ಹುಬ್ಬಳ್ಳಿ: ಕಳೆದೊಂದು ತಿಂಗಳಿಂದ ಏರುಮುಖವಾಗಿದ್ದ ಉಳ್ಳಾಗಡ್ಡಿ ದರ ಇದೀಗ ಕೇಂದ್ರ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳಿಂದಾಗಿ ಕೊಂಚ ಇಳಿಮುಖವಾಗಿದೆ. ರಫ್ತು ನಿಷೇಧ ಮಾಡಿದ್ದಲ್ಲದೆ, ಆಮದಿಗೆ ಇದ್ದ ನಿಬಂಧನೆಗಳ ಸಡಿಲಿಕೆ ಹಾಗೂ ದಾಸ್ತಾನಿನ ಮೇಲೆ ಮಿತಿ ಹೇರಿರುವುದರಿಂದ ಒಂದೇ ವಾರದಲ್ಲಿ ಕ್ವಿಂಟಾಲ್ಗೆ ಎರಡರಿಂದ ಮೂರು ಸಾವಿರ ರೂ.ನಷ್ಟು ಬೆಲೆ ಕಡಿಮೆಯಾಗಿದೆ.
ಈ ಮಧ್ಯೆ ಈಜಿಪ್ಟ್ ದೇಶದ ಉಳ್ಳಾಗಡ್ಡಿ ಮತ್ತೆ ಹುಬ್ಬಳ್ಳಿ ಮಾರುಕಟ್ಟೆಗೆ ಬಂದಿದೆ. ಆದರೆ, ದಪ್ಪ ಹಾಗೂ ಸಿಹಿ ಜತೆಗೆ ಹೆಚ್ಚು ಕೆಂಪು ಬಣ್ಣದಿಂದ ಹೊಳೆಯುತ್ತದೆ ಎನ್ನುವ ಕಾರಣಕ್ಕೆ ಈ ಉಳ್ಳಾಗಡ್ಡಿಯನ್ನು ಯಾರೂ ಕೇಳುತ್ತಿಲ್ಲ. ಎಪಿಎಂಸಿ ಉಳ್ಳಾಗಡ್ಡಿ ವರ್ತಕ ಹಬೀಬ್ ಎನ್ನುವವರು ಒಂದು ಲೋಡ್ (25 ಟನ್) ಈಜಿಪ್ಟ್ ಉಳ್ಳಾಗಡ್ಡಿಯನ್ನು ಮುಂಬೈ ಮೂಲಕ ಮಂಗಳವಾರ ತರಿಸಿದ್ದಾರೆ. ಪ್ರತಿ ಕ್ವಿಂಟಾಲ್ಗೆ 4500 ರೂ. ನಿಗದಿ ಮಾಡಿದ್ದರೂ ಕೊಳ್ಳುವವರು ಇರಲಿಲ್ಲ.
ಸದ್ಯ ಪುಣೆ ಹಾಗೂ ಸ್ಥಳೀಯ ಉಳ್ಳಾಗಡ್ಡಿಗೆ ಹೆಚ್ಚು ಬೇಡಿಕೆ ಇದೆ. ಉತ್ತರ ಕರ್ನಾಟಕದ ಪ್ರಮುಖ ಉಳ್ಳಾಗಡ್ಡಿ ಮಾರುಕಟ್ಟೆಯಾದ ಹುಬ್ಬಳ್ಳಿ ಎಪಿಎಂಸಿಯಲ್ಲಿ ಸದ್ಯದ ದರ ಕ್ವಿಂಟಾಲ್ಗೆ ಸರಾಸರಿ 3-4 ಸಾವಿರ ರೂ. ವರೆಗೆ ಇದೆ. ಚಿಲ್ಲರೆ ಮಾರುಕಟ್ಟೆಯಲ್ಲೂ ಈ ಮೊದಲು 100 ರೂ.ಗೆ ಕೆಜಿ ಇದ್ದದ್ದು, ಇದೀಗ 50- 60 ರೂ.ಗೆ ಇಳಿದಿದೆ.