ವಿಜಯವಾಣಿ ಸುದ್ದಿಜಾಲ ಧಾರವಾಡ
ಹು-ಧಾ ಮಹಾನಗರ ಪಾಲಿಕೆಯನ್ನು ಆಥಿರ್ಕವಾಗಿ ಸದೃಢಗೊಳಿಸುವುದರ ಜತೆಗೆ ಜನರಿಗೆ ಸಕಲ ಸೌಲಭ್ಯ ಒದಗಿಸಲು ಪ್ರಾಮಾಣಿಕವಾಗಿ ಪ್ರಯತ್ನ ಮಾಡಲಾಗುವುದು ಎಂದು ಪಾಲಿಕೆ ಆಯುಕ್ತ ಡಾ. ಈಶ್ವರ ಉಳ್ಳಾಗಡ್ಡಿ ಹೇಳಿದರು.
ನಗರದ ಧಾರವಾಡ ಜರ್ನಲಿಸ್ಟ್ ಗಿಲ್ಡ್ ವತಿಯಿಂದ ಆಯೋಜಿಸಿದ್ದ ಮಾಧ್ಯಮ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಬೆಂಗಳೂರಿನ ನಂತರ ಹು-ಧಾ ನಗರಗಳೇ ರಾಜ್ಯದ ಅತೀ ದೊಡ್ಡ ನಗರ. ಮುಂದಿನ 50 ವರ್ಷಗಳನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಯೋಜನೆಗಳ ರೂಪುರೇಷೆ ಸಿದ್ಧಪಡಿಸಲಾಗುತ್ತಿದೆ. ಪಾರಂಪರಿಕ ಕಸ ನಿರ್ವಹಣೆ, ನೂತನ ಬಡಾವಣೆಗಳ ವ್ಯವಸ್ಥಿತ ಅಭಿವೃದ್ಧಿ, ಎಲ್ಇಡಿ ಬಲ್ಬ್ಗಳ ಅಳವಡಿಕೆ, ಉದ್ಯಾನವನಗಳ ಅಭಿವೃದ್ಧಿ ಸೇರಿ ಎಲ್ಲದಕ್ಕೂ ಆದ್ಯತೆ ನೀಡಲಾಗಿದ್ದು, ಕಳೆದ ಒಂದು ವರ್ಷದಲ್ಲಿ 500 ಕೋಟಿ ರೂ.ಗೂ ಅಧಿಕ ಹಣವನ್ನು ಪಾಲಿಕೆ ವ್ಯಾಪ್ತಿಯಲ್ಲಿ ವ್ಯಯಿಸಲಾಗಿದೆ ಎಂದರು.
ಇನ್ನೊಂದು ತಿಂಗಳಲ್ಲಿ ಅವಳಿನಗರದಲ್ಲಿ ಅತಿಕ್ರಮಣಗೊಂಡ ಪಾರ್ಕಿಂಗ್ ಸ್ಥಳ ತೆರವು ಪುನಃ ಆರಂಭವಾಗಲಿದೆ. ಈಗಾಗಲೇ ಈ ಬಗ್ಗೆ ಸಮೀಕ್ಷೆ ನಡೆದಿದೆ. ಬಡಾವಣೆಗಳ ಕಟ್ಟಡಗಳ ಎದುರು ಮಾತ್ರವಲ್ಲದೆ, ನಗರದ ಮುಖ್ಯ ಪ್ರದೇಶ, ಜನನಿಬಿಡ ಕಡೆಗಳಲ್ಲೂ ಜಾಗವನ್ನು ಅತಿಕ್ರಮಿಸಲಾಗಿದೆ. ಸಂಬಂಧಿಸಿದವರಿಗೆ ಒಂದು ವಾರ ಸಮಯ ನೀಡಿದ ಬಳಿಕ ತೆರವು ನಡೆಸಲಾಗುವುದು ಎಂದರು.
ಇನ್ನೊಂದು ವರ್ಷದಲ್ಲಿ ಅವಳಿನಗರದಲ್ಲಿ ಸಂಗ್ರಹವಾಗಿರುವ ಪಾರಂಪರಿಕ ತ್ಯಾಜ್ಯ ಖಾಲಿ ಮಾಡಲು ಯೋಜನೆ ರೂಪಿಸಲಾಗಿದೆ. ಧಾರವಾಡ ಹೊಸಯಲ್ಲಾಪುರ ಸ್ಮಾಶನ ಬಳಿ ಹಾಗೂ ಹುಬ್ಬಳ್ಳಿಯ ಕರಾಬ ಮಡ್ಡಿಯಲ್ಲಿ ಟನ್ ಗಟ್ಟಲೆ ತ್ಯಾಜ್ಯವಿದೆ. ಇದರ ಜತೆಗೆ ನಿತ್ಯ 450 ಟನ್ ಕಸ ಬರುತ್ತಿದೆ. ಹೀಗಾಗಿ ಇಂಧೋರ ಮಾದರಿಯಲ್ಲಿ ಕಸ ನಿರ್ವಹಣೆ ಟಕ ಆರಂಭಿಸಲಾಗುವುದು. ಇದರಿಂದ ವರ್ಷದಲ್ಲಿ ಪಾರಂಪರಿಕ ಕಸದ ಗುಡ್ಡ ಕರಗಿಸಲಾಗುವುದು ಎಂದು ಭರವಸೆ ನೀಡಿದರು.
ಆಸ್ತಿ ಖರೀದಿಸುವಾಗ ಎಚ್ಚರವಿರಲಿ: ಇ- ಸ್ವತ್ತು ಯೋಜನೆಗೆ ವೇಗ ಕೊಡುವುದರ ಜತೆಗೆ ಹು-ಧಾ ಅವಳಿನಗರದಲ್ಲಿ ಹೊಸ ಆಸ್ತಿ ಖರೀದಿಗೆ ಕೃಷಿಯೇತರ ಜಮೀನು ಪತ್ರ (ಎನ್ಎ), ಬಡಾವಣೆ ಪರವಾನಗಿ ಪತ್ರ (ಹುಡಾ ಒಪ್ಪಿಗೆ) ಹಾಗೂ ಕಮ್ಮಿ ಜಾಸ್ತಿ ಪತ್ರಕ (ಕೆಜೆಪಿ) ಕಡ್ಡಾಯಗೊಳಿಸಲಾಗುವುದು. ಇಷ್ಟೆಲ್ಲ ದಾಖಲೆಗಳಿದ್ದರೆ ಮಾತ್ರ ಖರೀದಿ ಮಾಡಬಹುದು. ಆಸ್ತಿಗಳ ಅತಿಕ್ರಮಣ, ಪರಭಾರೆ, ಅನಧೀಕೃತ ಬಡಾವಣೆಗಳ ತಡೆಗೆ ಈ ವ್ಯವಸ್ಥೆ ಜಾರಿಯಾಗಿದೆ. ಹೀಗಾಗಿ ಜನರು ಆಸ್ತಿಗಳ ಖರೀದಿ ಸಮಯದಲ್ಲಿ ಎಚ್ಚರ ವಹಿಸಬೇಕು. ಬರೀ ಬಾಂಡ್ ಮೇಲೆ ನಿವೇಶನ ಖರೀದಿಯಂತಹ ದುಸ್ಸಾಹಸಕ್ಕೆ ಕೈ ಹಾಕಬಾರದು ಎಂದು ಮನವಿ ಮಾಡಿದರು.
ಗಿಲ್ಡ್ ಅಧ್ಯಕ್ಷ ಡಾ. ಬಸವರಾಜ ಹೊಂಗಲ, ಕಾರ್ಯದರ್ಶಿ ನಿಜಗುಣಿ ದಿಂಡಲಕೊಪ್ಪ, ಸದಸ್ಯರು, ಇತರರು ಇದ್ದರು.