ಜಿಲ್ಲೆ

ಶಾಸಕ ಎನ್.ಎಚ್. ಕೋನರಡ್ಡಿ ಭರವಸೆ; ವರ್ಷದೊಳಗೆ ಓಪಿಎಸ್ ಜಾರಿಗೆ ಪ್ರಯತ್ನ

ಮಂಜುನಾಥ ಅಂಗಡಿ

ವಿಜಯವಾಣಿ ಸುದ್ದಿಜಾಲ ಧಾರವಾಡ

ರಾಜ್ಯ ಸರ್ಕಾರಿ ನೌಕರರ ಬಹುದಿನಗಳ ಬೇಡಿಕೆಯಾಗಿರುವ ಎನ್‌ಪಿಎಸ್ ರದ್ದುಪಡಿಸಿ ಒಪಿಎಸ್ ಜಾರಿಗೊಳಿಸಲು ಸರ್ಕಾರ ಬದ್ಧವಾಗಿದೆ. ಈ ವರ್ಷಾಂತ್ಯಕ್ಕೆ ರಾಜ್ಯ ಸರ್ಕಾರಿ ನೌಕರರಿಗೆ ಒಪಿಎಸ್ ಜಾರಿಗೆ ಪ್ರಯತ್ನಿಸಲಾಗುವುದು ಎಂದು ಶಾಸಕ ಎನ್.ಎಚ್. ಕೋನರಡ್ಡಿ ಹೇಳಿದರು.

ನಗರದ ಆರ್.ಎನ್. ಶೆಟ್ಟಿ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರಿ ನೌಕರ ಸಂಘದ ಜಿಲ್ಲಾ ಶಾಖೆಯ ಸಹಯೋಗದಲ್ಲಿ ಶನಿವಾರ ಆಯೋಜಿಸಿದ್ದ ರಾಜ್ಯ ಸರ್ಕಾರಿ ನೌಕರರ ಜಿಲ್ಲಾ ಮಟ್ಟದ ಕ್ರೀಡಾಕೂಟ ಉದ್ಘಾಟಿಸಿ ಅವರು ಮಾತನಾಡಿದರು.

ಸರ್ಕಾರಿ ನೌಕರರ ಹಿತದೃಷ್ಟಿಯಿಂದ ರಾಜ್ಯ ಸರ್ಕಾರ ಎನ್‌ಪಿಎಸ್ ರದ್ದುಗೊಳಿಸಿ ಒಪಿಎಸ್ ಜಾರಿಗೆ ತರಲು ತೀರ್ಮಾನಿಸಿದೆ. ಅಧ್ಯಯನ ಸಮಿತಿಯು ಮುಖ್ಯಮಂತ್ರಿಗೆ ವರದಿ ಸಲ್ಲಿಸಿದ ತಕ್ಷಣ ಅಧ್ಯಯನ ಮಾಡಿ ನಿರ್ಧಾರ ಪ್ರಕಟಿಸಲಿದೆ. ನೌಕರರು ಕೆಲಸದ ಒತ್ತಡದಲ್ಲಿ ಕೌಟುಂಬಿಕ ಜೀವನ, ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಬಾರದು ಎಂದರು.

ಜಿಲ್ಲಾಧಿಕಾರಿ ದಿವ್ಯ ಪ್ರಭು ಮಾತನಾಡಿ, ಜನಪರ, ಜನಕಲ್ಯಾಣ ಕಾರ್ಯಕ್ರಮಗಳಿಂದ ಸರ್ಕಾರಿ ನೌಕರರ ಕಾರ್ಯ ಚಟುವಟಿಕೆಗಳ ಮೇಲೆ ಸಾಕಷ್ಟು ಒತ್ತಡ ಉಂಟಾಗುತ್ತಿದೆ. ಪ್ರತಿದಿನ ಯೋಗ, ವ್ಯಾಯಾಮ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು.

ನೌಕರ ಸಂಘದ ಜಿಲ್ಲಾಧ್ಯಕ್ಷ ಎಸ್.ಎಫ್. ಸಿದ್ದನಗೌಡರ ಪ್ರಾಸ್ತಾವಿಕವಾಗಿ ಮಾತನಾಡಿದರು. ಜಿಲ್ಲಾ ಪಂಚಾಯಿತಿ ಸಿಇಒ ಭುವನೇಶ ಪಾಟೀಲ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ಮಂಜುನಾಥಸ್ವಾಮಿ ಎಂ.ಟಿ., ಇತರರಿದ್ದರು. ಮಲ್ಲಿಕಾರ್ಜುನ ಸೊಲಗಿ ಸ್ವಾಗತಿಸಿದರು. ಸುರೇಶ ಜಟ್ಟೆನವರ ಕ್ರೀಡಾ ಪ್ರತಿಜ್ಞಾವಿಽ ಬೋಽಸಿದರು. ಮಂಜುನಾಥ ಯಡಳ್ಳಿ ಕ್ರೀಡಾ ಸಾಧಕರಿಗೆ ಪ್ರಶಂಸಾ ಪತ್ರ ವಿತರಿಸಿದರು. ಪಿ.ಎಫ್. ಗುಡೇನಕಟ್ಟಿ ವಂದಿಸಿದರು. ರಮೇಶ ಲಿಂಗದಾಳ ನಿರೂಪಿಸಿದರು.