ಮಡಿಕೇರಿ:
ಪುಟ್ಟ ಜಿಲ್ಲೆ ಕೊಡಗು ಕಿಸಾನ್ ಸಮ್ಮಾನ್ ನಿಧಿ ಯೋಜನೆಗೆ ಸಂಬಂಧಿಸಿದ ಇಕೆವೈಸಿಯಲ್ಲಿ ಉತ್ತಮ ಸಾಧನೆ ಮಾಡಿದೆ. ಶೇ. ೮೫.೬೪ರಷ್ಟು ರೈತರು ಇಕೆವೈಸಿ ಮಾಡಿಸಿಕೊಳ್ಳುವ ಮೂಲಕ ಜಿಲ್ಲೆ ರಾಜ್ಯಕ್ಕೆ ೨ನೇ ಸ್ಥಾನದಲ್ಲಿದೆ. ಕೊಡಗಿಗಿಂತ ಕೇವಲ ಶೇ. ೧ರಷ್ಟು ಹೆಚ್ಚು ಇಕೆವೈಸಿ ಮಾಡಿರುವ ಬೆಳಗಾವಿ ಮೊದಲ ಸ್ಥಾನ ಗಳಿಸಿಕೊಂಡಿದೆ. ಇಕೆವೈಸಿ ಮಾಡಿಸಿಕೊಳ್ಳಲು ಶುಕ್ರವಾರ (ಜೂ.೩೦) ಕೊನೆಯ ದಿನವಾಗಿತ್ತು. ಆದರೂ ವೆಬ್‌ಸೈಟ್ ಇನ್ನೂ ತೆರೆದಿರುವುದರಿಂದ ಉಳಿದವರು ಆದಷ್ಟು ಬೇಗ ಇಕೆವೈಸಿ ಪ್ರಕ್ರಿಯೆ ಮುಗಿಸಿಕೊಳ್ಳಬಹುದು. ಇಕೆವೈಸಿ ಆಗಿದ್ದವರಿಗೆ ಮಾತ್ರ ಕಿಸಾನ್ ಸಮ್ಮಾನ್ ನಿಧಿಯ ಮುಂದಿನ ಕಂತಿನ ಮೊತ್ತ ಸಿಗುತ್ತದೆ.
ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮಹತ್ವಾಕಾಂಕ್ಷಿ ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಹಣ ರೈತರ ಖಾತೆಗೆ ಜಮಾ ಆಗಬೇಕಾದರೆ ಇ ಕೆವೈಸಿ ಮಾಡಿಸುವುದು ಕಡ್ಡಾಯ. ಶುಕ್ರವಾರ (ಜೂ.೩೦) ಇ ಕೆವೈಸಿ ಮಾಡಿಸಿಕೊಳ್ಳಲು ಕಡೆಯ ದಿನವಾಗಿತ್ತು. ಈ ಬಗ್ಗೆ ಕಳೆದ ಹಲವು ದಿನಗಳಿಂದ ನಡೆಸಿದ ವ್ಯಾಪಕ ಪ್ರಚಾರ ಮತ್ತು ಜಿಲ್ಲಾ ಕೃಷಿ ಇಲಾಖೆ ನಡೆಸಿದ ಪ್ರಯತ್ನದ ಫಲವಾಗಿ ಇಕೆವೈಸಿಗೆ ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಿಸಾನ್ ಸಮ್ಮಾನ್ ಯೋಜನೆಗೆ ನೋಂದಾಯಿತ ೪೬,೩೫೯ ರೈತರ ಪೈಕಿ ೩೯,೭೦೨ ರೈತರು ಇಕೆವೈಸಿ ಮಾಡಿಸಿಕೊಂಡಿದ್ದಾರೆ. ಇನ್ನು ಕೇವಲ ೬,೬೫೭ ರೈತರಷ್ಟೇ ಇಕೆವೈಸಿ ಮಾಡಿಸಿಕೊಳ್ಳಲು ಬಾಕಿ ಇದ್ದಾರೆ.
ಪೌತಿ ಖಾತೆ ಮತ್ತಿತರ ಕಾರಣಗಳು ಸೇರಿದಂತೆ ಸುಮಾರು ೨ ಸಾವಿರದಷ್ಟು ರೈತರು ಇಕೆವೈಸಿಯಿಂದ ಹೊರಗುಳಿದರೂ ಇನ್ನು ನಾಲ್ಕು ಸಾವಿರದಷ್ಟು ರೈತರು ತಮ್ಮ ಇಕೆವೈಸಿ ಮಾಡಿಸಿಕೊಂಡಲ್ಲಿ ಜಿಲ್ಲೆಯಲ್ಲಿ ಬಹುತೇಕ ಶೇ. ೧೦೦ಷ್ಟು ಸಾಧನೆ ಆಗುತ್ತದೆ. ಇಕೆವೈಸಿ ಮಾಡಿಸಿಕೊಳ್ಳಲು ಸರ್ಕಾರ ಘೋಷಣೆ ಮಾಡಿದ್ದಂತೆ ಶುಕ್ರವಾರ (ಜೂ.೩೦) ಕೊನೆಯ ದಿನವಾದರೂ ಇಕೆವೈಸಿ ವೆಬ್‌ಸೈಟ್‌ನಲ್ಲಿ ಇನ್ನೂ ಅವಕಾಶ ಇರುವ ಬಗ್ಗೆ ಮಾಹಿತಿ ಸಿಕ್ಕಿದೆ. ಇನ್ನು ಕೂಡ ಇಕೆವೈಸಿ ಮಾಡಿಸಿಕೊಳ್ಳದ ರೈತರು ಈ ಅವಕಾಶ ಬಳಸಿಕೊಳ್ಳಬಹುದಾಗಿದ್ದು, ಪಿಎಂ-ಕಿಸಾನ್ ಯೋಜನೆಯ ಮುಂದಿನ ಕಂತಿನ ಹಣ ಪಡೆದುಕೊಳ್ಳಬಹುದಾಗಿದೆ.
ಎನ್‌ಡಿಎ ಸರ್ಕಾರದ ಮೊದಲ ಅವಧಿಯ ಕೊನೇ ಬಜೆಟ್‌ನಲ್ಲಿ ಈ ಯೋಜನೆ ಘೋಷಣೆ ಆಯಿತಾದರೂ ಸಣ್ಣ ರೈತರಿಗೆ ಮಾತ್ರ ಮೀಸಲಾಗಿದ್ದ ಕಾರಣ ಜಿಲ್ಲೆಯಲ್ಲಿ ನೋಂದಣಿ ಪ್ರಕ್ರಿಯೆಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಕ್ಕಿರಲಿಲ್ಲ. ಯೋಜನೆಯ ಮೊದಲ ಕಂತಿನಲ್ಲಿ ಕೇವಲ ೧೦೪೧ ರೈತರು ಮಾತ್ರ ಯೋಜನೆಯ ಪ್ರಯೋಜನ ಪಡೆದುಕೊಂಡಿದ್ದರು. ಎನ್‌ಡಿಎ ಸರ್ಕಾರ ೨ನೇ ಬಾರಿಗೆ ಅಧಿಕಾರಕ್ಕೆ ಬರುತ್ತಿದ್ದಂತೆಯೇ ಪ್ರಧಾನ್ ಮಂತ್ರಿ ಕಿಸಾನ್ ಸಮ್ಮಾನ್ ನಿಧಿ ಯೋಜನೆಯನ್ನು ಎಲ್ಲಾ ರೈತರಿಗೂ ವಿಸ್ತರಿಸಲಾಯಿತು. ಈ ಸಂದರ್ಭ ೨೦,೩೪೦ ರೈತರು ಯೋಜನೆಯ ಫಲಾನುಭವಿಗಳಾದರು. ಪ್ರತಿ ರೈತ ಕುಟುಂಬಕ್ಕೂ ಒಟ್ಟು ೬ ಸಾವಿರ ರೂಪಾಯಿಗಳನ್ನು ಪ್ರತಿ ನಾಲ್ಕು ತಿಂಗಳುಗಳಿಗೊಮ್ಮೆ ಮೂರು ಸಮಾನ ಕಂತುಗಳಲ್ಲಿ ತಲಾ ೨ ಸಾವಿರದಂತೆ ಈ ಯೋಜನೆ ಅಡಿಯಲ್ಲಿ ಕೊಡಲಾಗುತ್ತದೆ.
ಸಾಮಾನ್ಯವಾಗಿ ಆರ್ಥಿಕ ವರ್ಷದ ಮೊದಲ ಕಂತನ್ನು ಏಪ್ರಿಲ್ ಮತ್ತು ಜುಲೈ ನಡುವೆ ಬಿಡುಗಡೆ ಮಾಡಲಾಗುತ್ತದೆ, ಎರಡನೇ ಕಂತು ಆಗಸ್ಟ್ ಮತ್ತು ನವೆಂಬರ್ ನಡುವೆ ಹಾಗೂ ಮೂರನೇ ಕಂತು ಡಿಸೆಂಬರ್ ಮತ್ತು ಮಾರ್ಚ್ ನಡುವೆ ಬಿಡುಗಡೆಯಾಗುತ್ತದೆ. ಈಗಾಗಲೇ ಕಳೆದ ಆರ್ಥಿಕ ವರ್ಷದ ಕೊನೆಯ ಕಂತು (ಯೋಜನೆಯ ೧೩ನೇ ಕಂತು) ಫೆ. ೨೬ಕ್ಕೆ ಬಿಡುಗಡೆಯಾಗಿದೆ. ಮುಂದಿನ ಕಂತು ಈ ತಿಂಗಳು ರೈತರ ಖಾತೆ ಸೇರುವ ನಿರೀಕ್ಷೆ ಇದ್ದು, ಇಕೆವೈಸಿ ಮಾಡಿಸಿದ ರೈತರ ಖಾತೆಗಳಿಗೆ ಮಾತ್ರ ಹಣ ಜಮಾ ಆಗಲಿದೆ.
ಮುಂದಿನ ಕಂತು ಬರುವ ಮೊದಲು, ರೈತರು ಪ್ರಧಾನ ಮಂತ್ರಿ ಕಿಸಾನ್ ಯೋಜನೆಯ ವೆಬ್‌ಸೈಟ್‌ಗೆ ಭೇಟಿ ನೀಡಿ ತಮ್ಮ ಹೆಸರು ಇರವ ಬಗ್ಗೆ ಪರಿಶೀಲಿಸಬಹುದು. ಪ್ರಧಾನ ಮಂತ್ರಿ ಕಿಸಾನ್ ಯೋಜನೆ ವೆಬ್‌ಸೈಟ್‌ನಲ್ಲಿ ಫಾರ್ಮರ್ ಕಾರ್ನರ್‌ಗೆ ಹೋಗಬೇಕು. ಇಲ್ಲಿ ಫಲಾನುಭವಿಗಳ ಪಟ್ಟಿಯನ್ನು ಕ್ಲಿಕ್ ಮಾಡಿ. ಪ್ರಕ್ರಿಯೆಯನ್ನು ಅನುಸರಿಸಿ, ಆಧಾರ್ ಸಂಖ್ಯೆ, ಕ್ಯಾಪ್ಚಾ, ಮೊಬೈಲ್ ಸಂಖ್ಯೆ ಮತ್ತು ಒಟಿಪಿ ನಮೂದಿಸಿದರೆ ಸಂಪೂರ್ಣ ಮಾಹಿತಿ ಸಿಗಲಿದೆ.
ಕಿಸಾನ್ ಸಮ್ಮಾನ್ ನಿಧಿ ಯೋಜನೆಯಡಿಯಲ್ಲಿ ಕೇಂದ್ರ ಸರ್ಕಾರ ಕೊಡುವ ಹಣ ರೈತರ ಖಾತೆಗೆ ಜಮಾ ಆಗಬೇಕಾದರೆ ಇ ಕೆವೈಸಿ ಮಾಡಿಸುವುದು ಕಡ್ಡಾಯವಾಗಿದೆ. ಇ ಕೆವೈಸಿಗೆ ಜಿಲ್ಲೆಯಲ್ಲಿ ಉತ್ತಮ ಪ್ರಕ್ರಿಯೆ ವ್ಯಕ್ತವಾಗುತ್ತಿದೆ. ಇಕೆವೈಸಿ ಮಾಡಿರುವ ರೈತರ ಸಂಖ್ಯೆಯಲ್ಲಿ ನಾವು ರಾಜ್ಯಕ್ಕೆ ೨ನೇ ಸ್ಥಾನದಲ್ಲಿ ಇದ್ದೇವೆ. ಪುಟ್ಟ ಜಿಲ್ಲೆ ಕೊಡಗಿನ ಮಟ್ಟಿಗೆ ಇದು ದೊಡ್ಡ ಸಾಧನೆ. ಇನ್ನು ೬ ಸಾವಿರದಷ್ಟು ರೈತರು ಇಕೆವೈಸಿ ಮಾಡಿಸಿಕೊಳ್ಳಲು ಬಾಕಿ ಇದ್ದಾರೆ.
ಶಬಾನಾ ಎಂ. ಶೇಕ್, ಜಂಟಿ ನಿರ್ದೇಶಕಿ, ಕೃಷಿ ಇಲಾಖೆ ಕೊಡಗು