ಮೈಸೂರು: ಮುಸ್ಲಿಮರ ರಂಜಾನ್ ತಿಂಗಳ ಉಪವಾಸ ಕೊನೆಗೊಂಡಿದ್ದು, ಗುರುವಾರ ಈದುಲ್ ಫಿತ್ರ್ ಆಚರಣೆ ನಡೆಯಿತು.
ಶಾಂತಿ, ಸೌಹಾರ್ದತೆಯ ಸಂದೇಶ ಸಾರುವ ಈದ್‌ಲ್ ಫಿತ್ರ್ ಅನ್ನು ನಗರದೆಲ್ಲೆಡೆ ಮುಸ್ಲಿಮರು ಭಕ್ತಿಭಾವದಿಂದ ಆಚರಿಸಿದರು.
ನಗರದ ಮಸೀದಿಗಳಲ್ಲಿ ಗುರುವಾರ ಬೆಳಗ್ಗೆಯಿಂದಲೇ ಪ್ರಾರ್ಥನೆ ಸಲ್ಲಿಸಿದ ಮುಸಲ್ಮಾನರು ಬಳಿಕ ತಿಲಕ್‌ನಗರದ ಈದ್ಗಾ ಮೈದಾನಕ್ಕೆ ತೆರಳಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಮುಸ್ಲಿಂ ಧರ್ಮಗುರು ಸರ್‌ಖಾಜಿ ಮೌಲಾನ ಮಹಮ್ಮದ್ ಉಸ್ಮಾನ್ ಶರೀಫ್ ನೇತೃತ್ವದಲ್ಲಿ ವಹಿಸಿದ್ದರು.
ಪ್ರಾರ್ಥನೆ ಬಳಿಕ ಹಬ್ಬದ ಶುಭಾಶಯ ವಿನಿಮಯ ಮಾಡಿಕೊಂಡು ಸಿಹಿ ವಿತರಿಸಿ ಸಂಭ್ರಮಿಸಿದರು. ಈ ಸಂದರ್ಭದಲ್ಲಿ ಬಡ ಮುಸ್ಲಿಮರಿಗೆ ಹಬ್ಬದ ಅಂಗವಾಗಿ ಸಿಹಿ ತಿಂಡಿ, ಹಾಲು, ಹಣ್ಣು, ಬಟ್ಟೆ ಇತ್ಯಾದಿ ವಸ್ತುಗಳನ್ನು ವಿತರಿಸಲಾಯಿತು.
ಸಾಮೂಹಿಕ ಪ್ರಾರ್ಥನೆಗೆ ನಗರದ ವಿವಿಧ ಕಡೆಗಳಿಂದ ಸಾವಿರಾರು ಜನರು ಭಾಗವಹಿಸಿದ್ದರು. ಮಕ್ಕಳು, ಯುವಕರು, ವೃದ್ಧರು ಸೇರಿದಂತೆ ಎಲ್ಲ ವಯೋಮಾನದವರು ಹೊಸ ಉಡುಪು ಧರಿಸಿ ಕಂಗೊಳಿಸಿದರು. ಸಾಮೂಹಿಕ ಪ್ರಾರ್ಥನೆ ವೇಳೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮೈದಾನದ ಸುತ್ತಮುತ್ತ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.
ರಾಜೀವ್‌ನಗರ, ಗೌಸಿಯಾನಗರದ ಈದ್ಗಾಗಳಲ್ಲಿ ಈದ್ ನಮಾಜ್ ನಡೆಯಿತು. ಬಡಾವಣೆಗಳಲ್ಲಿ ಇರುವ ಮಸೀದಿಗಳಲ್ಲಿ ಪ್ರಾರ್ಥನೆ ನಡೆಯಿತು. ಇದಾದ ಬಳಿಕ ಸ್ನೇಹಿತರ ಮನೆಗಳಿಗೆ, ಅಕ್ಕ ಪಕ್ಕದ ಮನೆಗಳಿಗೆ ತೆರಳಿ ಶುಭಾಶಯ ವಿನಿಮಯ ಮಾಡಿಕೊಂಡರು. ಸಾಮೂಹಿಕ ಪ್ರಾರ್ಥನೆ ಹಾಗೂ ಸಾಮೂಹಿಕ ನಮಾಜ್ ಸಮಯದಲ್ಲೂ ಎಲ್ಲರೂ ಶುಭಾಶಯ ವಿನಿಮಯ ಮಾಡಿಕೊಂಡರು.