ಜಿಲ್ಲೆ

ಈದ್ ಮಿಲಾದ್ ಸಂಭ್ರಮಕ್ಕೂ ಕರೊನಾ ಅಡ್ಡಿ

Dakshina Kannada

ಅನ್ಸಾರ್ ಇನೋಳಿ ಉಳ್ಳಾಲ

ಕರೊನಾ ಪರಿಣಾಮ ಈದ್ ಮಿಲಾದ್ ಸಂಭ್ರಮಕ್ಕೂ ತಟ್ಟಿದ್ದು, ಈ ವರ್ಷ ರಬೀವುಲ್ ಅವ್ವಲ್ ತಿಂಗಳು ಕಳೆಗುಂದಿದೆ.

ಕರೊನಾದಿಂದ ರಂಜಾನ್ ಮತ್ತು ಈದುಲ್ ಫಿತ್ರ್ ಹಬ್ಬದ ಸಂಭ್ರಮವಿಲ್ಲದೆ ವ್ಯಾಪಾರಿಗಳೂ ನಷ್ಟ ಅನುಭವಿಸಿದ್ದರು. ಬಕ್ರೀದ್ ಸಂದರ್ಭ ಕರೊನಾ ಕಾಟ ಜೋರಾಗಿದ್ದರೂ ಜನಮನದಿಂದ ಒಂದಷ್ಟು ದೂರವಾಗಿತ್ತು. ಈಗ ಮತ್ತೆ ಹೆಚ್ಚುತ್ತಿರುವುದು ಈದ್ ಮಿಲಾದ್ ಸಂಭ್ರಮಕ್ಕೂ ಅಡ್ಡಿಯಾಗಿದೆ.

ಪ್ರವಾದಿ(ಸ.ಅ) ಅವರ ಜನ್ಮದಿನಾಚರಣೆಗೆ ಈದ್ ಮಿಲಾದ್ ಎನ್ನಲಾಗುತ್ತದೆ. ಇದು ಇಸ್ಲಾಮಿಕ್ ಕ್ಯಾಲೆಂಡರ್‌ನ ಮೂರನೇ ತಿಂಗಳಾಗಿರುವ ರಬೀವುಲ್ ಅವ್ವಲ್ನಲ್ಲಿ ಬರುತ್ತದೆ. ಈ ತಿಂಗಳ 12ರಂದು ಈದ್ ಮಿಲಾದ್ ಆಚರಿಸಲಾಗುತ್ತದೆ. ಆ ದಿನ ಮದರಸಾ ಮಕ್ಕಳೊಂದಿಗೆ ಹಿರಿಯರು, ಧರ್ಮಗುರುಗಳೂ ಮೆರವಣಿಗೆ ನಡೆಸಿ ಸಾರ್ವಜನಿಕವಾಗಿ ಸಿಹಿತಿಂಡಿ, ಪಾನೀಯ ಹಂಚುತ್ತಾರೆ. ಮಸೀದಿಗಳಲ್ಲಿ ಧಾರ್ಮಿಕ ಕಾರ್ಯಕ್ರಮ, ಮೌಲೀದ್ ಪಾರಾಯಣ, ಅನ್ನದಾನ ಇರುತ್ತದೆ.

ತಯಾರಿಯೇ ನಡೆದಿಲ್ಲ: ಈ ತಿಂಗಳಿಡೀ ಸುನ್ನಿಗಳು ಪ್ರವಾದಿ(ಸ.ಅ) ಜೀವನ ಚರಿತ್ರೆ ಪಸರಿಸಲು ಮೀಸಲಿಡುತ್ತಾರೆ. ಮದರಸಾಗಳಲ್ಲಿ ಮಕ್ಕಳ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣೆ, ಸರ್ವಧರ್ಮ ಕಾರ್ಯಕ್ರಮಗಳು ನಡೆಯುತ್ತವೆ. ಈ ಬಾರಿ ಪರಿಸ್ಥಿತಿ ಪ್ರತಿಕೂಲವಾಗಿರುವ ಹಿನ್ನೆಲೆಯಲ್ಲಿ ಸುನ್ನಿಗಳು ಈದ್ ಮಿಲಾದ್ ತಯಾರಿಯನ್ನೇ ಮಾಡಿಲ್ಲ. ಮದರಸಾಗಳು ಬಂದ್ ಇರುವುದರಿಂದ ಕಾರ್ಯಕ್ರಮ ಸಿದ್ಧತೆ ನಡೆದಿಲ್ಲ. ರಾಜ್ಯ ಸರ್ಕಾರ ಮಾರ್ಗಸೂಚಿಯಲ್ಲಿ ಕಾರ್ಯಕ್ರಮ ನಡೆಸದಂತೆ ಸೂಚಿಸಿದೆ.

ಕರೊನಾದಿಂದ ಏಳು ತಿಂಗಳಿಂದ ದೇಶದಲ್ಲಿ ಅನಾರೋಗ್ಯ ಪರಿಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ಮುಸ್ಲಿಮರು ದೇಶ, ರಾಜ್ಯದ ಹಿತಕ್ಕಾಗಿ ಧರ್ಮಗುರುಗಳ ತೀರ್ಮಾನದಂತೆ ಈದುಲ್ ಫಿತ್ರ್ ಮತ್ತು ಬಕ್ರೀದ್ ಹಬ್ಬ ಸರಳವಾಗಿ ಆಚರಿಸಿ ಸರ್ಕಾರದ ನಿಯಮ ಪಾಲಿಸಿದ್ದಾರೆ. ಅದೇ ರೀತಿ ಈದ್ ಮಿಲಾದ್ ಆಚರಿಸಲು ತೀರ್ಮಾನಿಸಿದ್ದಾರೆ.

ಎಚ್.ಎಂ.ಅಶ್ರಫ್ ತಸ್ವೀದ್ ಮಂಗಳೂರು, ಸಾಮಾಜಿಕ ಮುಖಂಡ

ಸಾಂಕ್ರಾಮಿಕ ಕಾಯಿಲೆಯಿಂದ ದೂರವಿರಲು ಸುರಕ್ಷಿತ ಕ್ರಮ ಪಾಲಿಸಬೇಕು ಎನ್ನುವುದನ್ನು ಇಸ್ಲಾಂ ತಿಳಿಸಿದೆ. ಇದಕ್ಕನುಗುಣವಾಗಿ ಎರಡು ಪ್ರಮುಖ ಹಬ್ಬಗಳನ್ನು ಸರಳವಾಗಿ ಆಚರಿಸಿರುವ ಮುಸ್ಲಿಮರು ಈಗ ಲೋಕ ಪ್ರವಾದಿ(ಸ.ಅ) ಅವರ ಸಂದೇಶದಂತೆಯೇ ಅವರ ಜನ್ಮ ತಿಂಗಳನ್ನು ಆಚರಿಸಲು ಮುಂದಾಗಿದ್ದಾರೆ.

ಇಕ್ಬಾಲ್ ಸಾಮಾನಿಗೆ, ಸಾಮಾಜಿಕ ಮುಖಂಡ