ಜಿಲ್ಲೆ

ನರ್ಸರಿ ಮಣ್ಣಿನಡಿ ಉಡದ ತತ್ತಿ ಪತ್ತೆ!

Dakshina Kannada


ಬೆಳ್ತಂಗಡಿ: ಉಜಿರೆ ಸಮೀಪದ ನೀರ ಚಿಲುಮೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್‌ನ ಸಿದ್ದವನ ನರ್ಸರಿಯಲ್ಲಿ ಮಣ್ಣಿನ ಅಡಿಯಲ್ಲಿ 28 ಮೊಟ್ಟೆಗಳು ಪತ್ತೆಯಾಗಿವೆ. ಕೋಳಿ ಮೊಟ್ಟೆ ಗಾತ್ರಕ್ಕಿಂತ ಚಿಕ್ಕದು ಹಾಗೂ ಉದ್ದವಿದ್ದು, ಉಡದ ಮೊಟ್ಟೆ ಎಂದು ಅಂದಾಜಿಸಲಾಗಿದೆ.

ನರ್ಸರಿ ತೊಟ್ಟೆಗಳಿಗೆ ಮಣ್ಣು ತುಂಬುವ ವೇಳೆ ರಾಶಿ ಹಾಕಿರುವ ಮಣ್ಣಿನ ಅಡಿಯಲ್ಲಿ ಮೊಟ್ಟೆಗಳು ಪತ್ತೆಯಾಗಿವೆ. ನರ್ಸರಿಯ ಯೋಜನಾಧಿಕಾರಿ ದಯಾನಂದ್, ಜನಜಾಗೃತಿ ಪ್ರಾದೇಶಿಕ ಕಚೇರಿಯ ವಿಪತ್ತು ನಿರ್ವಹಣಾ ವಿಭಾಗದ ಯೋಜನಾಧಿಕಾರಿ ಜೈವಂತ ಪಟಗಾರ್ ಪರಿಶೀಲಿಸಿ ಧರ್ಮಸ್ಥಳದ ಶೌರ್ಯ ಸಮಿತಿಯ ಮಾಸ್ಟರ್ ಹಾಗೂ ಉರಗ ಪ್ರೇಮಿ ಸ್ನೇಕ್ ಪ್ರಕಾಶ್‌ಗೆ ಮಾಹಿತಿ ನೀಡಿದ್ದರು.ಬೆಳ್ತಂಗಡಿಯ ಉರಗ ಪ್ರೇಮಿ ಅಶೋಕ ಅವರಿಂದಲೂ ಮಾಹಿತಿ ಪಡೆಯಲಾಯಿತು.

ಪುತ್ತೂರಿನ ಉರಗ ತಜ್ಞ ರವೀಂದ್ರನಾಥ ಐತಾಳ್ ಅವರಿಗೆ ಮೊಟ್ಟೆಯ ಬಗ್ಗೆ ಸ್ನೇಕ್ ಪ್ರಕಾಶ್ ಮಾಹಿತಿ ನೀಡಿದರು. ಮೊಟ್ಟೆಗಳನ್ನು ಸುರಕ್ಷಿತವಾಗಿ ತಂಪಾದ ಮಣ್ಣಿನ ಅಡಿಯಲ್ಲಿ ಇಟ್ಟಿರಬೇಕು. 60-70 ದಿನದಲ್ಲಿ ಒಡೆದು ಮರಿಗಳಾಗುತ್ತವೆ. ಬಿಸಿಲು ಬಿದ್ದಲ್ಲಿ ಮೊಟ್ಟೆಗಳು ಹಾಳಾಗಬಹುದು. ಮೊಟ್ಟೆಯನ್ನು ಸುರಕ್ಷಿತವಾಗಿ ತಂದು ಕೊಟ್ಟಲ್ಲಿ ಮರಿ ಮಾಡಿಸಿ ಕಾಡಿಗೆ ಬಿಡುವುದಾಗಿ ಐತಾಳ್ ತಿಳಿಸಿದ್ದು, ಅದರಂತೆ ಸ್ನೇಕ್ ಪ್ರಕಾಶ್ ಮೊಟ್ಟೆಗಳನ್ನು ತಲುಪಿಸಿದ್ದಾರೆ.