ಸಾರ್ವಜನಿಕರಿಗೆ ಅನುಕೂಲವಾಗುವಂತೆ ನಗರದಲ್ಲಿನ ಉದ್ಯಾನವನಗಳನ್ನು ಅಭಿವೃದ್ಧಿಪಡಿಸಲು ಕೋಲಾರ ನಗರಸಭೆಯು ಅ.2ರವರೆಗೂ ಸ್ವಚ್ಛತಾ ಹಿ ಸೇವಾ ಆಂದೋಲನ ಕೈಗೊಂಡಿದ್ದು, ಒಟ್ಟು 19 ಉದ್ಯಾನವನಗಳ ಪ್ರಗತಿಗೆ 8 ಕೋಟಿ ರೂ. ಮೀಸಲಿಟ್ಟಿದೆ.
ಜಿಲ್ಲೆಯಲ್ಲಿ ಒಟ್ಟು 56 ಪಾರ್ಕ್ಗಳಿದ್ದು, ನಗರ ವ್ಯಾಪ್ತಿಯಲ್ಲಿ ಒಟ್ಟು 19 ಪಾರ್ಕ್ಗಳಿವೆ. ಅವುಗಳಿಗೆ ಕಾಯಕಲ್ಪ ಕಲ್ಪಿಸಲು ಯೋಜನೆ ರೂಪಿಸಿದ್ದು, ಅಭಿವೃದ್ಧಿಗೆ ಮುಂದಾಗಿದೆ.
ಪ್ರತಿ ಭಾನುವಾರ ನಗರದ ಎಲ್ಲ ಉದ್ಯಾನವನಗಳನ್ನು ಸಾರ್ವಜನಿಕರ ಸಹಭಾಗಿತ್ವದಲ್ಲಿ ಸ್ವಚ್ಛಗೊಳಿಸುವುದು. 15ನೇ ಹಣಕಾಸು ಯೋಜನೆಯಡಿ ಅಮೃತ್ ನಗರೋತ್ಥಾನ ಯೋಜನೆಯಡಿ ಉದ್ಯಾನಗಳ ಸಮಗ್ರ ಅಭಿವೃದ್ಧಿಗೆ ಯೋಜನೆ ರೂಪಿಸಿದೆ. ಇದೇ ರೀತಿ ಜಿಲ್ಲೆಯ ಕೆಜಿಎ್ ನಗರಸಭೆಯಿಂದಲೂ ಕ್ರಮವಹಿಸಲಾಗಿದೆ.
ನಗರ ವ್ಯಾಪ್ತಿಯಲ್ಲಿ ಸುಮಾರು ದಶಕಗಳೇ ಪೂರೈಸಿದ ಸರ್ವಜ್ಞ ಪಾರ್ಕ್, ಅಂಬೇಡ್ಕರ್ ಪಾರ್ಕ್, ಕುವೆಂಪು ಪಾರ್ಕ್, ಚಿಕ್ಕನಂಜಪ್ಪ ಪಾರ್ಕ್ ಸೇರಿ 19 ಉದ್ಯಾನವನಗಳಿಗೆ. ಅವುಗಳಲ್ಲಿ ಕೆಲವು ಅಳಿವಿನಂಚಿನಲ್ಲಿದ್ದು, ಮೂಲ ಸೌಕರ್ಯಗಳಿಲ್ಲದೆ ಸೊರಗುತ್ತಿವೆ. ಇನ್ನು ಕೆಲವು ಸಮರ್ಪಕವಾಗಿ ನಿರ್ವಹಣೆಯಿಲ್ಲದೆ ತನ್ನ ಸ್ವರೂಪವನ್ನೇ ಕಳೆದುಕೊಳ್ಳುತ್ತಿವೆ.
ಹಿಂದಿನ ಅಧ್ಯಕ್ಷರ ಅವಧಿಯಲ್ಲಿ ವಿವಿಧ ಯೋಜನೆಗಳಡಿ ಪಾರ್ಕ್ಗಳಲ್ಲಿ ಅಳವಡಿಸಲಾಗಿರುವ ಜಿಮ್ ಸಾಮಗ್ರಿಗಳು, ಕಾರಂಜಿ, ಅಲಂಕಾರಿಕ ಸಸಿಗಳು, ಕುರ್ಚಿಗಳು ಹಾನಿಯಾಗಿವೆ. ಬಿಡಿ ಭದ್ರತೆಯಿಲ್ಲದೆ ಇರುವುದರಿಂದ ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ.
ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಕಳೆದ ಭಾನುವಾರ ಭೇಟಿ ನೀಡಿ ನಗರ ಪ್ರದಣೆ ನಡೆಸಿ ಸಾರ್ವಜನಿಕರ ಅಹವಾಲು ಆಲಿಸಿದರು. ಈ ವೇಳೆ ಪಾರ್ಕ್ಗಳ ಅವ್ಯವಸ್ಥೆ ಬೆಳಕಿಗೆ ಬಂದಿತ್ತು. ಜತೆಗೆ ಸಾರ್ವಜನಿಕರು ಸಹ ಪಾರ್ಕ್ಗಳ ಸ್ಥಿತಿಗತಿಗಳ ಬಗ್ಗೆ ಗಮನಕ್ಕೆ ತಂದು ಸೌಲಭ್ಯ ಕಲ್ಪಿಸಿಕೊಡಲು ಮನವಿ ಮಾಡಿದ್ದರು. ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಸ್ವಚ್ಛತಾ ಹಿ ಸೇವಾ ಆಂದೋಲನದಡಿ ಸ್ವಚ್ಛತೆ ಜತೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡಿದ್ದಾರೆ.
ಹಸರೀಕರಣಕ್ಕಾಗಿ ಸಸಿ ನಾಟಿ:
ಸ್ವಚ್ಛತಾ ಹಿ ಸೇವಾ ಅಭಿಯಾನದ ನೆನಪಿಗಾಗಿ ಎಲ್ಲ ಉದ್ಯಾನಗಳಲ್ಲಿ ಸಸಿ ನೆಟ್ಟು, ಮಕ್ಕಳಿಗೆ, ವೃದ್ಧರಿಗೆ, ಸಮಾನ ಮನಸ್ಕರಿಗೆ ಉದ್ಯಾನವನಗಳನ್ನ ಹಸಿರಾಗಿಸಿ ಸುಂದರ ಮಾಡಲು ನಿರ್ಧರಿಸಿ ಆಂದೋಲನಕ್ಕೆ ಈಗಾಗಲೇ ಚಾಲನೆ ನೀಡಲಾಗಿದೆ. ಪಾರ್ಕ್ ಗಳಿಗೆ ಭೇಟಿ ನೀಡುವ ಸಾರ್ವಜನಿಕರು ಕುಳಿತುಕೊಳ್ಳಲು ಕಲ್ಲಿನ ಬೆಂಚುಗಳು, ವಾಕಿಂಗ್ ಪಾಥ್, ಕಾರಂಜಿಗಳು ಹಾಗೂ ವಿದ್ಯುತ್ ದೀಪಗಳನ್ನು ಸರಿಪಡಿಸಿ ಸಾರ್ವಜನಿಕರ ಅನುಕೂಲಕ್ಕೆ ತಕ್ಕ ಹಾಗೆ ಪಾರ್ಕ್ಗಳನ್ನು ಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ.
ಉದ್ಯಾನ ವನಗಳನ್ನು ಅಭಿವೃದ್ಧಿ ಪಡಿಸುವ ಉದ್ದೇಶ ದಿಂದ ಸ್ವಚ್ಛತಾ ಹಿ ಸೇವಾ ಆಂದೋಲನ ಹಮ್ಮಿಕೊಂಡಿದ್ದು, ಅ.2ರತನಕ ನಡೆಸಲಾಗುವುದು. ಸಾರ್ವಜನಿಕರನ್ನು ಆಕರ್ಷಿಸುವ ನಿಟ್ಟಿನಲ್ಲಿ ಅಭಿವೃದ್ಧಿಪಡಿಸಲಾಗುವುದು. -ನವೀನ್ ಚಂದ್ರ ಪೌರಾಯುಕ್ತ, ಕೋಲಾರ ನಗರಸಭೆ
ನಿರ್ವಹಣೆಗೆ ಸಿಬ್ಬಂದಿ ನಿರ್ಲಕ್ಷ್ಯ: ಉದ್ಯಾನವನಗಳ ನಿರ್ವಹಣೆಗಾಗಿ ನಗರಸಭೆಯಿಂದ ಸಿಬ್ಬಂದಿ ನಿಯೋಜಿಸಲಾಗಿದೆ. ಅವರು ಸಮರ್ಪಕವಾಗಿ ನಿರ್ವಹಣೆ ಮಾಡದೆ ಇರುವುದರಿಂದ ಬಹುತೇಕ ಪಾರ್ಕ್ ಗಳು ಕುಡುಕರ ತಾಣಗಳಾಗಿ ಮಾರ್ಪಟ್ಟಿವೆ. ಸಿಬ್ಬಂದಿ ಬೆಳಗ್ಗೆ ಮಾತ್ರ ಪಾರ್ಕ್ಗಳಿಗೆ ಭೇಟಿ ನೀಡಿ ಸ್ವಚ್ಛಗೊಳಿಸುತ್ತಾರೆ, ಈಗಾಗಲೇ ನಾಟಿ ಮಾಡಲಾಗಿರುವ ಗಿಡಗಳಿಗೆ ನೀರು ಸಹ ಹಾಕುವುದಿಲ್ಲ. ಬಿಡಾಡಿ ಹಸುಗಳು ಒಳಗೆ ನುಗ್ಗದಂತೆ ಬಂದೋಬಸ್ತ್ ಸಹ ಮಾಡಿಲ್ಲ.
ಪಾರ್ಕ್ಗಳಲ್ಲಿ ಅಳವಡಿಸಲಾಗಿರುವ ಜಿಮ್ ಉಪಕರಣಗಳು ಹಾಳಾಗಿವೆ. ಗುಣಮಟ್ಟದ ಉಪಕರಣಗಳನ್ನು ಅಳವಡಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬೇಕು. ಉತ್ತಮ ವಾತಾವರಣವುಳ್ಳ ಪಾರ್ಕ್ಗಳನ್ನಾಗಿ ನಿರ್ಮಿಸಲು ನಗರಸಭೆ ಮುಂದಾಗಬೇಕು. -ರಾಜೇಶ್ ಸಿಂಗ್ ಗೌರಿಪೇಟೆ ನಿವಾಸಿ
ಸರ್ವಜ್ಞ ಪಾರ್ಕ್ ಅಭಿವೃದ್ಧಿಗೆ ಒತ್ತಾಯ: ನಗರದಲ್ಲಿರುವ ಪಾರ್ಕ್ಗಳ ಪೈಕಿ ಸರ್ವಜ್ಞ ಪಾರ್ಕ್ ಸುಮಾರು 85 ವರ್ಷ ಹಳೆಯದಾಗಿದೆ. ಇದರಲ್ಲಿ ರೇಡಿಯೋ ಕಿಯೋಸ್ಕ್, ಬ್ಯಾಂಡ್ ಸ್ಟಾಂಡ್, ಕಾರಂಜಿ ಹೀಗೆ ಗಮನ ಸೆಳೆಯುವ ಆಕರ್ಷಗಳಿವೆ. ಅವೆಲ್ಲ ಈಗ ನಿರ್ವಹಣೆಯಿಲ್ಲದೇ ಹಾನಿಯಾಗಿದ್ದು, ದುರಸ್ತಿಪಡಿಸಿ ಜನರ ಅನುಕೂಲಕ್ಕೆ ಅನುವು ಮಾಡಿಕೊಡಲು ನಗರಸಭೆ ಕಾಮಗಾರಿ ಕೈಗೆತ್ತಿಕೊಂಡಿದೆ.
-ಕಿರುವಾರ ಎಸ್. ಸುದರ್ಶನ್ ಕೋಲಾರ