ಸುಂಟಿಕೊಪ್ಪ: ಹೋಬಳಿಯ 7ನೇ ಹೊಸಕೋಟೆ ಗ್ರಾಮದಲ್ಲಿ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ಹಾಗೂ ಈದ್‌ಮಿಲಾದ್ ಹಬ್ಬ ಹಿಂದು-ಮುಸ್ಲಿಮರ ನಡುವಿನ ಭಾವೈಕ್ಯತೆಗೆ ಸಾಕ್ಷಿಯಾಯಿತು.
ಗ್ರಾಮದಲ್ಲಿ ಪ್ರತಿಷ್ಠಾಪಿಸಿದ್ದ ಗೌರಿ-ಗಣೇಶ ಮೂರ್ತಿಗಳ ವಿಸರ್ಜನಾ ಮಹೋತ್ಸವ ಬುಧವಾರ ರಾತ್ರಿ ನೆರವೇರಿತು. ಪ್ರಮುಖ ರಸ್ತೆಗಳಲ್ಲಿ ಅದ್ದೂರಿ ಮೆರವಣಿಗೆ ಮಾಡಿ ಮೂರ್ತಿಗಳನ್ನು ವಿಸರ್ಜಿಸಲಾಯಿತು. ಮೆರವಣಿಗೆ ಸಂದರ್ಭದಲ್ಲಿ ಮುಸ್ಲಿಂ ಸಮುದಾಯದ ನೂರಾರು ಯುವಕರು ಹಿಂದು ಭಕ್ತರಿಗೆ ತಂಪು ಪಾನೀಯವನ್ನು ಸರಬರಾಜು ಮಾಡುವ ಮೂಲಕ ಸೌಹಾರ್ದತೆ ಮೆರೆದರು.
ಇದನ್ನು ಅತ್ಯಂತ ಆತ್ಮೀಯವಾಗಿ ಸ್ವೀಕರಿಸಿದ್ದ ಹಿಂದು ಯುವಕರು ಗುರುವಾರ ಈದ್‌ಮಿಲಾದ್ ಅಂಗವಾಗಿ ಮುಸ್ಲಿಮರು ಹಮ್ಮಿಕೊಂಡಿದ್ದ ಸಾಮೂಹಿಕ ಮೆರವಣಿಗೆಯಲ್ಲಿ ತಂಪು ಪಾನೀಯ ವಿತರಿಸಿ ಭಾವೈಕ್ಯತೆ ಹಾಗೂ ಸ್ನೇಹದ ಸಂದೇಶ ಸಾರಿದರು. 7ನೇ ಹೊಸಕೋಟೆಯಲ್ಲಿ ನಡೆದ ಈ ಎರಡೂ ಕಾರ್ಯಕ್ರಮಗಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರಿಂದ ಭಾರಿ ಪ್ರಮಾಣದಲ್ಲಿ ಮೆಚ್ಚುಗೆಯ ಸಂದೇಶಗಳು ಹರಿದು ಬರುತ್ತಿವೆ.
ಈ ರೀತಿಯ ಧರ್ಮಾತೀತ ಮತ್ತು ಜಾತ್ಯತೀತ ನೆಲೆಗಟ್ಟಿನಲ್ಲಿ ಪರಸ್ಪರ ನಂಬಿಕೆ ಹಾಗೂ ಭಾವನೆಗಳನ್ನು ಗೌರವಿಸಿದಾಗ ನಾವು ರಾಮರಾಜ್ಯದ ರೂವಾರಿಗಳಾಗುತ್ತೇವೆ. ಇಂತಹ ಒಳ್ಳೆಯ ಕೆಲಸ ಇನ್ನೂ ಅನೇಕ ಒಳ್ಳೆಯ ಮನಸ್ಸುಗಳಿಗೆ ಪ್ರೇರಣೆ ನೀಡಿ ಸುಖಿ ಮತ್ತು ಸಮೃದ್ಧಿಯ ಸಮಾಜವನ್ನು ಕಟ್ಟುವಲ್ಲಿ ಪಣತೊಡಲು ಕೈಮರವಾಗಲೆಂದು ಎರಡೂ ಸಮುದಾಯದ ಜನರು ಆಶಯ ವ್ಯಕ್ತಪಡಿಸಿದ್ದಾರೆ.