ತುಮಕೂರು : ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಮಠದ ವತಿಯಿಂದ ವಿದ್ಯಾರ್ಥಿನಿಲಯ ಸ್ಥಾಪಿಸಲಾಗಿದೆ, ಶೈಕ್ಷಣಿಕ ಕ್ಷೇತ್ರಕ್ಕೆ ಮುರುಘಾ ಮಠದ ಕೊಡುಗೆ ಅಪಾರ ಎಂದು ಸಚಿವ ಜೆ.ಸಿ.ಮಾಧುಸ್ವಾಮಿ ಅಭಿಪ್ರಾಯಪಟ್ಟರು.
ನಗರದ ಜಯದೇವ ವಿದ್ಯಾರ್ಥಿನಿಲಯದಲ್ಲಿ ಭಾನುವಾರ ಶ್ರೀ ಶಿವಮೂರ್ತಿ ಮುರುಘಾ ರಾಜೇಂದ್ರ ಸಭಾಂಗಣ ಉದ್ಘಾಟಿಸಿ ಮಾತನಾಡಿದ ಅವರು, ಮುರುಘಾ ಶರಣರು ಸಮಾಜದ ಜತೆಗೆ ಸಣ್ಣಪುಟ್ಟ ಸಮುದಾಯಗಳ ಸ್ವಾಮೀಜಿಗಳಿಗೆ ದೀಕ್ಷೆ ನೀಡಿ, ಬಸವಣ್ಣ ಅವರ ತತ್ವವನ್ನು ಅಳವಡಿಸಿಕೊಂಡಿರುವ ನಿಜಯೋಗಿ ಎಂದರು.
ಬಸವಣ್ಣ ಅವರ ತತ್ವಗಳು ನಮಗೆ ಅರ್ಥವಾಗಿದ್ದು ಕಡಿಮೆ, ಶರಣ ಧರ್ಮದ ಬಗ್ಗೆ ಉತ್ತಮವಾದ ಕೆಲಸಗಳಾಗುತ್ತಿರುವುದು ಸಿದ್ಧಗಂಗಾ ಮಠ ಮತ್ತು ಮುರುಘಾ ಮಠದಿಂದ. ಇಂತಹ ಇನ್ನಷ್ಟು ಕಾರ್ಯಗಳು ಹೆಚ್ಚಬೇಕಿದೆ, ಮನುಷ್ಯನಿಗೆ ಸಮಾಧಾನವೇ ಅವಶ್ಯ, ಸಮಾಧಾನವಿದ್ದರೆ ನೆಮ್ಮದಿ, ಸಂತೋಷ ಸಿಗುತ್ತದೆ ಅದಕ್ಕಾಗಿ ಆಧ್ಯಾತ್ಮಿಕ ಚಿಂತನೆಗಳು ಅಗತ್ಯ ಎಂದರು.
ತಂತ್ರಜ್ಞಾನ ಹೆಚ್ಚಾದಂತೆ ಆಧ್ಯಾತ್ಮಿಕ ಚಿಂತನೆಗಳು ಕಡಿಮೆಯಾಗುತ್ತಿವೆ, ಆಧ್ಯಾತ್ಮಿಕ ಚಿಂತನೆ, ಮನಸ್ಸಿನ ಸಂದಿಗ್ಧತೆ ದೂರವಾಗಿಸುವ ನಿಟ್ಟಿನಲ್ಲಿ ಮುರುಘಾ ಶರಣರು ವೇದಿಕೆ ಮಾಡಿ ಕೊಟ್ಟಿದ್ದಾರೆ, ಹೊಸತನ ಹುಡುಕಲು ಯೋಗ, ಪ್ರಾರ್ಥನೆ ಅವಶ್ಯಕವಾಗಿದ್ದು, ಈ ನಿಟ್ಟಿನಲ್ಲಿ ಕಾರ್ಯಕ್ರಮಗಳು ಹೆಚ್ಚಲಿ ಎಂದರು.
ಸಿದ್ಧಗಂಗಾ ಮಠಾಧೀಶ ಶ್ರೀ ಸಿದ್ದಲಿಂಗ ಸ್ವಾಮೀಜಿ ಮಾತನಾಡಿ, ಸಮಾಜದ ವಿದ್ಯಾರ್ಥಿಗಳಿಗಾಗಿ ವಿದ್ಯಾರ್ಥಿನಿಲಯ ಸ್ಥಾಪಿಸಿದ ಮುರುಘಾ ಮಠ ಅನೇಕ ವಿದ್ಯಾರ್ಥಿಗಳ ಬದುಕು ಹಸನು ಮಾಡಿದೆ. ಇಲ್ಲಿ ಆಶ್ರಯ ಪಡೆದವರು ಉನ್ನತ ಸ್ಥಾನದಲ್ಲಿದ್ದಾರೆ ಎಂದರು.
ಬಸವಕೇಂದ್ರದ ಮೂಲಕ ಬಸವತತ್ವ ಪ್ರಸರಿಸುವ ಕಾಯಕ ನಿರಂತರವಾಗಿದೆ. ಬಸವಕೇಂದ್ರದ ತಾಯಂದಿರಿಗಾಗಿ ಈ ಸಭಾಂಗಣವನ್ನು ಮುರುಘಾ ಶರಣರು ನಿರ್ಮಿಸಿಕೊಟ್ಟಿದ್ದಾರೆ. ಬಹಿರ್ಮುಖಕ್ಕಿಂತ ಅಂತರಂಗದ ಬದುಕು ಮುಖ್ಯ, ಅದಕ್ಕಾಗಿ ಸತ್ ಚಿಂತನೆ ಮಾಡಬೇಕಿದೆ ಎಂದರು.
ಜಿಲ್ಲೆಯಲ್ಲಿ ಬಸವಕೇಂದ್ರಕ್ಕೆ ತಮ್ಮನ್ನು ತಾವು ಅರ್ಪಣೆ ಮಾಡಿಕೊಂಡಿರುವ ಸಿದ್ಧಗಂಗಮ್ಮ ಅವರ ನೇತೃತ್ವದಲ್ಲಿ ಕೇಂದ್ರ ಉತ್ತಮವಾಗಿ ನಡೆಯುತ್ತಿದ್ದು, ಲೌಕಿಕ ಜಗತ್ತಿನೊಳಗೆ ದೈವಿಕ ಚಿಂತನೆಗಳ ಬಗ್ಗೆ ಕ್ಷಣಕಾಲವಾದರೂ ಚಿಂತಿಸಬೇಕಿರುವುದು ಅಗತ್ಯವಾಗಿದೆ ಎಂದರು.
ಹಿರೇಮಠದ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಪಾಲಿಕೆ ಸದಸ್ಯ ಮಹೇಶ್, ಬಸವಕೇಂದ್ರದ ಸಿದ್ಧಗಂಗಮ್ಮ, ಡಾ.ಡಿ.ಎನ್.ಯೋಗೀಶ್ವರಪ್ಪ, ಡಾ.ರಾಜಶೇಖರ್, ಶಿವಾನಂದ್, ಚಂದ್ರಶೇಖರ್, ರಾಮಕೃಷ್ಣಪ್ಪ, ಜಿ.ಆರ್.ರೇಣುಕಾಪ್ರಸಾದ್, ಜಿ.ಆರ್.ನೇತ್ರಾಸುರೇಶ್, ಈಶ್ವರಯ್ಯ, ನಾಗರಾಜು, ಜಯಣ್ಣ ಇದ್ದರು.
ಶರೀರಕ್ಕೆ ಸಾವಿದೆ, ಸಾಧನೆಗಲ್ಲ : ದೂರದೃಷ್ಟಿ ಮತ್ತು ದಿವ್ಯದೃಷ್ಟಿ ಹೊಂದಿದ್ದ ಮುರುಘಾ ರಾಜೇಂದ್ರ ಸ್ವಾಮೀಜಿ ಸಮಾಜಕ್ಕೆ ನೀಡಿದ ಕೊಡುಗೆಗಳು ಅಪಾರ, ಶರೀರಕ್ಕೆ ಸಾವಿದೆ, ಮಾಡಿದ ಸಾಧನೆಗಲ್ಲ. ಸಮಾಜದಲ್ಲಿ ಶಾಶ್ವತವಾಗಿ ಉಳಿಯಲು ಸತ್ಕಾರ್ಯ, ಪರೋಪಕಾರದ ಕಾರ್ಯಮಾಡಿ ಎಂದು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಶ್ರೀ ಶಿವಮೂರ್ತಿ ಮುರುಘಾ ಶರಣರು ಸಲಹೆ ನೀಡಿದರು. ವಿದ್ಯಾರ್ಥಿ ಜೀವನಕ್ಕೆ ಬೇಕಾದ ವಿದ್ಯಾರ್ಥಿನಿಲಯ, ಪ್ರಸಾದನಿಲಯ ಸೇರಿ ಹಲವಾರು ಜನಪರ ಕಾರ್ಯ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ನಗರದಲ್ಲಿ ಮುರುಘಾ ಮಠದಿಂದ ನೂತನ ಕೆಲಸಗಳನ್ನು ಹಮ್ಮಿಕೊಳ್ಳಲಾಗುವುದು ಎಂದರು.
ವಿದ್ಯಾಭ್ಯಾಸಕ್ಕೆ ಮುರುಘಾಮಠ ನೀಡಿದಷ್ಟು ಕೊಡುಗೆ ಯಾರೂ ಕೊಡಲಿಲ್ಲ, ದಾವಣಗೆರೆಯಿಂದ ತುಮಕೂರಿನವರೆಗೆ ಜಯದೇವ ವಿದ್ಯಾರ್ಥಿನಿಲಯದಲ್ಲಿ ಓದಿದವರೆಲ್ಲ ಅಧಿಕಾರಿಗಳಾಗಿದ್ದಾರೆ, ಸಾರ್ವಜನಿಕ ಹಿತಾಸಕ್ತಿ ಕಾಪಾಡಲು ಪ್ರಾರಂಭಿಸಿದ್ದೇ ಮುರುಘಾಶ್ರೀಗಳು. ಜಿ.ಎಸ್.ಬಸವರಾಜು, ಸಂಸದ ಆಧ್ಯಾತ್ಮಿಕ, ಸಾಂಸ್ಕೃತಿಕ ಚಟುವಟಿಕೆಗಳು ಬಸವ ಕೇಂದ್ರದಲ್ಲಿ ನಿರಂತರವಾಗಿ ನಡೆಯುತ್ತಿದ್ದು, ಮುಂದಿನ ದಿನಗಳಲ್ಲಿ ಬಸವಕೇಂದ್ರದ ಆಧ್ಯಾತ್ಮಿಕತೆಯಲ್ಲಿ ನಗರದ ಎಲ್ಲರೂ ಭಾಗವಹಿಸುವಂತಾಗಲಿ. ಜಿ.ಬಿ.ಜ್ಯೋತಿಗಣೇಶ್, ಶಾಸಕ