ಕೆ.ಆರ್.ನಗರ: ಸಾಲಿಗ್ರಾಮ ಮತ್ತು ಕೆ.ಆರ್.ನಗರ ತಾಲೂಕು ವ್ಯಾಪ್ತಿಯ 24 ಕೃಷಿ ಪತ್ತಿನ ಸಹಕಾರ ಸಂಘಗಳ ರೈತ ಸದಸ್ಯರಿಗೆ ಸರ್ಕಾರದಿಂದ ದೊರೆಯುವ ಸವಲತ್ತು ತಲುಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಎಂಸಿಡಿಸಿಸಿ ಬ್ಯಾಂಕ್ ನೂತನ ನಿರ್ದೇಶಕ ದೊಡ್ಡಸ್ವಾಮೇಗೌಡ ಹೇಳಿದರು.
ತಾಲೂಕಿನ ಕೆಸ್ತೂರುಕೊಪ್ಪಲು ಗ್ರಾಮದ ತಮ್ಮ ನಿವಾಸದಲ್ಲಿ ಭಾನುವಾರ ಸಾಲಿಗ್ರಾಮ ತಾಲೂಕಿನ ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯವರಿಂದ ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬ್ಯಾಂಕ್‌ನ ನಿರ್ದೇಶಕನಾಗಿ ಆಯ್ಕೆ ಯಾಗಲು ಕಾರಣರಾದ ಪ್ರತಿನಿಧಿಗಳು, ಸಹಕಾರಿಗಳು, ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಬ್ಯಾಂಕ್‌ನ ಮೂಲಕ ಕಳೆದ ಎರಡು ವರ್ಷಗಳಿಂದ ಹೊಸದಾಗಿ ಸಾಲ ಪಡೆಯಲು ಅರ್ಜಿ ಸಲ್ಲಿಸುತ್ತಿರುವ ರೈತರಿಗೆ ಈ ಸಾಲಿನಿಂದ ಸಾಲ ಕೊಡಿಸಲು ಪೂರಕವಾಗುವಂತೆ ಕೆಲಸ ಮಾಡುವ ಜತೆಗೆ ಈ ವಿಚಾರದಲ್ಲಿ ಸಹಕಾರ ನೀಡುವಂತೆ ಮುಖ್ಯಮಂತ್ರಿಗಳು ಮತ್ತು ಸಹಕಾರ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸುವುದಾಗಿ ತಿಳಿಸಿದರು.
ಎರಡು ತಾಲೂಕುಗಳ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ರೈತ ಸದಸ್ಯರನ್ನು ನೋಂದಣಿ ಮಾಡಿಸಿ ಆ ಮೂಲಕ ಸರ್ಕಾರದಿಂದ ದೊರೆಯುವ ಸವಲತ್ತು ದೊರೆಕಿಸಲು ಗಮನ ಹರಿಸಲಾವಗುವುದು. ಜತೆಗೆ ಸದಸ್ಯತ್ವ ಅಭಿಯಾನ ಹಮ್ಮಿಕೊಳ್ಳಲಾಗುವುದು. ಮುಂದಿನ ದಿನಗಳಲ್ಲಿ ಸಂಘಗಳಿಗೆ ಭೇಟಿ ನೀಡಿ, ಅಲ್ಲಿನ ಸಮಸ್ಯೆ ಪರಿಶೀಲಿಸಿ ಅಹವಾಲು ಆಲಿಸಿ ಸಮಸ್ಯೆ ಬಗೆಹರಿಸಲಾಗುವುದು. ಎಲ್ಲ ಸಂಘಗಳಲ್ಲಿಯೂ ರೈತರಿಗೆ ರಸಗೊಬ್ಬರ, ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಕೊಡಿಸಲು ಸಂಬಂಧಿತ ಅಧಿಕಾರಿಗಳೊಂದಿಗೆ ಚರ್ಚಿಸುವುದಾಗಿ ಮಾಹಿತಿ ನೀಡಿದರು.
ಚನ್ನಂಗೆರೆ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ವೈ.ಎಸ್.ನಟರಾಜು, ಉಪಾಧ್ಯಕ್ಷ ಶಂಕರನಾಯಕ, ನಿರ್ದೇಶಕರಾದ ಸಿ.ವೈ.ಅಭಿಲಾಷ್, ಚಲುವಯ್ಯ, ಸಿ.ಆರ್.ರಘುನಾಥ್, ತಮ್ಮೇಗೌಡ, ಸಿ.ಎಚ್.ಕುಮಾರ್, ಪುಟ್ಟೇಗೌಡ, ರೂಪಾ, ಉಷಾ, ಸಿ.ಕೆ.ಮಲ್ಲಿಕಾರ್ಜುನ, ಸೈಯದ್‌ಇಸ್ರಾರ್, ಜಿಲ್ಲಾ ಬ್ಯಾಂಕ್ ಪ್ರತಿನಿಧಿ ಎನ್.ದಿನೇಶ್ ಇದ್ದರು.