ಕಡೂರು ತಾಲೂಕಿನ ಕುಂತಿಹೊಳೆ ಗ್ರಾಮದಲ್ಲಿ ಆಯೋಜಿಸಿದ್ದ ಏಕಲ್ ವಿದ್ಯಾಲಯದ ಆಚಾರ್ಯ ಸಂಗಮ ಕಾರ್ಯಕ್ರಮದಲ್ಲಿ ಯಳನಡು ಮಠದ ಶ್ರೀ ಜ್ಞಾನಪ್ರಭುಸಿದ್ದರಾಮದೇಶಿಕೇಂದ್ರ ಸ್ವಾಮೀಜಿ, ಜಿಗಣೇಹಳ್ಳಿ ನೀಲಕಂಠಪ್ಪ, ಬಿ.ಪಿ.ದೇವಾನಂದ್, ಚೇತನ್, ತಿಮ್ಮೇಗೌಡ ಇತರರಿದ್ದರು.  
ಜಿಲ್ಲೆ

ಧರ್ಮ ಜಾಗೃತಿ ಮೂಡಿಸುತ್ತಿದೆ ಏಕಲ್ ವಿದ್ಯಾಲಯ

ಕಡೂರು: ಜ್ಞಾನ, ಧರ್ಮ, ರಾಷ್ಟ್ರ, ಸಂಸ್ಕಾರ ಜಾಗೃತಿ ಮೂಡಿಸುವಲ್ಲಿ ಏಕಲ್ ವಿದ್ಯಾಲಯ ಮುಂಚೂಣಿಯಲ್ಲಿದೆ ಎಂದು ಯಳನಡು ಮಠದ ಶ್ರೀ ಜ್ಞಾನಪ್ರಭು ಸಿದ್ದರಾಮ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.

ಮಚ್ಚೇರಿ ಸಮೀಪದ ಕುಂತಿಹೊಳೆ ಸೀತಾರಾಮ ಕಲ್ಯಾಣ ಮಂದಿರದಲ್ಲಿ ಶನಿವಾರ ನಡೆದ ಏಕಲ್ ವಿದ್ಯಾಲಯದ ಆಚಾರ್ಯ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿ, ದೇಶದಲ್ಲಿ ಅಗತ್ಯವಾಗಿ ಧರ್ಮ ಜಾಗೃತಿ ಮೂಡಬೇಕಿದೆ. ಆ ಜಾಗೃತಿ ಮೂಡಿಸುವಲ್ಲಿ ಏಕಲ್ ಆಚಾರ್ಯ ವರ್ಗದವರು ಶ್ರಮಿಸುತ್ತಿದ್ದಾರೆ. ಜಾಗೃತಿ ಅಭಿಯಾನ ನಿರಂತರ ಮುಂದುವರಿಯಲಿ. ಜನರಲ್ಲಿ ರಾಷ್ಟ್ರಭಕ್ತಿ ಉದ್ದೀಪಿಸಲಿ ಎಂದರು.
ಏಕಲ್ ಅಭಿಯಾನದ ತಾಲೂಕು ಕಸಬಾ ಸಮಿತಿ ಅಧ್ಯಕ್ಷ ಜಿಗಣೇಹಳ್ಳಿ ನೀಲಕಂಠಪ್ಪ ಮಾತನಾಡಿ, ಭಾರತ ವಿಶ್ವಗುರುವಾಗಿದೆ. ನಿತ್ಯ ವಿಶ್ವದಲ್ಲಿ ನಡೆಯುತ್ತಿರುವ ಅಪಸವ್ಯಗಳು ದೂರವಾಗಿ ಜನರು ಶಾಂತಿಯಿಂದ ಬಾಳುವಂತಾಗಲು ಪ್ರಾರ್ಥಿಸಿ ಆನೆಗುಂದಿಯಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಾರಾಯಣ ಮಹಾಯಜ್ಞ ನಡೆಯಲಿದೆ. ಗ್ರಾಮ ವಿಕಾಸ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂಸ್ಕಾರ ನೀಡುತ್ತಿರುವ ಏಕಲ್ ವಿದ್ಯಾಲಯದ ಆಚಾರ್ಯರು ಭಾರತೀಯ ಮೂಲ ಸಂಸ್ಕೃತಿ ರಕ್ಷಕರಾಗಿದ್ದಾರೆ ಎಂದು ಬಣ್ಣಿಸಿದರು.
ಏಕಲ್ ಅಭಿಯಾನದ ಸಿಂಗಟಗೆರೆ ಸಂಚಾಲಕ ಬಿ.ಪಿ.ದೇವಾನಂದ್ ಮಾತನಾಡಿ, ನಿಸ್ವಾರ್ಥದಿಂದ ಸಂಸ್ಕೃತಿಯ ಹಿರಿಮೆಯನ್ನು ಇತರರಿಗೆ ತಿಳಿಸುವ ಹಾಗೂ ಮಕ್ಕಳಲ್ಲಿ ಧರ್ಮದ ತಳಹದಿಯ ಪ್ರಜ್ಞಾವಂತಿಕೆ ಮೂಡಿಸುವಲ್ಲಿ ಸಹಕಾರ ನೀಡಲಾಗುವುದು ಎಂದರು.
ಜಿಲ್ಲಾ ಪ್ರಮುಖ್ ಕಾರ್ಯದರ್ಶಿ ಚೇತನ್ ಮಾತನಾಡಿ, ಮತಾಂತರ ಅಥವಾ ಲವ್ ಜಿಹಾದ್, ಅನ್ಯಧರ್ಮಗಳ ಮೋಹಕ್ಕೆ ಬಿದ್ದು ಭಾರತೀಯ ಸಂಸ್ಕೃತಿಯನ್ನೇ ಮರೆಯಲು ಮೂಲಕಾರಣ ಏನೆಂಬುದನ್ನು ಅರಿತು ನಮ್ಮ ಸಂಸ್ಕೃತಿಯಲ್ಲಿ ಜೀವಿಸುವ ಜಾಗೃತಿ ಮೂಡಿಸುವುದು ಏಕಲ್ ಅಭಿಯಾನದ ಉದ್ದೇಶ ಎಂದು ತಿಳಿಸಿದರು.
ಪತ್ರಕರ್ತ ಬಾಲುಮಚ್ಚೇರಿ ಅವರು ಕುಂತಿಹೊಳೆಯ ಐತಿಹಾಸಿಕ ಮಹತ್ವ ತಿಳಿಸಿದರು. ಆಚಾರ್ಯವರ್ಗದವರು ಹನುಮಾನ್ ಚಾಲೀಸಾ ಪಾರಾಯಣ ದೀಕ್ಷೆ ಪಡೆದು ಸಾಮೂಹಿಕ ಪಠಣ ಮಾಡಿದರು. ವಿದ್ಯಾಲಯದ ಹಿರಿಯ ಸಂಚಾಲಕ, ಹಳಿಯಾಳದ ಅದೃಶಯ್ಯ, ಪ್ರಧಾನ ಆಚಾರ್ಯ ತಿಮ್ಮೇಗೌಡ ಮತ್ತು ಆಚಾರ್ಯ ವರ್ಗದವರು ಇದ್ದರು.