ಜಿಲ್ಲೆ

ಗ್ಯಾರಂಟಿ ಸಮರ್ಪಕ ಅನುಷ್ಠಾನಕ್ಕೆ ಪ್ರಯತ್ನ

ಅರಸೀಕೆರೆ : ರಾಜ್ಯ ಸರ್ಕಾರ ಘೋಷಿಸಿರುವ ಪಂಚ ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಿದ್ದೇನೆ ಎಂದು ಸಮಿತಿಯ ನೂತನ ಅಧ್ಯಕ್ಷ ಗೀಜಿಹಳ್ಳಿ ಧರ್ಮಶೇಖರ್ ಹೇಳಿದರು.


ತಾಲೂಕು ಪಂಚಾಯಿತಿ ಕಚೇರಿ ಅವರಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪದಗ್ರಹಣ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಅನ್ನಭಾಗ್ಯ ಯೋಜನೆಯಡಿ ಬಿಪಿಎಲ್ ಪಡಿತರ ಚೀಟಿ ಹೊಂದಿದವರಿಗೆ ಐದು ಕೆಜಿ ಅಕ್ಕಿ ನೀಡಲಾಗುತ್ತಿದೆ. ಜತೆಗೆ ಹೆಚ್ಚುವರಿ ಅಕ್ಕಿ ಬದಲು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುವ ಕೆಲಸ ನಡೆದಿದೆ. ಕೇಂದ್ರ ಸರ್ಕಾರ ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಲು ಒಪ್ಪಿದ್ದು, ಶೀಘ್ರದಲ್ಲೇ ವಿತರಣೆಯಾಗಲಿದೆ. ಯಾರೊಬ್ಬರೂ ಆತಂಕಗೊಳ್ಳುವ ಅಗತ್ಯ ಇಲ್ಲ ಎಂದರು.


ಅರಸೀಕೆರೆ ವಿಧಾನಸಭಾ ಕ್ಷೇತ್ರದಲ್ಲಿ 73 ಸಾವಿರಕ್ಕೂ ಹೆಚ್ಚಿನ ಮಹಿಳೆಯರ ಖಾತೆಗೆ ಗೃಹಲಕ್ಷ್ಮೀ ಹಣ ಪಾವತಿಯಾಗುತ್ತಿದೆ. ತಾಂತ್ರಿಕ ಕಾರಣದಿಂದ ಕೆಲವರಿಗೆ ನಗದು ಜಮೆ ಮಾಡಲು ಸಾಧ್ಯವಾಗಿಲ್ಲ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಗೊಂದಲ ಸರಿಪಡಿಸುವ ಭರವಸೆ ನೀಡಿದ್ದಾರೆ. ವಿಜಯದಶಮಿ ವೇಳೆಗೆ ಬಾಕಿ ಮೊತ್ತ ಪಾವತಿಯಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


ಗೃಹಜ್ಯೋತಿ ಹಾಗೂ ಶಕ್ತಿ ಯೋಜನೆ ಯಶಸ್ವಿಯಾಗಿದ್ದು, ಎಲ್ಲರೂ ಸವಲತ್ತು ಪಡೆಯುತ್ತಿದ್ದಾರೆ. ವಿದ್ಯಾನಿಧಿ ಕೂಡ ಪದವೀಧರರನ್ನು ತಲುಪುತ್ತಿದೆ. ಯೋಜನೆಗಳ ತ್ವರಿತ ಅನುಷ್ಠಾನ ಸಂಬಂಧ ಅಧಿಕಾರಿಗಳ ಸಭೆ ನಡಸಿ, ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳನ್ನು ಜನರಿಗೆ ತಲುಪಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.


ಗಂಡಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೆಟ್ರೋ ಬಾಬು ಮಾತನಾಡಿ. ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್ ಚುನಾವಣಾ ಪ್ರಣಾಳಿಕೆಯಲ್ಲಿ ನುಡಿದಂತೆ ಪಂಚ ಗ್ಯಾರಂಟಿ ಜಾರಿ ಮಾಡಿದ್ದು, ನೂತನ ಪದಾಧಿಕಾರಿಗಳು ಲೋಪವಾಗದಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದರು.


ಕರ್ನಾಟಕ ಗೃಹಮಂಡಳಿ ಅಧ್ಯಕ್ಷ, ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಹತ್ತು ವರ್ಷದ ಅವಧಿಯಲ್ಲಿ ಯಾವುದೇ ರೈತಪರ ಶಾಶ್ವತ ಯೋಜನೆ ರೂಪಿಸಿಲ್ಲ ಎಂದು ಟೀಕಿಸಿದರು.


ಉಪಾಧ್ಯಕ್ಷರಾಗಿ ಜವನಪ್ಪ, ಕಮಲಮ್ಮ, ಬಸವರಾಜು, ಶಿರಾಜ್ ಅಲಿ ಬೇಗ್, ಕೃಷ್ಣೇಗೌಡ, ಪ್ರದೀಪ್ ಕುಮಾರ್, ಪರಮೇಶ, ಪುರುಷೋತ್ತಮ, ಚಾಂದ್ ಪಾಷಾ, ವಿರೂಪಾಕ್ಷ, ಸತೀಶ, ಸಿದ್ದಪ್ಪ, ಶಿವಕುಮಾರ ಹಾಗೂ ಲೋಕೇಶ್ ಸದಸ್ಯರಾಗಿ ಅಧಿಕಾರ ಸ್ವೀಕರಿಸಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್, ಜಿಪಂ ಮಾಜಿ ಸದಸ್ಯ ಬಿಳಿಚೌಡಯ್ಯ, ಗುತ್ತಿಗೆದಾರ ಹೊನ್ನಕಟ್ಟ ಚಂದ್ರಶೇಖರ್, ತಾಪಂ ಇಒ ಸತೀಶ್ ಇತರರು ಇದ್ದರು.