ಮೈಸೂರು: ಔಷಧ ಮಾರಾಟದ ಪರವಾನಗಿಯನ್ನು ಫಾರ್ಮಸಿ ಮಾಡಿದವರಿಗೆ ನೀಡುವುದು ಸೇರಿದಂತೆ ಔಷಧ ಮಾರಾಟಗಾರರ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಶಾಸಕ ಕೆ.ಹರೀಶ್‌ಗೌಡ ಭರವಸೆ ನೀಡಿದರು.
ಮೈಸೂರು ಜಿಲ್ಲಾ ಔಷಧ ವಿತರಕರ ಸಂಘ ಹಾಗೂ ಸುವರ್ಣ ಕರ್ನಾಟಕ ಔಷಧ ವಿತರಕರ ಸಂಘದ ಸಹಯೋಗದಲ್ಲಿ ಶನಿವಾರ ನಗರದಲ್ಲಿ ಆಯೋಜಿಸಿದ್ದ ಎಂಡಿಸಿಡಿಎ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲ್ಲಿ 3 ಸಾವಿರ ಲೈಸೆನ್ಸ್‌ದಾರರು ಇದ್ದು, ಅವರನ್ನು ನಂಬಿದ ಕುಟುಂಬದವರು ಇದ್ದಾರೆ. ಇದೊಂದು ದೊಡ್ಡ ಸಮುದಾಯವಾಗಿದೆ. ಆದರೆ ಲೈಸನ್ಸ್ ಪಡೆಯಲು ಇರುವ ತೊಂದರೆ, ಆನ್‌ಲೈನ್, ಚೈನ್ ಲಿಂಕ್ ಔಷಧ ಮಳಿಕೆ, ಫಾರ್ಮಸಿ ಓದಿಲ್ಲದವರು ಔಷಧದ ಅಂಗಡಿ ಇಡುವುದು ಸರಿಯಲ್ಲ ಎನ್ನುವುದು ನನ್ನ ಗಮನಕ್ಕೆ ಬಂದಿದೆ. ಮುಂದೆ ಇಂತಹ ಸಮಸ್ಯೆ ಆಗದಂತೆ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಕ್ರಮ ಕೈಗೊಳ್ಳಲು ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ನಿಮ್ಮ ಸಮಸ್ಯೆ ಅಹವಾಲು ಆಲಿಸಿರುವೆ. ಇದನ್ನು ಬಗೆಹರಿಸುವ ಕೆಲಸ ಮಾಡಲಾಗುವುದು. ಲೈಸನ್ಸ್ ತೊಂದರೆ ಆದಲ್ಲಿ ಗಮನಕ್ಕೆ ತಂದರೆ ಸರಿಪಡಿಸುವೆ. ಸಂಘದಿಂದ ಹೌಸಿಂಗ್ ಸೊಸೈಟಿ, ಕೋ ಅಪರೇಟಿವ್ ಬ್ಯಾಂಕ್ ಮಾಡಿಕೊಳ್ಳುವುದರಿಂದ ಅನುಕೂಲವಾಗಲಿದೆ. ಇದಕ್ಕೆ ಬೇಕಾದ ಸಹಕಾರವೂ ನೀಡಲಾಗುವುದು ಎಂದು ಹೇಳಿದರು.
ಜಿಲ್ಲಾ ಔಷಧ ವಿತರಕರ ಸಂಘದ ಅಧ್ಯಕ್ಷ ಎಸ್.ಮಂಜುನಾಥ್ ಮಾತನಾಡಿ, ದೇಶದಲ್ಲಿ ಯಾವುದೇ ಬಂದ್, ಹಬ್ಬ, ವಿಶೇಷ ದಿನ ಇದ್ದರೂ ಔಷಧ ಕೇಂದ್ರ ತೆರೆಯುತ್ತವೆ. ಎಲೆಮರೆ ಕಾಯಿಯಂತೆ ನಾವು ಸಹ ಸಮಾಜಕ್ಕೆ ಸೇವೆ ಒದಗಿಸುತ್ತಾ ಬಂದಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸಮಸ್ಯೆ ಬಗೆಹರಿಸಿಕೊಳ್ಳಲು ಈ ಸಮಾವೇಶ ಆಯೋಜಿಸಲಾಗಿದೆ ಎಂದರು.
ಔಷದ ವಿತರಕರಿಗೆ ವ್ಯಾಪಾರದ ತೊಡಕು ಬಹಳಷ್ಟಿದೆ. ಫುಡ್, ಡ್ರಗ್ ಹಾಗೂ ಟ್ರೇಡ್ ಲೈಸೆನ್ಸ್ ತೆಗೆದುಕೊಳ್ಳಬೇಕು. ಇದರಿಂದ ಸಾಕಷ್ಟು ಸಮಸ್ಯೆ ಎದುರಾಗಿದೆ. ಅಲ್ಲದೆ ಆನ್‌ಲೈನ್ ಮೂಲಕ ಔಷಧಗಳ ವ್ಯಾಪಾರ ವಾಡುವುದಕ್ಕೆ ವಿರೋಧವಿದೆ. ಚೈನ್ ಲಿಂಕ್ ಮೆಡಿಕಲ್ ಸ್ಟೋರ್‌ಗಳಿಂದಲೂ ತೊಂದರೆ ಉಂಟಾಗಿದೆ. ಈ ಬಗ್ಗೆ ಗಮನ ಹರಿಸಿ ಸಮಸ್ಯೆ ಬಗೆಹರಿಸಿಕೊಡಬೇಕು. ಸ್ಥಳೀಯರಿಗೆ ಅವಕಾಶ ಒದಗಿಸಬೇಕು ಎಂದು ಮನವಿ ಮಾಡಿದರು.
ಔಷಧ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಚಾರ್ಟರ್ಡ್ ಅಕೌಂಟ್ ವಿಶ್ವಾಸ ಕೀರ್ತಿಕುಮಾರ್ ಪ್ರಾತ್ಯಕ್ಷಿಕೆ ಮೂಲಕ ಮಾಹಿತಿ ನೀಡಿದರು. ಮೈಸೂರು ವಲಯ 1ರ ಸಹಾಯಕ ಡ್ರಗ್ ನಿಯಂತ್ರಕರಾದ ಆಶಾಲತಾ, ಚಾಮರಾಜನಗರ ಸಹಾಯಕ ಡ್ರಗ್ ನಿಯಂತ್ರಕ ಹರೀಶ್, ಡ್ರಗ್ ಇನ್‌ಸ್ಪೆಕ್ಟರ್ ರಮೇಶ್ ನಿಡಾವಣಿ ಇತರರು ಇದ್ದರು.