ಬಂಟ್ವಾಳ: ಬಿ.ಸಿ.ರೋಡ್‌ನ ಕೈಕುಂಜೆಯಲ್ಲಿರುವ ಕನ್ನಡ ಭವನದಲ್ಲಿ ಜೋಡುಮಾರ್ಗದ ಅಭಿರುಚಿ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ಮತ್ತು ಬಂಟ್ವಾಳ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಭಾರತ ಮಾರುತಿ ಎಂಬ ಏಕವ್ಯಕ್ತಿ ತಾಳಮದ್ದಳೆ ಕಾರ್ಯಕ್ರಮ ನಡೆಯಿತು.
ಅನಂತ ಹೆಗಡೆ ದಂತಳಿಗೆ ಭಾಗವತಿಕೆಯಲ್ಲಿ, ಎ.ಪಿ.ಪಾಠಕ್ ಮದ್ದಳೆಯಲ್ಲಿ ಸಹಕರಿಸಿದರು. ಮಹಾಭಾರತದ ಭೀಮಸೇನ ಪಾತ್ರದ ಮೂಲಕ ದಿವಾಕರ ಹೆಗಡೆ ಇಡೀ ಮಹಾಭಾರತದ ಕಥಾಸಾರ ಕಟ್ಟಿಕೊಟ್ಟರು. ಅಭಿರುಚಿ ಜೋಡುಮಾರ್ಗದ ಮಹಾಬಲೇಶ್ವರ ಹೆಬ್ಬಾರ ಕಲಾವಿದರ ಪರಿಚಯ ಮಾಡಿದರು.
ಕನ್ನಡ ಸಾಹಿತ್ಯ ಪರಿಷತ್‌ನ ತಾಲೂಕು ಘಟಕದ ಅಧ್ಯಕ್ಷ ವಿಶ್ವನಾಥ ಬಂಟ್ವಾಳ, ಗೌರವ ಪ್ರಧಾನ ಕಾರ್ಯದರ್ಶಿ ರಮಾನಂದ ನೂಜಿಪ್ಪಾಡಿ, ವಿ.ಸು.ಭಟ್, ಅಭಿರುಚಿಯ ಸುಂದರ ರಾವ್, ಹಿರಿಯ ರಂಗಕರ್ಮಿ ಮೂರ್ತಿ ದೇರಾಜೆ ಮತ್ತಿತರರು ಉಪಸ್ಥಿತರಿದ್ದರು.