ನೂತನ ಸಂಸದ ಬಿ.ವೈ.ರಾಘವೇಂದ್ರ ಅವರನ್ನು ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಪಕ್ಷದ ಪರವಾಗಿ ಗಿರೀಶ್ ಪಟೇಲ್ ಸನ್ಮಾನಿಸಿದರು. ಎಸ್.ರುದ್ರೇಗೌಡ, ಎಸ್.ದತ್ತಾತ್ರಿ, ಎಸ್.ಎನ್.ಚನ್ನಬಸಪ್ಪ, ಕೆ.ಬಿ.ಅಶೋಕ ನಾಯ್ಕ ಇದ್ದರು. 
ಜಿಲ್ಲೆ

ಜ್ವಲಂತ ಸಮಸ್ಯೆಗಳ ಪರಿಹಾರಕ್ಕೆ ಶ್ರಮ: ಬಿವೈಆರ್

ಅರವಿಂದ ಅಕ್ಲಾಪುರ

ಶಿವಮೊಗ್ಗ: ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕಾರ್ಯಗಳನ್ನು ರೂಪಿಸುವುದು, ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ನನ್ನ ಮುಂದಿನ ಐದು ವರ್ಷಗಳ ಅಜೆಂಡಾ ಎಂದು ನೂತನ ಸಂಸದ ಬಿ.ವೈ.ರಾಘವೇಂದ್ರ ಹೇಳಿದರು.

ಶರಾವತಿ ಸಂತ್ರಸ್ತರಿಗೆ ಭೂಮಿ ಹಕ್ಕು ನೀಡುವುದು, ಕಂದಾಯ-ಅರಣ್ಯ ಭೂಮಿ ಗೊಂದಲ, ವಿಐಎಸ್‌ಎಲ್ ಪುನಶ್ಚೇತನ ಇವೆಲ್ಲದಕ್ಕೂ ತಾರ್ಕಿಕ ಅಂತ್ಯ ಕಂಡುಕೊಳ್ಳಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನನ್ನ ಗೆಲುವನ್ನು ಕಾರ್ಯಕರ್ತರು, ಸಂಘ ಪರಿವಾರದವರು ಹಾಗೂ ಕ್ಷೇತ್ರದ ಜನರಿಗೆ ಅರ್ಪಿಸುತ್ತೇನೆ. ಮುಂದಿನ ದಿನಗಳಲ್ಲಿ ನರೇಂದ್ರ ಮೋದಿ ಅವರ ಆಶಯಗಳನ್ನು ಪೂರೈಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ದೇಶದಲ್ಲಿ ಸತತ ಮೂರನೇ ಬಾರಿಗೆ ಕಾಂಗ್ರೆಸ್ಸೇತರ ಸರ್ಕಾರ ರಚನೆಯಾಗುತ್ತಿದೆ. ಬಿಜೆಪಿ ಹಾಗೂ ಎನ್‌ಡಿಎ ಮೈತ್ರಿಕೂಟಕ್ಕೆ ನಿರೀಕ್ಷೆಯಷ್ಟು ಸ್ಥಾನಗಳು ಸಿಗಲಿಲ್ಲ. ಬಹುಶಃ ಜನರು ನಮ್ಮಿಂದ ಇನ್ನು ಹೆಚ್ಚಿನ ನಿರೀಕ್ಷೆ ಮಾಡುತ್ತಿರುವಂತಿದೆ. ಮುಂಬರುವ ದಿನಗಳಲ್ಲಿ ಜನರ ನಿರೀಕ್ಷೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ ಎಂದು ತಿಳಿಸಿದರು.
ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ನನಗೆ ಉತ್ತಮ ಮುನ್ನಡೆ ಸಿಕ್ಕಿದೆ. ಆದರೆ ತವರು ಕ್ಷೇತ್ರ ಶಿಕಾರಿಪುರದಲ್ಲಿ ಮತದಾರರು ಬಿಜೆಪಿಯನ್ನು 87 ಸಾವಿರದ ಗಡಿ ದಾಟಿಸುತ್ತಿಲ್ಲ. ಅಷ್ಟು ಸ್ಪಷ್ಟವಾಗಿ ನಮ್ಮ ಹಾಗೂ ಕಾಂಗ್ರೆಸ್ ನಡುವೆ ಗೆರೆ ಕೊರೆದಂತಾಗಿದೆ ಎಂದರು.
ಶಾಸಕ ಎಸ್.ಎನ್.ಚನ್ನಬಸಪ್ಪ, ವಿಧಾನ ಪರಿಷತ್ ಸದಸ್ಯ ಎಸ್.ರುದ್ರೇಗೌಡ, ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್, ನಗರಾಧ್ಯಕ್ಷ ಮೋಹನ್ ರೆಡ್ಡಿ, ಮಾಜಿ ಶಾಸಕರಾದ ಕೆ.ಜಿ.ಕುಮಾರಸ್ವಾಮಿ, ಕೆ.ಬಿ.ಅಶೋಕ ನಾಯ್ಕ, ಪ್ರಮುಖರಾದ ಎಸ್.ದತ್ತಾತ್ರಿ, ಮಾಲತೇಶ್ ಸುದ್ದಿಗೋಷ್ಠಿಯಲ್ಲಿದ್ದರು.