ಶಿವಮೊಗ್ಗ: ಮುಖ್ಯಮಂತ್ರಿ ಸಿದ್ದರಾಮಯ್ಯ ಮಂಡಿಸಿರುವ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಗೆ ಹೆಚ್ಚು ಒತ್ತು ನೀಡಿರುವುದು ಸ್ಪಷ್ಟವಾಗಿದೆ. ಕಳೆದ ಬಜೆಟ್‌ನಲ್ಲಿ ಅಭಿವೃದ್ಧಿ ಕುಂಠಿತ ಎಂಬ ಭಾವನೆ ಅನೇಕರಲ್ಲಿತ್ತು. ಈ ಬಾರಿ ಎಲ್ಲ ವರ್ಗಗಳಿಗೂ ಅನುದಾನ ನೀಡಲು ಪ್ರಯತ್ನಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಹೇಳಿದರು.
ಕಳೆದ ಬಜೆಟ್‌ನಲ್ಲಿ ಶಿಕ್ಷಣ ಇಲಾಖೆಯ ಮೂಲಸೌಕರ್ಯಕ್ಕೆ ಒತ್ತು ನೀಡಲಾಗಿತ್ತು. ಈ ಬಾರಿ ಬಜೆಟ್‌ನಲ್ಲಿ ಕಲಿಕೆಗೆ ಒತ್ತು ನೀಡಲಾಗಿದೆ. ಮುಂದಿನ ಶೈಕ್ಷಣಿಕ ವರ್ಷದಿಂದ ಶಾಲೆಗಳಲ್ಲಿ ಫೇಶಿಯಲ್ ಹಾಜರಾತಿ ಜಾರಿಗೆ ಬರಲಿದೆ ಎಂದು ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ವರ್ಷ ಜಿಲ್ಲಾಡಳಿತ ಭವನ: ಶಿವಮೊಗ್ಗ ಜಿಲ್ಲಾಡಳಿತ ಭವನ ನಿರ್ಮಾಣ ಹಾಗೂ ಮೆಗ್ಗಾನ್ ಆಸ್ಪತ್ರೆ ಅಭಿವೃದ್ಧಿಗೆ ಬಜೆಟ್‌ನಲ್ಲಿ ಅನುದಾನ ಒದಗಿಸುವಂತೆ ಕೋರಿಕೆ ಸಲ್ಲಿಸಿದ್ದೆ. ಜಿಲ್ಲಾಡಳಿತ ಭವನ ನಿರ್ಮಾಣಕ್ಕೆ ಕಂದಾಯ ಇಲಾಖೆಯಿಂದ 50 ಕೋಟಿ ರೂ. ಬರಲಿದೆ. ಈಗಾಗಲೇ ಜಾಗ ಗುರುತಿಸಿದ್ದು, ನಿರ್ಮಾಣಕ್ಕೆ 200 ಕೋಟಿ ರೂ. ಪ್ರಸ್ತಾವನೆ ಇದೆ. ಗ್ರಾಮೀಣಾಭಿವೃದ್ಧಿ ಇಲಾಖೆಯೂ ಹಣ ನೀಡಲಿದೆ. ಈ ವರ್ಷ ಜಿಲ್ಲಾಡಳಿತ ಭವನ ನಿರ್ಮಾಣ ಕಾಮಗಾರಿ ಆರಂಭವಾಗಲಿದೆ ಎಂದರು.
ಮೆಗ್ಗಾನ್ ಆಸ್ಪತ್ರೆಯಲ್ಲಿ ವ್ಯವಸ್ಥೆ ಸರಿಯಿಲ್ಲ ಎಂಬುದು ನನ್ನ ಗಮನಕ್ಕೂ ಬಂದಿದೆ. ಅದನ್ನು ವೈದ್ಯಕೀಯ ಕಾಲೇಜಿನ ಬೋಧನಾ ಆಸ್ಪತ್ರೆಯಿಂದ ಪ್ರತ್ಯೇಕವಾಗಿಸಲು ಪ್ರಯತ್ನ ಮಾಡುತ್ತಿದ್ದೇನೆ. ಅದು ಸರಿಯಾದರೆ ಮೆಗ್ಗಾನ್‌ಗೆ ಒಂದು ರೂಪ ಬರಲಿದೆ ಎಂದು ತಿಳಿಸಿದರು.