ರಾಯಚೂರಿನಲ್ಲಿ ನೂತನ ಗ್ರಾಮೀಣ ಸಾರಿಗೆ ಬಸ್ ಘಟಕವನ್ನು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಂಗಳವಾರ ಉದ್ಘಾಟಿಸಿದರು. ಗ್ರಾಮೀಣ ಶಾಸಕ ಬಸನಗೌಡ ದದ್ದಲ್, ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಕೆಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಎಚ್.ಸಂತೋಷ, ವಿಭಾಗೀಯ ನಿಯಂತ್ರಣಾಕಾರಿ ಎಂ.ಎಸ್.ಚಂದ್ರಶೇಖರ ಇದ್ದರು. 
ಜಿಲ್ಲೆ

ಜನರಿಗೆ ಸುರಕ್ಷಿತ ಸಾರಿಗೆ ವ್ಯವಸ್ಥೆ ಕಲ್ಪಿಸಲು ಪ್ರಯತ್ನ

ರಾಯಚೂರು: ಜನರಿಗೆ ಸುರಕ್ಷಿತ ಪ್ರಮಾಣ ಹಾಗೂ ಉತ್ತಮ ಸಾರಿಗೆ ವ್ಯವಸ್ಥೆ ಕಲ್ಪಿಸುವ ಹಿತದೃಷ್ಟಿಯಿಂದ ಸರ್ಕಾರ ಸಾರಿಗೆ ವಲಯಕ್ಕೆ ಹಲವಾರು ಸೌಲಭ್ಯಗಳನ್ನು ನೀಡುತ್ತಿದ್ದು, ಹೊಸ ಬಸ್‌ಗಳ ಸೇವೆಯನ್ನು ನೀಡಲಾಗುತ್ತಿದೆ ಎಂದು ಸಾರಿಗೆ ಮತ್ತು ಮುಜರಾಯಿ ಖಾತೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ನಗರದಲ್ಲಿ ಗ್ರಾಮೀಣ ಬಸ್ ಘಟಕ ಉದ್ಘಾಟನೆ ಮತ್ತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 250 ಹೊಸ ಬಸ್‌ಗಳನ್ನು ಮಂಗಳವಾರ ಸಂಜೆ ಲೋಕಾರ್ಪಣೆಗೊಳಿಸಿ ಮಾತನಾಡಿ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಸರ್ಕಾರದಿದ ವಿವಿಧ ಯೋಜನೆಗಳನ್ನು ಜಾರಿಗೆ ತರಲಾಗಿದೆ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಲ್ಲಿ 9 ವಿಭಾಗಗಳು ಕಾರ್ಯನಿರ್ವಹಿಸುತ್ತಿದ್ದು, 52 ಘಟಕಗಳಿವೆ. ಒಟ್ಟು 164 ಬಸ್ ನಿಲ್ದಾಣಗಳಿದ್ದು, ಪ್ರತಿನಿತ್ಯ 17.78 ಲಕ್ಷ ಜನರು ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಜನರಿಗೆ ಅನುಕೂಲ ಕಲ್ಪಿಸಲು ಸುಸಜ್ಜಿತ ಬಸ್‌ಗಳನ್ನು ಒದಗಿಸಲಾಗಿದೆ.
ಶಕ್ತಿ ಯೋಜನೆ ಜಾರಿಯಿಂದ ಮಹಿಳೆಯರಿಗೆ ಸಾಕಷ್ಟು ಅನುಕೂಲವಾಗಿದ್ದು, ರಾಜ್ಯದ 4 ನಿಗಮಗಳಲ್ಲಿ ಶಕ್ತಿ ಯೋಜನೆಯಡಿ 162 ಕೋಟಿ ಬಾರಿ ಮಹಿಳೆಯರು ಉಚಿತವಾಗಿ ಪ್ರಯಾಣ ಮಾಡಿದ್ದು, ಒಟ್ಟು 3,894 ಕೋಟಿ ರೂ. ಟಿಕೆಟ್ ಮೊತ್ತವಾಗಿದೆ. ಜಿಲ್ಲೆಯಲ್ಲಿ ಯೋಜನೆಯಡಿ 2.18 ಕೋಟಿ ಬಾರಿ ಉಚಿತ ಪ್ರಯಾಣ ಮಾಡಿದ್ದಾರೆ ಎಂದು ರಾಮಲಿಂಗಾರೆಡ್ಡಿ ತಿಳಿಸಿದರು.
ರಾಯಚೂರು ಗ್ರಾಮೀಣ ಶಾಸಕ ಬಸನಗೌಡ ದದ್ದಲ್ ಮಾತನಾಡಿ, ಸರ್ಕಾರಿ ಶಕ್ತಿ ಯೋಜನೆ ಜಾರಿಗೊಳಿಸುವ ಮೂಲಕ ಮಹಿಳೆಯರಲ್ಲಿ ಶಕ್ತಿ ತುಂಬಿದೆ. ಸಾರಿಗೆ ನಿಗಮದ ಚಾಲಕರು, ನಿರ್ವಾಹಕರು ಉತ್ತಮ ಹಾಗೂ ಜವಾಬ್ದಾರಿಯಿಂದ ಕಾರ್ಯನಿರ್ವಹಿಸುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ಅಪಘಾತ ರಹಿತ ಚಾಲನೆ ಮಾಡಿದ ಚಾಲಕರಿಗೆ ಬೆಳ್ಳಿ ಪದಕ ನೀಡಿ ಸನ್ಮಾನಿಸಲಾಯಿತು. ಮೃತ ಸಿಬ್ಬಂದಿಗಳ ಅವಲಂಬಿತರಿಗೆ ತಲಾ 10 ಲಕ್ಷ ರೂ.ಗಳ ಪರಿಹಾರದ ಚೆಕ್ ವಿತರಣೆ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಎಪಿಎಂಸಿ ಅಧ್ಯಕ್ಷ ಮಲ್ಲಿಕಾರ್ಜುನ ಗೌಡ, ಉಪಾಧ್ಯಕ್ಷ ಬಷೀರ್ ಅಹ್ಮದ್, ಕೆಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಎಂ.ರಾಚಪ್ಪ, ಮುಖ್ಯ ಸಂಚಾರ ವ್ಯವಸ್ಥಾಪಕ ವಿ.ಎಚ್.ಸಂತೋಷ, ತಾಂತ್ರಿ ಶಿಲ್ಪಿ ಸಂತೋಷ ಗೋಗೇರಿ, ಕಾನೂನು ಅಕಾರಿ ಎಸ್.ಎಸ್.ಭಾವಿಕಟ್ಟಿ, ವಿಭಾಗೀಯ ನಿಯಂತ್ರಣಾಕಾರಿ ಎಂ.ಎಸ್.ಚಂದ್ರಶೇಖರ, ಮುಖಂಡರಾದ ಎ.ವಸಂತಕುಮಾರ, ಶ್ರೀದೇವಿ ನಾಯಕ ಉಪಸ್ಥಿತರಿದ್ದರು.