ಜಿಲ್ಲೆ

ಅರಣ್ಯ ಸಂಪತ್ತು ಮರುಸ್ಥಾಪನೆಗೆ ಪ್ರಯತ್ನ

ವಿವೇಕಾನಂದ ದಾಸನಕೊಪ್ಪ

ಲಕ್ಷ್ಮೇಶ್ವರ: ತಾಲೂಕು ವ್ಯಾಪ್ತಿಯ ಶೆಟ್ಟಿಕೇರಿಯಲ್ಲಿನ ಸಸ್ಯಪಾಲನಾ ಕೇಂದ್ರದಲ್ಲಿ ವಿವಿಧ ಪ್ರಭೇದ, ಜಾತಿಯ ಲಕ್ಷಾಂತರ ಸಸಿಗಳನ್ನು ಬೆಳೆಸಲಾಗಿದ್ದು, ಜೂನ್‌ನಿಂದ ಸಾರ್ವಜನಿಕರಿಗೆ ವಿತರಣೆ, ವಿವಿಧೆಡೆ ನಾಟಿ ಮಾಡಲು ಅರಣ್ಯ ಇಲಾಖೆ ಸಜ್ಜಾಗಿದೆ.

ಸುಮಾರು 30 ಎಕರೆ ವಿಸ್ತೀರ್ಣದ ಶೆಟ್ಟಿಕೇರಿಯ ಕೆರೆಯಂಚಿನ ಅರಣ್ಯ ಪ್ರದೇಶದಲ್ಲಿ ಸಾಮಾಜಿಕ ಮತ್ತು ಪ್ರಾದೇಶಿಕ ಅರಣ್ಯ ವಿಭಾಗದ ಪ್ರತ್ಯೇಕ 2 ಸಸ್ಯಪಾಲನಾ ಕೇಂದ್ರಗಳಿವೆ. ಇಲ್ಲಿನ ಸಿಬ್ಬಂದಿ 6 ತಿಂಗಳಿಂದ ವಿವಿಧ ಜಾತಿಯ ಸಾವಿರಾರು ಸಸಿಗಳನ್ನು ಬೆಳೆಸಿದ್ದಾರೆ.

ಶೆಟ್ಟಿಕೇರಿ ಸಸ್ಯಪಾಲನಾ ಕೇಂದ್ರದಲ್ಲಿ ಬೇವು, ತಪಸಿ, ಹಲಗಲ, ಗುಲ್‌ಮೋಹರ್, ಅಶೋಕ, ಹುಣಸಿ, ಮಹಾಗನಿ, ಶ್ರೀಗಂಧ, ಕಾಡು ಬಾದಾಮಿ, ಬಂಗಾಳಿ, ಕರಿಬೇವು, ನೆಲ್ಲಿ, ಸಾಗವಾನಿ, ನುಗ್ಗಿ, ರೆಂಟ್ರಿ, ಇಲಾತಿ, ಹುಣಸಿ, ಬನ್ನಿ, ಪೇರಲ, ಆಲ, ಮಾವು ಇತರ ಸಸಿಗಳು ನಾಟಿ ಮಾಡಲು ಸಿದ್ಧವಾಗಿವೆ. ಪ್ರಾದೇಶಿಕ ಅರಣ್ಯ ವಲಯದಿಂದ ನೆಡುತೋಪುಗಳಿಗಾಗಿ 67986 ಸಸಿಗಳು, ರೈತರಿಗಾಗಿ 17,392 ಹಾಗೂ ಹಸಿರು ಕರ್ನಾಟಕ ಯೋಜನೆಯಡಿ 1000 ಸೇರಿ ಒಟ್ಟು 86,378 ಸಸಿ ಬೆಳೆಸಲಾಗಿದೆ. ಸಸಿವೊಂದಕ್ಕೆ ಅಳತೆಗನುಗುಣವಾಗಿ 6 ರೂ., 3 ರೂ. ಇದೆ. ಸಾಮಾಜಿಕ ಅರಣ್ಯ ವಲಯದಿಂದ ರಸ್ತೆ ಬದಿ, ಶಾಲೆ ಆವರಣಗಳಲ್ಲಿ ನೆಡಲು 50 ಸಾವಿರಕ್ಕೂ ಹೆಚ್ಚು ಸಸಿಗಳನ್ನು ವಿವಿಧ ಗಾತ್ರದ ಚೀಲದಲ್ಲಿ ಬೆಳೆಸಲಾಗಿದೆ. ರೈತರು, ಸಾರ್ವಜನಿಕರು, ಸರ್ಕಾರಿ ಇಲಾಖೆಗಳು, ಗ್ರಾಪಂ, ತಾಪಂ, ಶಾಲಾ-ಕಾಲೇಜು, ಸಂಘ-ಸಂಸ್ಥೆಗಳವರಿಗೆ ಸಸಿಗಳನ್ನು ಕಡಿಮೆ ದರದಲ್ಲಿ ಕೊಡಲಾಗುತ್ತಿದೆ.

ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 11665 ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಅನೇಕ ಜಾತಿಯ ಗಿಡ ಮರಗಳು, ಔಷಧ ಸಸ್ಯಗಳು ಸೇರಿದಂತೆ ಕುರುಚಲು ಗಿಡಗಳನ್ನು ಹೊಂದಿದೆ. ಪ್ರತಿವರ್ಷ ಮೂಢನಂಬಿಕೆ, ಅಜ್ಞಾನ, ಸ್ವಹಿತಾಸಕ್ತಿ ಮತ್ತು ಪರಿಸರ ಮಹತ್ವದ ಅರಿವು ಇಲ್ಲದ್ದರಿಂದ ಕಿಡಿಗೇಡಿಗಳು ಅರಣ್ಯಕ್ಕೆ ಬೆಂಕಿ ಹಾಕಿ ನಾಶಪಡಿಸುತ್ತಿದ್ದಾರೆ. ಇನ್ನೂ ಬರಗಾಲ, ಆಕಸ್ಮಿಕ ಬೆಂಕಿ, ನಗರೀಕರಣ, ಗಣಿಗಾರಿಕೆ, ಅಕ್ರಮ-ಸಕ್ರಮ ನೀತಿ, ಅಭಿವೃದ್ಧಿ ಕಾರ್ಯಗಳು ಸೇರಿ ಅನೇಕ ಕಾರಣಗಳಿಂದ ಅರಣ್ಯ ಸಂಪತ್ತು ನಾಶವಾಗುವ ಜತೆಗೆ ವ್ಯಾಪ್ತಿಯೂ ಕುಗ್ಗುತ್ತಿದೆ. ಈ ಹಾನಿಯಾದ ಪ್ರದೇಶದಲ್ಲಿ ಅರಣ್ಯ ಮರುಸ್ಥಾಪಿಸುವ ನಿಟ್ಟಿನಲ್ಲಿ ಎರಡು ಸಸ್ಯಪಾಲನಾ ಕೇಂದ್ರ ವರ್ಷವಿಡೀ ಶ್ರಮಿಸುತ್ತಿವೆ. ಇವರ ಕಾರ್ಯದ ಸಾಫಲ್ಯತೆಯಲ್ಲಿ ಸಾರ್ವಜನಿಕರ ಪಾತ್ರ ಮಹತ್ವದ್ದಾಗಿದೆ.

ಅರಣ್ಯ ಇಲಾಖೆ ಪ್ರತಿವರ್ಷ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಹಸಿರೀಕರಣಕ್ಕಾಗಿ ಏನೆಲ್ಲ ಪ್ರಯತ್ನ ಮಾಡುತ್ತಿದೆ. ವನಮಹೋತ್ಸವ ಮುಖಾಂತರ ಲಕ್ಷಗಟ್ಟಲೇ ಸಸಿಗಳನ್ನು ನೆಡುತ್ತಿದೆ. ಆದರೆ, ಅವುಗಳನ್ನು ಸಂರಕ್ಷಿಕೊಳ್ಳುವಲ್ಲಿ ಸಾರ್ವಜನಿಕರು ನಿಷ್ಕಾಳಜಿ ತೋರುತ್ತಿರುವುದರಿಂದ ಸರ್ಕಾರದ ಉದ್ದೇಶಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಪರಿಸರ ಸಂಪತ್ತಿನ ಉಳಿವಿನ ಕುರಿತು ಸಾರ್ವಜನಿಕರಿಗೆ ಜಾಗೃತಿ ಮೂಡಿಸುವ ಜತೆಗೆ ಕಡಿಮೆ ದರದಲ್ಲಿ ಸಸಿಗಳನ್ನು ಕೊಡಬೇಕು. ಅಂದಾಗ ಉದ್ದೇಶವೂ ಸಾಫಲ್ಯವಾಗಿ ಅರಣ್ಯ ಸಂಪತ್ತು ಹೆಚ್ಚುತ್ತದೆ. ಇದರಿಂದ ಉತ್ತಮ ಮಳೆ-ಬೆಳೆ-ಹವಾಮಾನ ಸೃಷ್ಟಿಯಾಗುತ್ತದೆ. ಶಂಕರ ಬ್ಯಾಡಗಿ, ಪರಿಸರ ಪ್ರೇಮಿ ಶೆಟ್ಟಿಕೇರಿ ನರ್ಸರಿಯಲ್ಲಿ ಹಲವು ಜಾತಿಯ 86,378 ಸಸಿಗಳು ಸಿದ್ಧಗೊಂಡಿವೆ. ಸರ್ಕಾರದ ಸುತ್ತೋಲೆಯಂತೆ ಸಸಿಗಳ ದರವನ್ನು 6 ಹಾಗೂ 3 ರೂ.ಗೆ ನಿಗದಿಪಡಿಸಲಾಗಿದೆ. ರೈತರು ಸಸಿ ತೆಗೆದುಕೊಂಡು ಹೋಗಲು ಬರುವಾಗ ಉತಾರ, ಆಧಾರ್ ಕಾರ್ಡ್, ಫೋಟೋ ತರಬೇಕು. ನರ್ಸರಿಯಲ್ಲಿ ಸಿಗುವ ಸಸಿ ನೆಡುವ ಜತೆಗೆ ಅರಣ್ಯ ಇಲಾಖೆ ನೆಟ್ಟ ಸಸಿಗಳ ಸಂರಕ್ಷಿಸಲು ಪ್ರತಿಯೊಬ್ಬರೂ ಜವಾಬ್ದಾರಿಯುತ ಸಂಕಲ್ಪಗೈಯಬೇಕು. ರಾಮಪ್ಪ ಪೂಜಾರ, ಮೇಘನಾ ಎಚ್., ಪ್ರಾದೇಶಿಕ ವಲಯ ಅರಣ್ಯಾಧಿಕಾರಿ