ಮಡಿಕೇರಿ: ಜಿಲ್ಲೆಯ ವಿವಿಧ ಮಸೀದಿಗಳಲ್ಲಿ ಈದ್ ಮಿಲಾದ್ ಸಂದೇಶ ಘೋಷಣಾ ರ‌್ಯಾಲಿ ಅತಿವಿಜೃಂಭಣೆಯಿಂದ ನೆರವೇರಿತು.
ಚೆಟ್ಟಳ್ಳಿ ಸಮೀಪದ ಕಂಡಕರೆಯ ಮಸ್ಜಿದ್ ತಖ್ವಾ ಹಾಗೂ ಈದ್ ಮಿಲಾದ್ ಕಮಿಟಿ ಆಶ್ರಯದಲ್ಲಿ ಪ್ರವಾದಿ ಮೊಹಮ್ಮದ್ ಪೈಗಂಬರ್‌ರವರ ೧೪೯೭ನೇಯ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಲಾಯಿತು. ಕಂಡಕರೆಯಲ್ಲಿ ಮೂರು ದಿನಗಳ ಕಾಲ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ನಡೆದು, ಜನರ ಮನಗೆದ್ದಿತ್ತು.
ಕಂಡಕರೆ ಹಯಾತುಲ್ ಇಸ್ಲಾಂ ಮದರಸ ಪೂರ್ವ ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಭಾನುವಾರ ಬೆಳಗ್ಗೆ ಮಸೀದಿಯಲ್ಲಿ ಪ್ರವಾದಿ ಜನ್ಮದಿನದ ಅಂಗವಾಗಿ ಮೌಲಿದ್ ಪಾರಾಯಣ ಕಾರ್ಯಕ್ರಮ ನಡೆಯಿತು. ಮೌಲಿದ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಹಲ್ ಖತೀಬರಾದ ಮುಸ್ತಫಾ ಸಖಾಫಿ ವಹಿಸಿದ್ದರು.
ಧ್ವಜಾರೋಹಣವನ್ನು ಹಯಾತುಲ್ ಇಸ್ಲಾಂ ಮುಖ್ಯ ಶಿಕ್ಷಕ ಖಾತಿಮ್ ತಂಙಲ್ ನೆರವೇರಿಸಿದರು. ಕಂಡಕರೆಯ ಮಸೀದಿಯಿಂದ, ಕಾಫಿಬೋರ್ಡ್‌ವರೆಗೆ ಈದ್ ಮಿಲಾದ್ ರ‌್ಯಾಲಿ ನಡೆಯಿತು. ರ‌್ಯಾಲಿಯಲ್ಲಿ ಓಲ್ಡ್ ಸ್ಟೂಡೆಂಟ್ಸ್ ಹಾಗೂ ಮದರಸ ವಿದ್ಯಾರ್ಥಿಗಳು ಧಪ್ ಪ್ರದರ್ಶನ ಸರ್ವಧರ್ಮಿಯರ ಮನಗೆದ್ದಿತ್ತು. ಹಾಗೂ ಪೂರ್ವವಿದ್ಯಾರ್ಥಿಗಳಾದ ಉವೈಸ್ ಹಾಗೂ ಸವಾದ್ ರವರ ಹಾಡುಗಾರಿಕೆ ಈದ್ ಮೀಲಾದ್ ಹಬ್ಬದ ಸಂಭ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.