ಚಿಕ್ಕಮಗಳೂರು: ಸಮಾಜದಲ್ಲಿರುವ ಕಟ್ಟ ಕಡೆಯ ವ್ಯಕ್ತಿಗೆ ಸಾಮಾಜಿಕ ನ್ಯಾಯ ದೊರಕಿದಲ್ಲಿ ಮಾತ್ರ ಸಮ ಸಮಾಜ ನಿರ್ಮಾಣವಾಗಲು ಸಾಧ್ಯ. ಬಸವ ತತ್ವದಲ್ಲಿರುವುದು ಸಹ ಅದೇ ಎಂದು ಅಖಿಲ ಭಾರತ ವೀರಶೈವ ಮಹಾಸಭಾದ ಪ್ರಧಾನ ಕಾರ್ಯದರ್ಶಿ ಈಶ್ವರ ಖಂಡ್ರೆ ಅಭಿಪ್ರಾಯ ವ್ಯಕ್ತಪಡಿಸಿದರು.ನಗರ ಹೊರವಲಯದ ದೊಡ್ಡ ಕುರುಬರಹಳ್ಳಿಯ ಶ್ರೀ ಬಸವ ತತ್ವ ಪೀಠ, ಶ್ರೀ ಬಸವ ಮಂದಿರದ ಶ್ರೀ ಚಂದ್ರಶೇಖರ ಸ್ವಾಮೀಜಿಯವರ 166ನೇ ಜಯಂತಿ ಮಹೋತ್ಸವ ಹಾಗೂ ಲಿಂಗೈಕ್ಯ ಶ್ರೀ ಜಯಚಂದ್ರಶೇಖರ ಸ್ವಾಮೀಜಿಯವರ 25ನೇ ಸಂಸ್ಮರಣೆ ಪ್ರಯುಕ್ತ ಭಾನುವಾರ ಸಂಜೆ ಶ್ರೀ ಮಠದ ಜೆಸಿಎಸ್ ಶಾಲಾ ಆವರಣದಲ್ಲಿ ಆಯೋಜಿಸಿದ್ದ ಸಾಂಸ್ಕøತಿಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅಸಹ್ಯ ಹುಟ್ಟಿಸುವ ಬೆಳವಣಿಗೆ:
ಸಮಾಜದಲ್ಲಿ ಇಂದು ದ್ವೇಷಾಸೂಯೆ, ಸೇಡಿನ ರಾಜಕೀಯ, ಆರೋಪ, ಪ್ರತ್ಯಾರೋಪ ಮಾಡುವ ಪ್ರವೃತ್ತಿ ಹೆಚ್ಚಾಗಿದ್ದು, ಅಸಹ್ಯ ಹುಟ್ಟಿಸುತ್ತದೆ. ಎಲ್ಲ ವ್ಯವಸ್ಥೆ ಕೆಟ್ಟಿದ್ದು, ಇಡೀ ಸಮಾಜವೇ ಕಲುಷಿತವಾಗಿದೆ. ಈ ಬಗ್ಗೆ ಎಲ್ಲರೂ ಚಿಂತನೆ ನಡೆಸಬೇಕು. ಈ ಹಿನ್ನೆಲೆಯಲ್ಲಿ ನಮ್ಮ ಯುವಜನರು ದುರ್ಗುಣ, ದುಶ್ಚಟದಿಂದ ದೂರವಾಗಿ ಸಂಸ್ಕಾರವಂತರಾಗಬೇಕು. ಮಾನಸಿಕವಾಗಿ, ಶಾರೀರಿಕವಾಗಿ ದೃಢವಾಗಿ ಕರೊನಾದಂತಹ ಕಾಯಿಲೆಯಿಂದ ದೂರ ಉಳಿಯಲು ರೋಗ ನಿರೋಧಕ ಶಕ್ತಿ ವರ್ಧಿಸಿಕೊಳ್ಳಬೇಕು. ಮುಖ್ಯವಾಹಿನಿಗೆ ಬರಲು ಬಸವತತ್ವ ಅಳವಡಿಸಿಕೊಳ್ಳಬೇಕು. ಬಸವಾದಿ ಶರಣರ ವಚನಗಳನ್ನು ಓದುವ ಅಭಿರುಚಿ ಬೆಳೆಸಿಕೊಂಡು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು. ಸಮಾಜ ಬದಲಾವಣೆ ಕಾಣಬೇಕಾದರೆ ಪ್ರತಿಯೊಬ್ಬರಲ್ಲಿ ಇಚ್ಛಾಶಕ್ತಿ ಬೆಳೆಯಬೇಕು. ನಾವು ಸಮಾಜ ಯಾವ ರೀತಿ ಬದಲಾವಣೆಯಾಗಬೇಕೆಂದು ಬಯಸುತ್ತೇವೋ ಆ ಬದಲಾವಣೆ ಮೊದಲು ನಮ್ಮಲ್ಲಾಗಬೇಕು. 12ನೇ ಶತಮಾನದಲ್ಲಿ ಬಸವಣ್ಣನವರು ಯಾವ ರೀತಿಯ ಸಮಾಜ ನಿರ್ಮಿಸಬೇಕೆಂದು ಬಯಸಿದ್ದರೋ ಅದನ್ನೇ ಡಾ.ಬಿ.ಆರ್.ಅಂಬೇಡ್ಕರ್ ಸಂವಿಧಾನದಲ್ಲಿ ಅಳವಡಿಸಿ ನಮಗೆ ನೀಡಿದ್ದಾರೆ ಎಂದರು.
ಸರ್ವ ಸಮಾನತೆಗಾಗಿ ಕಲ್ಯಾಣ ಕ್ರಾಂತಿ:
ಜಗತ್ತಿನ ಇತಿಹಾಸದಲ್ಲಿ ಹೆಣ್ಣಿಗಾಗಿ, ಹೊನ್ನಿಗಾಗಿ, ಮಣ್ಣಿಗಾಗಿ-ಅನೇಕ ರಕ್ತಕ್ರಾಂತಿಗಳಾಗಿವೆ. ಆದರೆ ಸರ್ವ ಸಮಾನತೆಗಾಗಿ ನಡೆದಿರುವ ಕ್ರಾಂತಿಯೊಂದಿದ್ದರೆ ಬಸವಣ್ಣನವರ ಕಲ್ಯಾಣ ಕ್ರಾಂತಿ ಎಂದು ಬಣ್ಣಿಸಿದ ಅವರು, ಆ ಕಾಲಘಟ್ಟದಲ್ಲಿ ಸಮಾಜದಲ್ಲಿ ಸಮಾಜದಲ್ಲಿದ್ದ ಮೌಢ್ಯ, ಅಸ್ಪೃಶ್ಯತೆ, ಅನ್ಯಾಯ, ದೌರ್ಜನ್ಯ, ಅತ್ಯಾಚಾರದಂತಹ ಅಂಧಕಾರ ತುಂಬಿದ್ದ ಕಾಲದಲ್ಲಿ ವೈಜ್ಞಾನಿಕ ತಳಹದಿಯ ಮೇಲೆ, ವೈಚಾರಿಕ ಅಂಶಗಳನ್ನು ಇರಿಸಿಕೊಂಡು ಬಸವಣ್ಣನವರು ಬಸವಕಲ್ಯಾಣದಲ್ಲಿ 770 ಶರಣರನ್ನು ಒಳಗೊಂಡ ಅನುಭವ ಮಂಟಪವನ್ನು ರೂಪಿಸಿದರು. ಅದೇ ಜಗತ್ತಿನ ಮೊದಲ ಸಂಸತ್ತು ಎಂದು ಹೇಳಿದರು.
ಬಡವರು ಬಡವರಾಗೇ ಇದ್ದಾರೆ:
21ನೇ ಶತಮಾನದಲ್ಲಿರುವ ನಾವಿಂದು ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ಔದ್ಯೋಗಿಕ, ವೈಜ್ಞಾನಿಕ, ತಂತ್ರಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಮುಂದುವರಿದಿದ್ದರೂ ಈ ದೇಶದಲ್ಲಿ ಬಡವರು ಬಡವರಾಗಿ, ಶ್ರೀಮಂತರು ಶ್ರೀಮಂತರಾಗಿ ಉಳಿದಿದ್ದಾರೆ. ಬೆರಳೆಣಿಕೆ ಮಂದಿ ಆಗರ್ಭ ಶ್ರೀಮಂತರಾಗಿದ್ದಾರೆ. ಈ ನಿಟ್ಟಿನಲ್ಲಿ ವಚನಗಳ ಧ್ಯೇಯ ಹಾಗೂ ಕಾಯಕ ನಿಷ್ಠೆಗೆ ಬದ್ಧರಾಗಬೇಕಾಗುತ್ತದೆ ಎಂದು ಆಶಿಸಿದರು. ಶ್ರೀ ಪುಷ್ಪಗಿರಿ ಮಹಾಸಂಸ್ಥಾನದ ಜಗದ್ಗುರು ಡಾ.ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಜಯಪುರ ವನಶ್ರೀ ಸಂಸ್ಥಾನದ ಜಗದ್ಗುರು ಡಾ.ಬಸವಕುಮಾರ ಸ್ವಾಮೀಜಿ ವಹಿಸಿದ್ದರು. ಶರಣ ದರ್ಶಿನಿ ಕ್ಯಾಲೆಂಡರ್ ಬಿಡುಗಡೆ ಮಾಡಿದ ಬೇಲೂರು ಕ್ಷೇತ್ರದ ಶಾಸಕ ಕೆ.ಎಸ್.ಲಿಂಗೇಶ್ ಮಾತನಾಡಿದರು.
ಪಾಂಡೋಮಟ್ಟಿ ವಿರಕ್ತಮಠದ ಶ್ರೀ ಗುರುಬಸವ ಸ್ವಾಮೀಜಿ, ಗರ್ತಿಕೆರೆ ಬ್ರಹ್ಮಶ್ರೀ ನಾರಾಯಣಗುರು ಆಶ್ರಮದ ಶ್ರೀ ರೇಣುಕಾನಂದ ಸ್ವಾಮೀಜಿ, ಕೋಡಿಹಳ್ಳಿ ಶ್ರೀ ಭೃಂಗೇಶ್ವರ ಮಠದ ಶ್ರೀ ಬಸವ ಭೃಂಗೇಶ್ವರ ಸ್ವಾಮೀಜಿ, ಶ್ರೀ ಬಸವ ತತ್ವ ಪೀಠಾಧ್ಯಕ್ಷ ಶ್ರೀ ಡಾ.ಬಸವ ಮರುಳಸಿದ್ಧ ಸ್ವಾಮೀಜಿ, ಶಂಕರದೇವರ ಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಶಿಕಾರಿಪುರ ವಿರಕ್ತ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ, ಮಾಜಿ ಎಂಎಲ್ಸಿ ಗಾಯತ್ರಿ ಶಾಂತೇಗೌಡ, ಮಾಜಿ ಶಾಸಕರ ವೇದಿಕೆ ಅಧ್ಯಕ್ಷ ಎಚ್.ಎಂ.ಚಂದ್ರಶೇಖರಪ್ಪ, ಸಿಡಿಎ ಅಧ್ಯಕ್ಷ ಸಿ.ಆನಂದ್, ಮಾಜಿ ಅಧ್ಯಕ್ಷ ಎಂ.ಎಲ್.ಮೂರ್ತಿ, ಪ್ರಮುಖರಾದ ಸತೀಶ್ ಮಹಡಿಮನೆ, ಜಿ.ಬೆನಕಪ್ಪ, ರುದ್ರಮುನಿ ಎನ್.ಸಜ್ಜನ್, ಬಿ.ಎಚ್.ಹರೀಶ್, ಡಿ.ಎ.ಶಿವಶಂಕರ್, ಎನ್.ಜೆ.ರಾಜಶೇಖರ್, ಎಚ್.ಎನ್.ಮಹಾರುದ್ರ ಮತ್ತಿತರರಿದ್ದರು.
ಷಟ್ ಸ್ಥಲ ದ್ವಜಾರೋಹಣ:
ಬೆಳಗ್ಗೆ ಷಟ್ ಸ್ಥಲ ದ್ವಜಾರೋಹಣ ಸಿಂದಿಗೆರೆ ಕರಡಿಗವಿ ಮಠದ ಶ್ರೀ ಶಿವಶಂಕರ ಶಿವಯೋಗಿ ನೆರವೇರಿಸಿದರು. ಬಸವ ಮಂದಿರದ ಶ್ರೀ ಬಸವ ಮರುಳಸಿದ್ಧ ಸ್ವಾಮೀಜಿ, ಶಿರಸಿ ರುದ್ರದೇವರ ಮಠದ ಶ್ರೀ ಮಲ್ಲಿಕಾರ್ಜುನಸ್ವಾಮಿ, ಶಿಕಾರಿಪುರ ವಿರಕ್ತ ಮಠದ ಚೆನ್ನಬಸವ ಸ್ವಾಮೀಜಿ, ಶ್ರೀ ಸಪ್ಪೇಸ್ವಾಮಿ ಮಠದ ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಸಮಾಜದ ಮುಖಂಡರಾದ ಎಚ್.ಡಿ.ತಮ್ಮಯ್ಯ, ಜಗದೀಶ ಬಾಬು, ರವಿ, ಮಧುಕುಮಾರ್, ಸದಾಶಿವಪ್ಪ ಮತ್ತಿತರರು ಕಾರ್ಯಕ್ರಮದಲ್ಲಿದ್ದರು.