಯೆಯನ್ನು ನೋಂದಣಿ ಮಾಡಿಸಿಕೊಳ್ಳದಿದ್ದರೆ ಮಾಸಾಶನ ಸ್ಥಗಿತಗೊಳ್ಳಲಿದೆ.

ಈ ಸಂಬಂಧ ಹಲವು ಬಾರಿ ಸೂಚನೆ ಕೊಟ್ಟರೂ ಫಲಾನುಭವಿಗಳು ಪಾಲಿಸುತ್ತಿಲ್ಲ. ಅಂತೆಯೇ ಜಿಲ್ಲೆಯಲ್ಲಿ 12,822 ಜನರು ಇಕೆವೈಸಿ ಮಾಡಿಸದೇ ನಿರ್ಲಕ್ಷೃ ವಹಿಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಮತ್ತೊಮ್ಮೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಸೂಚನೆ ನೀಡಿದೆ. ಅದರಂತೆ ನಿಗದಿತ ಅವಧಿಯೊಳಗೆ ನೋಂದಣಿ ಮಾಡಿಕೊಳ್ಳದಿದ್ದರೆ ಮಾಸಾಶನ ಸ್ಥಗಿತಗೊಳ್ಳಲಿದ್ದು, ಅದಕ್ಕೆ ಹೊಣೆಯಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ.

ಏನಿದು ಇಕೆವೈಸಿ?: ಸಾಮಾಜಿಕ ಮತ್ತು ಆರ್ಥಿಕ ಭದ್ರತಾ ಯೋಜನೆಯಡಿ ವೃದ್ಧಾಪ್ಯ ವೇತನ, ಅಂಗವಿಕಲ ವೇತನ, ವಿಧವಾ ವೇತನ, ಸಂಧ್ಯಾ ಸುರಕ್ಷಾ, ಮನಸ್ವಿನಿ, ಮೈತ್ರಿ, ಆತ್ಮಹತ್ಯೆ ಮಾಡಿಕೊಂಡು ರೈತರಿಗೆ ಸಂಬಂಧಿಸಿದಂತೆ ಅವರ ಕುಟುಂಬದವರಿಗೆ ಪ್ರತಿ ತಿಂಗಳು ಮಾಸಾಶನ ನೀಡಲಾಗುತ್ತಿದೆ. ಅಂತೆಯೇ ನ್ಯಾಷನಲ್ ಪೇಮೆಂಟ್ ಕಾರ್ಫೋರೇಷನ್ ಇಂಡಿಯಾದಿಂದ ರಾಜ್ಯ ಖಜಾನೆಗೆ ಹಣ ಸಂದಾಯವಾಗಲಿದ್ದು, ಬಳಿಕ ಅಲ್ಲಿಂದ ಫಲಾನುಭವಿ ಖಾತೆ ಸೇರುತ್ತಿದೆ. ಈ ಪ್ರಕ್ರಿಯೆಯಿಂದ ಅನಗತ್ಯ ತೊಂದರೆಯಾಗುತ್ತಿದೆ. ಆದ್ದರಿಂದ ಇಕೆವೈಸಿ ಮಾಡಿಸಿದರೆ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಯಾಗಲಿದೆ. ಈ ಹಿನ್ನೆಲೆಯಲ್ಲಿ ಸೂಚನೆ ಬಳಿಕ ಶೇ.96ರಷ್ಟು ಜನರು ಇಕೆವೈಸಿ ಪ್ರಕ್ರಿಯೆ ಮಾಡಿಸಿಕೊಂಡಿದ್ದಾರೆ. ಉಳಿದಂತೆ ಶೇ.4ರಷ್ಟು ಜನರು ನಿರ್ಲಕ್ಷೃ ಮಾಡುತ್ತಿರುವುದು ಜಿಲ್ಲಾಡಳಿತಕ್ಕೆ ತಲೆನೋವು ತಂದಿದೆ. ಈಗಾಗಲೇ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಾಯಧನ ಫಲಾನುಭವಿಗಳ ಖಾತೆಗೆ ನೇರವಾಗಿ ವರ್ಗಾವಣೆಯಾಗುತ್ತಿದೆ. ಆದ್ದರಿಂದ ಮಾಸಾಶನವನ್ನು ಅದೇ ರೀತಿ ಮಾಡಲಾಗುತ್ತಿದೆ. ಇದರಿಂದಾಗಿ ಅನಗತ್ಯ ಹೊರೆ ಕಡಿಮೆಯಾಗಲಿದೆ.

ಜಿಲ್ಲೆಯಲ್ಲಿ ವೃದ್ಧಾಪ್ಯ ವೇತನ ಯೋಜನೆಯಡಿ 1,38,878 ಫಲಾನುಭವಿಗಳು, ಅಂಗವಿಕಲ ವೇತನದಡಿ 33,407 ಫಲಾನುಭವಿಗಳಿದ್ದು, ಈ ಪೈಕಿ ಶೇ.40ರಷ್ಟು ಅಂಗವಿಕಲತೆ ಹೊಂದಿರುವ 15,659, ಶೇ.75ರಷ್ಟು ಹೊಂದಿರುವ 14,959 ಹಾಗೂ ಬುದ್ದಿಮಾಂಧ್ಯತೆ ಹೊದಿರುವ 2,789 ಮತ್ತು ವಿಧವಾ ವೇತನ ಯೋಜನೆಯಡಿ 87,208, ಸಂಧ್ಯಾ ಸುರಕ್ಷಾ ಯೋಜನೆಯಲ್ಲಿ 97,728, ಮನಸ್ವಿನಿ ಯೋಜನೆಯಲ್ಲಿ 6,683, ಮೈತ್ರಿ ಯೋಜನೆಯಡಿ 25 ಹಾಗೂ ಆತ್ಮಹತ್ಯೆ ಮಾಡಿಕೊಂಡ ರೈತ ಕುಟುಂಬಕ್ಕೆ ಸಂಬಂಧಿಸಿದಂತೆ 374 ಫಲಾನುಭವಿಗೆ ಮಾಸಾಶನ ನೀಡಲಾಗುತ್ತಿದೆ. ಈ ಪೈಕಿ 12,822 ಜನರು ಇಕೆವೈಸಿ ಮಾಡಿಸಿಕೊಳ್ಳಬೇಕಿದೆ.

ಮಾಸಾಶನ ಫಲಾನುಭವಿಗಳು ಕಡ್ಡಾಯವಾಗಿ ಸೆ.30ರೊಳಗೆ ಇಕೆವೈಸಿ ಮಾಡಿಸಿಕೊಳ್ಳಬೇಕು. ಮುಂದಿನ ತಿಂಗಳಿನಿಂದ ಅವರ ಬ್ಯಾಂಕ್ ಖಾತೆಗೆ ಹಣ ನೇರ ವರ್ಗಾವಣೆಯಾಗಲಿದೆ. ಫಲಾನುಭವಿಗಳಿಗೆ ಇಕೆವೈಸಿ ಬಗ್ಗೆ ಮಾಹಿತಿ ಪಡೆಯಬೇಕಾದರೆ ಕಂದಾಯ ನಿರೀಕ್ಷಕ ಹಾಗೂ ಗ್ರಾಮ ಲೆಕ್ಕಾಧಿಕಾರಿಯನ್ನು ಸಂಪರ್ಕಿಸಬಹುದು. ಇಕೆವೈಸಿ ಮಾಡಿಸದೇ ಮಾಸಾಶನ ಸ್ಥಗಿತವಾದಲ್ಲಿ ಜಿಲ್ಲಾಡಳಿತ ಯಾವುದೇ ರೀತಿ ಹೊಣೆಯಾಗುವುದಿಲ್ಲ.

ಡಾ.ಎಚ್.ಎಲ್.ನಾಗರಾಜು

ಅಪರ ಜಿಲ್ಲಾಧಿಕಾರಿ