ಬಂಟ್ವಾಳ: ಈದ್ ಮಿಲಾದ್ ಆಚರಣೆ ಹಾಗೂ ಸ್ವಲಾತ್ ರಾೄಲಿ ವಿವಿಧೆಡೆ ವಿವಿಧ ಮಸೀದಿ-ಮದ್ರಸಗಳ ಆಶ್ರಯದಲ್ಲಿ ಸಂಭ್ರಮ ಹಾಗೂ ಶಾಂತಿಯುತವಾಗಿ ನಡೆಯಿತು.
ತಾಲೂಕಿನ ಪಾಣೆಮಂಗಳೂರು, ಆಲಡ್ಕ, ಗುಡ್ಡೆಅಂಗಡಿ, ರೆಂಗೇಲು, ನಂದಾವರ, ಗೂಡಿನಬಳಿ, ಬಂಟ್ವಾಳ-ಕೆಳಗಿನಪೇಟೆ ಮೊದಲಾದೆಡೆ ಸ್ಥಳೀಯವಾಗಿ ಮಸೀದಿ ಆಡಳಿತ ಸಮಿತಿ ಪದಾಧಿಕಾರಿಗಳು ಹಾಗೂ ಮುದರ್ರಿಸ್-ಖತೀಬರ ಮುಂದಾಳುತ್ವದಲ್ಲಿ ಮಿಲಾದ್‌ಆಚರಣೆ ಹಾಗೂ ರಾೄಲಿ ನೆರವೇರಿತು. ರಾೄಲಿ ಆಗಮಿಸುವ ದಾರಿಯುದ್ದಕ್ಕೂ ವಿವಿಧ ಸಂಘ-ಸಂಸ್ಥೆಗಳು ಹಾಗೂ ಖಾಸಗಿ ವ್ಯಕ್ತಿಗಳ ವತಿಯಿಂದ ಪಾನೀಯ, ಸಿಹಿ ತಿಂಡಿ, ಅನ್ನದಾನ ವಿತರಿಸಲಾಯಿತು.
ಮದ್ರಸ ವಿದ್ಯಾರ್ಥಿಗಳ ದಫ್ ಪ್ರದರ್ಶನ, ಫ್ಲವರ್ ಶೋ, ತಾಲೀಮು ಪ್ರದರ್ಶನಗಳು ರಾೄಲಿಗೆ ವಿಶೇಷ ಮೆರುಗು ನೀಡಿದ್ದವು. ಕಾರ್ಯಕ್ರಮ ಯಾವುದೇ ಅಡೆತಡೆ ಇಲ್ಲದಂತೆ ನೆರವೇರಲು ಸ್ಥಳೀಯ ಯುವಕರ ಸ್ವಯಂಸೇವಕರ ತಂಡ ಹಾಗೂ ಬಂಟ್ವಾಳ ನಗರ ಠಾಣಾ ಪೊಲೀಸರು ಅಗತ್ಯ ಕ್ರಮ ಕೈಗೊಂಡರು.