ಮೈಸೂರು: ನವೀನ ಅತಿಥೇಯ ಸಸ್ಯ ಸಂತಾನೋತ್ಪತ್ತಿ ತಂತ್ರಗಳಿಂದ ರೇಷ್ಮೆ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುವತ್ತ ಒಂದು ಹೆಜ್ಜೆ ಎಂಬ ವಿಷಯದ ಬಗ್ಗೆ ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯಲ್ಲಿ ಬುಧವಾರ ಎರಡು ದಿನಗಳ ಕಾರ್ಯಾಗಾರ ಆಯೋಜಿಸಲಾಗಿತ್ತು.
ಕೇಂದ್ರ ರೇಷ್ಮೆ ಮಂಡಳಿ ಸದಸ್ಯ ಕಾರ್ಯದರ್ಶಿ ಪಿ.ಶಿವಕುಮಾರ್ ಮಾತನಾಡಿ, ಆತಿಥೇಯ ಸಸ್ಯ ಸಂತಾನೋತ್ಪತ್ತಿ ತಂತ್ರಜ್ಞಾನದ ಬಗ್ಗೆ ತಿಳಿಸಿ, ರೇಷ್ಮೆ ಉತ್ಪಾದನೆಯನ್ನು ದ್ವಿಗುಣಗೊಳಿಸುವಲ್ಲಿ ಹವಾಮಾನ ನಿರೋಧಕ ಮತ್ತು ಹೆಚ್ಚಿನ ಇಳುವರಿ ನೀಡುವ ಹಿಪ್ಪುನೇರಳೆ ಮತ್ತು ವನ್ಯ ಸಸ್ಯ ತಳಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವಿದೆ ಎಂದರು.
2030ರ ವೇಳೆಗೆ ಭಾರತದ ಕಚ್ಚಾ ರೇಷ್ಮೆ ಉತ್ಪಾದನೆಯನ್ನು 54 ಸಾವಿರ ಮೆಟ್ರಿಕ್ ಟನ್‌ಗೆ ಹೆಚ್ಚಿಸುವ ಮಹತ್ವಾಕಾಂಕ್ಷೆಯ ಗುರಿಯನ್ನು ತಲಪಲು ಎಲ್ಲರೂ ಶ್ರಮಿಸಲಾಗುವುದು ಎಂದ ಅವರು, ಮುಂದಿನ ದಿನಗಳಲ್ಲಿ ಮೈಸೂರಿನ ಸಂಸ್ಥೆಯಲ್ಲಿ ರಾಷ್ಟ್ರೀಯ ವಸ್ತು ಸಂಗ್ರಹಾಲಯವನ್ನು ಸ್ಥಾಪಿಸುವ ಬಗ್ಗೆ ಮಾಹಿತಿ ನೀಡಿದರು.
ಬಾಗಲಕೋಟೆ ತೋಟಗಾರಿಕೆ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ.ಎಸ್.ಬಿ.ದಂಡಿನ್ ಮಾತನಾಡಿ, ಜೈವಿಕ ತಂತ್ರಜ್ಞಾನ, ಕೃತಕ ಬುದ್ಧಿಮತ್ತೆ ಮತ್ತು ನ್ಯಾನೋ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕು. ಇವುಗಳನ್ನು ಬಳಸುವುದರಿಂದ ದೊಡ್ಡ ಪ್ರಮಾಣದಲ್ಲಿ ವಾಣಿಜ್ಯೀಕರಣ ಮಾಡಬಹುದು ಎಂದರು.
ಕೇಂದ್ರ ರೇಷ್ಮೆ ಮಂಡಳಿ ನಿರ್ದೇಶಕ (ತಾಂತ್ರಿಕ) ಡಾ.ಎಸ್, ಮಂಥಿರಾ ಮೂರ್ತಿ ಮಾತನಾಡಿ, ಉತ್ತಮ ಗುಣಮಟ್ಟದ ಎಲೆ ಮತ್ತು ಹೆಚ್ಚಿನ ಇಳುವರಿ ನೀಡುವ ಹೊಸ ಆತಿಥೇಯ ಸಸ್ಯ ಮಿಶ್ರತಳಿಗಳನ್ನು ಅಭಿವೃದ್ಧಿ ಪಡಿಸುವ ಅಗತ್ಯತೆ ತಿಳಿಸಿಕೊಟ್ಟರು.
ಮುಂದಿನ 5 ರಿಂದ 10 ವರ್ಷಗಳವರೆಗೆ ನಾವೀನ್ಯತೆ ಮತ್ತು ಸುಸ್ಥಿರತೆಯ ಮೇಲೆ ಕೇಂದ್ರೀಕರಿಸುವ ಕಾರ್ಯತಂತ್ರದ ಮಾರ್ಗಸೂಚಿಯನ್ನು ರೂಪಿಸಲು ವಿಜ್ಞಾನಿಗಳಿಗೆ ಸಲಹೆ ನೀಡಿದರು. ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆ ನಿರ್ದೇಶಕ ಡಾ.ಎಸ್.ಗಾಂಧಿದಾಸ್, ಕೇಂದ್ರ ರೇಷ್ಮೆ ಮಂಡಳಿಯ ಅಂಗ ಸಂಸ್ಥೆಗಳ ವಿವಿಧ ನಿರ್ದೇಶಕರು, ಕೇಂದ್ರ ರೇಷ್ಮೆ ಸಂಶೋಧನೆ ಮತ್ತು ತರಬೇತಿ ಸಂಸ್ಥೆಯ ವಿಜ್ಞಾನಿಗಳು, ಬೇರೆ ರಾಜ್ಯ ಸಂಸ್ಥೆಗಳ ವಿಜ್ಞಾನಿಗಳು ಭಾಗವಹಿಸಿ ಪ್ರಬಂಧ ಮಂಡಿಸಿದರು.