ಜಿಲ್ಲೆ

ಮೊಟ್ಟೆ ತಿನ್ನಿ, ಸಮಸ್ಯೆ ಏನಿಲ್ಲ ಎಂದ ಪಶುವೈದ್ಯರು

Dakshina Kannada

ಮಂಗಳೂರು: ಮೊಟ್ಟೆ ತಿನ್ನುವುದರಿಂದ ಆರೋಗ್ಯ ಮತ್ತು ಜೀವನಶೈಲಿಯಲ್ಲಿ ಸಮಸ್ಯೆಗಳಾಗಬಹುದು ಎಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಸಮಿತಿಯ ತಜ್ಞರ ತಂಡದ ಕರ್ನಾಟಕದ ಸದಸ್ಯರೊಬ್ಬರು ಎನ್‌ಇಪಿಗೆ ಮಾಡಿರುವ ಶಿಫಾರಸನ್ನು ಕೋಳಿ ಉದ್ಯಮದ ಪಶುವೈದ್ಯರ ಸಂಸ್ಥೆ (ಐವಿಪಿಐ) ಮತ್ತು ಕರ್ನಾಟಕ ಪೌಲ್ಟ್ರಿ ಫಾರ್ಮರಸ್ ಆ್ಯಂಡ್ ಬ್ರೀಡರ್ಸ್‌ ಅಸೋಸಿಯೇಶನ್(ಕೆಪಿಎಫ್‌ಬಿಎ) ತೀವ್ರವಾಗಿ ವಿರೋಧಿಸಿದೆ.

ಬೆಂಗಳೂರಿನ ನಿಮ್ಹಾನ್ಸ್‌ನ ಮಕ್ಕಳ ಮತ್ತು ಹದಿಹರೆಯದವರ ಮನೋವೈದ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಮತ್ತು ಮುಖ್ಯಸ್ಥ ಡಾ. ಕೆ.ಜಾನ್ ವಿಜಯ್ ಸಾಗರ್ ಅವರ ಶಿಫಾರಸು ವೈಜ್ಞಾನಿಕ ಪುರಾವೆಗಳನ್ನು ಆಧರಿಸಿಲ್ಲ ಎಂದು ಉಭಯ ಸಂಸ್ಥೆಗಳು ಹೇಳಿವೆ.

ಐವಿಪಿಐ ಅಧ್ಯಕ್ಷ ಡಾ.ಜಿ.ದೇವೇಗೌಡ ಮಾಹಿತಿ ನೀಡಿ, ಮೊಟ್ಟೆ ಸೇವನೆಯಿಂದ ಹಲವು ಪ್ರಯೋಜನಗಳಿವೆ. ಮೊಟ್ಟೆ ಪೌಷ್ಟಿಕಾಂಶದ ಶಕ್ತಿ ಕೇಂದ್ರ. ಪ್ರತಿ ವಯಸ್ಸು ಮತ್ತು ಜೀವನದ ಹಂತದಲ್ಲಿ ಆರೋಗ್ಯ ಮತ್ತು ಯೋಗಕ್ಷೇಮಕ್ಕೆ ಕೊಡುಗೆ ನೀಡುತ್ತಿದೆ. ಪ್ರೊಟೀನ್ ಕೋಲೀನ್, ರಿಬೋಫ್ಲಾವಿನ್ (ವಿಟಮಿನ್ ಬಿ2), ವಿಟಮಿನ್ ಬಿ12, ಬಯೋಟಿನ್ (ಬಿ7), ಪ್ಯಾಂಟೊಥೆನಿಕ್ ಆಮ್ಲ (ಬಿ5), ಅಯೋಡಿನ್ ಸೇರಿದಂತೆ ನಿರ್ಣಾಯಕ ಪೋಷಕಾಂಶಗಳನ್ನು ಒದಗಿಸುತ್ತದೆ. ಮೊಟ್ಟೆಯಲ್ಲಿರುವ ಸೆಲೆನಿಯಮ್ ಸ್ನಾಯು ಮತ್ತು ಮೂಳೆಗಳ ಆರೋಗ್ಯ, ಮೆದುಳಿನ ಬೆಳವಣಿಗೆ ಮೊದಲಾದವುಗಳಿಗೆ ಸಹಕಾರಿ ಎಂದರು.

ಕೆಪಿಎಫ್‌ಬಿಎ ಅಧ್ಯಕ್ಷ ಡಾ. ಬಿ.ಸುಶಾಂತ್ ರೈ ಮಾಹಿತಿ ನೀಡಿ, ಈ ಅವೈಜ್ಞಾನಿಕ ಮತ್ತು ಪಕ್ಷಪಾತದ ವರದಿಗಳು ಕೋಳಿ ಮತ್ತು ಮೊಟ್ಟೆ ಸೇವನೆಯಲ್ಲಿ ಕುಸಿತಕ್ಕೆ ಕಾರಣವಾಗುತ್ತದೆ. ಇದರಿಂದ ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಭಾರಿ ನಷ್ಟ ಉಂಟಾಗುತ್ತದೆ. ದುರುದ್ದೇಶಪೂರಿತ ವರದಿ ಮತ್ತು ವದಂತಿಗಳಿಂದ ಶೇ.30ಕ್ಕಿಂತ ಹೆಚ್ಚು ಕೋಳಿ ಸಾಕಣೆದಾರರು ಕೋಳಿ ಸಾಕಣೆ ನಿಲ್ಲಿಸಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.