ಜಿಲ್ಲೆ

ಸಾಲ ಮಾಡಿ ಮೊಟ್ಟೆ ಕೊಡಿ ! ; ಸಂಬಳ ಇಲ್ಲದ ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಲದ ಹೊರೆ

Tumakuru

ತುಮಕೂರು : ಅಂಗನವಾಡಿಗಳಲ್ಲಿ ಫಲಾನುಭವಿಗಳಿಗೆ ವಿತರಿಸಲಾಗುವ ಕೋಳಿ ಮೊಟ್ಟೆಗಳನ್ನು 3 ತಿಂಗಳಿನಿಂದ ಕಾರ್ಯಕರ್ತೆಯರೇ ಸಾಲ ಮಾಡಿ ಕೊಡುತ್ತಿದ್ದಾರೆ. ಕರೊನಾ ನೆಪ ಹಿನ್ನೆಲೆಯಲ್ಲಿ ಆರ್ಥಿಕ ವರ್ಷಾರಂಭದಿಂದ ಮೊಟ್ಟೆ ಖರೀದಿಸಲು ಅಂಗನವಾಡಿ ಬಾಲಸಮಿತಿಗೆ ನೀಡಲಾಗುತ್ತಿದ್ದ ಮುಂಗಡ ಹಣವನ್ನು ರಾಜ್ಯ ಸರ್ಕಾರ ಈವರೆಗೆ ನೀಡಿಲ್ಲ. ಹಾಗಾಗಿ, ಏಪ್ರಿಲ್, ಮೇ ಹಾಗೂ ಜೂನ್‌ನಲ್ಲಿ ಫಲಾನುಭವಿಗಳಿಗೆ ಮೊಟ್ಟೆಗಳನ್ನು ವಿತರಿಸುವ ಹೊಣೆ ಹೊತ್ತಿರುವ ಅಂಗನವಾಡಿ ಕಾರ್ಯಕರ್ತೆಯರೇ ತಿಂಗಳಿಗೆ 3-4 ಸಾವಿರ ರೂ. ನಂತೆ ಸಾಲ ಮಾಡಿ ಮೊಟ್ಟೆ ನೀಡಿದ್ದಾರೆ.

2 ತಿಂಗಳಿಂದ ಸಂಬಳವೇ ಇಲ್ಲ : ಕಾರ್ಯಕರ್ತೆಯರಿಗೆ ಕಳೆದ 2 ತಿಂಗಳಿನಿಂದ ಸಂಬಳ ನೀಡಿಲ್ಲ. ಸಂಬಳವನ್ನೇ ನೆಚ್ಚಿಕೊಂಡು ಜೀವನ ಸಾಗಿಸುವ ಕಾರ್ಯಕರ್ತೆಯರಿಗೆ ಅಧಿಕಾರಿಗಳು ಈಗ ಸಾಲದ ಹೊರೆ ಹೊರಿಸಿದ್ದಾರೆ.

ಅಂಗನವಾಡಿ ಸಿಬ್ಬಂದಿಗೆ ಸರ್ಕಾರವು ಕೋವಿಡ್ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಆದರೆ, 2 ತಿಂಗಳಿಂದ ಸಂಬಳ ನೀಡದ ಸರ್ಕಾರ ಈ ಕರೊನಾ ಧನಸಹಾಯವನ್ನು ಎಂದಿಗೆ ನೀಡಲಿದೆ ಎಂಬ ಪ್ರಶ್ನೆ ಈಗ ಉದ್ಭವಿಸಿದೆ.

ಗರ್ಭಿಣಿ, ಬಾಣಂತಿಗೆ ತಲಾ 25 ಮೊಟ್ಟೆ: ಅಂಗನವಾಡಿಗಳಲ್ಲಿ 3 ರಿಂದ 6 ವರ್ಷದ ಮಕ್ಕಳಿಗೆ ವಾರಕ್ಕೆ 2 ಮೊಟ್ಟೆ, ಅಪೌಷ್ಟಿಕ ಮಕ್ಕಳಿಗೆ ವಾರಕ್ಕೆ 3 ಮೊಟ್ಟೆ ಜತೆಗೆ ಗರ್ಭಿಣಿ ಹಾಗೂ ಬಾಣಂತಿಯರಿಗೆ ವಾರಕ್ಕೆ 6 ಮೊಟ್ಟೆಗಳಂತೆ ತಿಂಗಳಿಗೆ ತಲಾ 25 ಮೊಟ್ಟೆಗಳನ್ನು ಅರ್ಹ ಫಲಾನುಭವಿಗಳಿಗೆ ಉಚಿತವಾಗಿ ವಿತರಿಸಲಾಗುತ್ತದೆ. ಪ್ರತಿ ಮೊಟ್ಟೆಗೆ 5 ರೂ.ಗಳನ್ನು ಸರ್ಕಾರವೇ ಅಂಗನವಾಡಿ ಮಟ್ಟದಲ್ಲಿ ಫಲಾನುಭವಿ ಮಗುವಿನ ತಾಯಿ ಅಧ್ಯಕ್ಷರಾಗಿರುವ ಬಾಲವಿಕಾಸ ಸಮಿತಿಗೆ ಮುಂಗಡವಾಗಿ ಪಾವತಿಸುತ್ತದೆ.

1 ಲಕ್ಷ ಫಲಾನುಭವಿಗಳು: ಜಿಲ್ಲೆಯಲ್ಲಿ 4109 ಅಂಗನವಾಡಿಗಳಲ್ಲಿ ಒಟ್ಟು 1,00,714 ಅರ್ಹ ಫಲಾನುಭವಿಗಳು ಈ ಯೋಜನೆ ಅಡಿ ಬರಲಿದ್ದಾರೆ. 2017ರಲ್ಲಿ ಮಾತೃಪೂರ್ಣ ಯೋಜನೆ ಪ್ರಾರಂಭವಾದಾಗಿನಿಂದ 3-6 ವರ್ಷದ 68208 ಮಕ್ಕಳು, 184 ಅಪೌಷ್ಟಿಕ ಮಕ್ಕಳು ಹಾಗೂ 16442 ಗರ್ಭಿಣಿಯರು, 15880 ಬಾಣಂತಿಯರು ಪ್ರತೀ ತಿಂಗಳು 13.55 ಲಕ್ಷ ಮೊಟ್ಟೆಗಳನ್ನು ನೀಡಲಾಗುತ್ತಿದೆ. 67.79 ಲಕ್ಷ ರೂ.,ಗಳನ್ನು ಕೋಳಿಮೊಟ್ಟೆಗಳಿಗಾಗಿ ವ್ಯಯಿಸಲಾಗುತ್ತಿದೆ.

ಅಂಗನವಾಡಿ ಕಾರ್ಯಕರ್ತೆಯರೇ ಕಳೆದ 3 ತಿಂಗಳಿನಿಂದ ಸಾಲ ಮಾಡಿ ಕೋಳಿಮೊಟ್ಟೆಗಳನ್ನು ವಿತರಿಸುತ್ತಿದ್ದಾರೆ. ಎರಡು ತಿಂಗಳಿನಿಂದ ಸಂಬಳವನ್ನೇ ನೀಡಿಲ್ಲ. ಈಗ ಮೊಟ್ಟೆ ಸಾಲದ ಹೊರೆ ಬಿದ್ದಿದೆ. ಇನ್ನು ಮಾರುಕಟ್ಟೆಯಲ್ಲಿ ಮೊಟ್ಟೆ ದರ 5.50-6 ರೂ., ಆಗಲಿದ್ದು ಹೆಚ್ಚುವರಿ ಹಣವನ್ನು ನಾವೇ ಭರಿಸಬೇಕು. ಪೌಷ್ಟಿಕ ಆಹಾರ ಸರಬರಾಜು ಮಾಡುವಂತೆ ಮೊಟ್ಟೆ ಪೂರೈಸಲಿ. ಇಲ್ಲವಾದಲ್ಲಿ ಇನ್ನುಂದೆ ಮೊಟ್ಟೆ ಖರೀದಿಸಿ ನಾವಂತೂ ನೀಡುವುದಿಲ್ಲ. ಜಿ.ಕಮಲ, ಅಧ್ಯಕ್ಷೆ, ರಾಜ್ಯ ಅಂಗನವಾಡಿ ನೌಕರರ ಜಿಲ್ಲಾ ಸಮಿತಿ 2-3 ದಿನಗಳಲ್ಲಿ ಇಲಾಖೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗುವ ನಿರೀಕ್ಷೆ ಇದ್ದು ಮೊಟ್ಟೆ ಖರೀದಿಸಿರುವ ಅಂಗನವಾಡಿ ಕಾರ್ಯಕರ್ತೆಯರ ಖಾತೆಗೆ ನೇರವಾಗಿ ಹಣ ಹಾಕಲಾಗುವುದು. ಮಾರುಕಟ್ಟೆಯಲ್ಲಿ ಮೊಟ್ಟೆ ದರ 6 ರಿಂದ 6.50 ರೂ.,ಗೆ ಹೆಚ್ಚಾಗುವ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಇಲಾಖೆ ಮೂಲಕ ಗ್ರಾಪಂಗಳ ಅನುದಾನದಲ್ಲಿ ವ್ಯತ್ಯಾಸದ ಹಣ ಪಡೆಯಬಹುದಾಗಿದೆ. ಎಸ್.ನಟರಾಜು, ಉಪನಿರ್ದೇಶಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ